ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಜನರಿಲ್ಲದೆ ಭಣಗುಡುತ್ತಿವೆ ಪ್ರವಾಸಿ ತಾಣಗಳು

ರಂಗನತಿಟ್ಟು ಪಕ್ಷಿಧಾಮದ ಸೌಂದರ್ಯ ಸವಿಯುವವರಿಲ್ಲ, ದೇವಾಲಯಗಳಲ್ಲಿ ಭಕ್ತಾದಿಗಳಿಲ್ಲ
Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ಮಂಡ್ಯ: ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು ಈಗ ಜನರಿಲ್ಲದೇ ಬಣಗುಡುತ್ತಿವೆ. ಲಾಕ್‌ಡೌನ್‌ ತೆರವುಗೊಂಡಿದ್ದರೂ ತಾಣಗಳಿಗೆ ಜನರು ಬಾರದ ಕಾರಣ ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.

ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕಗಳು ನಿತ್ಯ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಇದರಿಂದ ಸಾವಿರಾರು ವ್ಯಾಪಾರಿಗಳು, ಆಟೊ, ಟ್ಯಾಕ್ಸಿ ಚಾಲಕರು ಬದುಕು ಕಟ್ಟಿಕೊಂಡಿದ್ದರು. ದರಿಯಾ ದೌಲತ್‌, ರಂಗನಾಥ ಸ್ವಾಮಿ ದೇವಾಲಯ, ನಿಮಿಷಾಂಬಾ ದೇವಾಲಯ, ಸಂಗಮ, ಜುಮ್ಮಾ ಮಸೀದಿ ಮುಂತಾದೆಡೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಬರುತ್ತಿದ್ದರು.

ಆದರೆ ಕೊರೊನಾ ಸೋಂಕಿನಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 99ರಷ್ಟು ಸ್ಥಗಿತಗೊಂಡಿದೆ. ದರಿಯಾ ದೌಲತ್‌ಗೆ ನಿತ್ಯ 2 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದರು. ನಿತ್ಯ ₹ 50 ಸಾವಿರಕ್ಕೂ ಹೆಚ್ಚು ಹಣ ಟಿಕೆಟ್‌ ಮೂಲಕ ಸಂಗ್ರಹವಾಗುತ್ತಿತ್ತು. ಆದರೆ ಈದ ಹಣ ಸಂಗ್ರಹ ₹ 500ಕ್ಕೆ ಕುಸಿದಿದೆ. ಟಿಪ್ಪು ಅರಮನೆ, ಟಿಪ್ಪು ಸಮಾಧಿ, ಸಂಗಮ, ಗೋಸಾಯಿ ಘಾಟ್‌, ಶಸ್ತ್ರಾಗಾರ, ಮಹದೇವಪುರ, ಕರಿಘಟ್ಟ ಮುಂತಾದ ಸ್ಥಳಗಳು ಜನರಿಲ್ಲದೆ ಭಣಗುಡುತ್ತಿವೆ.

ಪ್ರವಾಸಿ ಮಾರ್ಗದರ್ಶಕರಿಗೆ ಕೆಲಸ ಇಲ್ಲದಂತಾಗಿದೆ. ಆಟಿಕೆಗಳ ಅಂಗಡಿಕಾರರು, ಟಾಂಗಾ ನಡೆಸುವವರು, ಕುದುರೆ ಸಾಕಣೆದಾರರು, ಟ್ಯಾಕ್ಸಿ ಚಾಲಕರ ಬದುಕು ನಿಂತ ನೀರಾಗಿದ್ದು ಮೊದಲಿನ ಸ್ಥಿತಿ ಯಾವಾಗ ಬರುತ್ತದೋ ಎಂದು ಎದುರು ನೋಡುತ್ತಿದ್ದಾರೆ. ರಂಗನಾಥಸ್ವಾಮಿ ದೇವಾಲಯದ ಮುಂದಿರುವ ಅಂಗಡಿ ಸಾಲುಗಳಲ್ಲಿ ವಹಿವಾಟು ನಡೆಯದೇ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಶ್ರೀರಂಗಪಟ್ಟಣ ತಾಲ್ಲೂಕಿನ ವಿಶೇಷವಾಗಿರುವ ಸಪೋಟ ಹಣ್ಣು ಮಾರಾಟ ಮಾಡಿಕೊಂಡು ಅಪಾರ ಸಂಖ್ಯೆಯ ಜನರು ಬದುಕು ಕಟ್ಟಿಕೊಂಡಿದ್ದರು. ರೈತರೇ ನೇರವಾಗಿ ಹಣ್ಣು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು. ಆದರೆ ಈಗ ಸಪೋಟ ಬೆಳೆದ ರೈತರು, ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ’ ಎಂದರು ಹಣ್ಣನ ವ್ಯಾಪಾರಿ ರಾಮಕೃಷ್ಣ ನೋವು ವ್ಯಕ್ತಪಡಿಸಿದರು.

ರಂಗನತಿಟ್ಟು ಪಕ್ಷಿಧಾಮ: ಜಿಟಿಜಿಟಿ ಮಳೆಯ ನಡುವೆ ರಂಗನತಿಟ್ಟು ಪಕ್ಷಿಧಾಮದ ಸೌಂದರ್ಯ ಇಮ್ಮಡಿಯಾಗಿದೆ. ಆದರೆ ಈ ಸೌಂದರ್ಯ ಸವಿಯಲು ಪ್ರವಾಸಿಗರೇ ಇಲ್ಲವಾಗಿದ್ದಾರೆ. ಕಳೆದೊಂದು ತಿಂಗಳಿಂದ ಸಂಗ್ರಹವಾಗಿರುವ ಹಣ ಮೊದಲು ಒಂದು ದಿನದಲ್ಲಿ ಸಂಗ್ರಹವಾಗುತ್ತಿತ್ತು. ಮೊದಲು ಸರಾಸರಿ ನಿತ್ಯ ₹ 2 ಲಕ್ಷ ಹಣ ಸಂಗ್ರಹವಾಗುತ್ತಿತ್ತು. ಆದರೆ ಈಗ ಕೇವಲ ₹ 1ರಿಂದ ₹ 5 ಸಾವಿರಕ್ಕೆ ಕುಸಿದಿದೆ.

ಮೇಲುಕೋಟೆಗೂ ಜನರಿಲ್ಲ: ಮೇಲುಕೋಟೆಯಲ್ಲೂ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ಆಚರಣೆ ಮಾಡಲಾಗುತ್ತಿದೆ. ಐತಿಹಾಸಿಕ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಿತ್ಯ ಹಲವು ಧಾರ್ಮಿಕ ಉತ್ಸವಗಳು ನಡೆಯುತ್ತಿದ್ದರೂ ಭಕ್ತಾದಿಗಳು ಇಲ್ಲವಾಗಿದ್ದಾರೆ. ಜನರಿಂದ ಗಿಜಿಗುಡುತ್ತಿದ್ದ ಯೋಗಾನರಸಿಂಹಸ್ವಾಮಿ ಬೆಟ್ಟ, ಕಲ್ಯಾಣಿ, ಅಕ್ಕ–ತಂಗಿ ಕೊಳಗಳ ಬಳಿ ಜನರು ಇಲ್ಲವಾಗಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪ್ರವಾಸಿಗರು ಬರುತ್ತಿಲ್ಲ. ಇದರಿಂದ ಪರೋಕ್ಷವಾಗಿ ಬಡ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ಮೇಲೆಕೋಟೆಯಲ್ಲಿ ಹಣ್ಣು, ತೆಂಗಿನಕಾಯಿ ವ್ಯಾಪಾರ ಮಾಡುವ ಶ್ರೀನಿವಾಸ್‌ ಹೇಳಿದರು.

ಬೃಂದಾವನ ಉದ್ಯಾನಕ್ಕೆ ಪ್ರವೇಶವಿಲ್ಲ
ಪ್ರವಾಸಿಗರ ಕೊರತೆಯಿಂದಾಗಿ ಮಾರ್ಚ್‌ 20ರ ನಂತರ ಕೆಆರ್‌ಎಸ್‌ ಜಲಾಶಯದ ಬೃಂದಾವನ ಉದ್ಯಾನವನ್ನು ಬಂದ್‌ ಮಾಡಲಾಗಿದೆ. ಬೃಂದಾವನ ನಿರ್ವಹಣೆ ಮಾಡುವ ಗುತ್ತಿಗೆದಾರ ಕಾವೇರಿ ನೀರಾವರಿ ನಿಗಮಕ್ಕೆ ಪ್ರತಿ ತಿಂಗಳು ₹ 1.5 ಕೋಟಿ ಹಣ ಸಂದಾಯ ಮಾಡುತ್ತಿದ್ದರು ಉದ್ಯಾನ ಬಂದ್‌ ಆಗಿರುವ ಕಾರಣ ಅಷ್ಟೂ ಹಣ ನಿಗಮಕ್ಕೆ ಬರುತ್ತಿಲ್ಲ.

‘ಬೃಂದಾವನ ಗಾರ್ಡನ್‌ಗೆ ಹೊರರಾಜ್ಯಗಳ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಈಗ ಹೊರರಾಜ್ಯ ಸಂಚಾರ ಸ್ಥಗಿತಗೊಂಡಿರುವ ಕಾರಣ ಪ್ರವಾಸಿಗರ ಇಲ್ಲವಾಗಿದ್ದಾರೆ. ಇಡೀ ಬೃಂದಾವನ ಉದ್ಯಾನ ವಿದ್ಯುತ್‌ ಮೇಲೆ ಅವಲಂಬಿತವಾಗಿರುತ್ತದೆ. ವಿದ್ಯುಚ್ಛಕ್ತಿ ಹಣವೂ ಬಾರದ ಕಾರಣ ಉದ್ಯಾನ ಸ್ಥಗಿತಗೊಳಿಸಲಾಗಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

**

ಕೊರೊನಾ ಸೋಂಕಿನಿಂದಾಗಿ ಪ್ರವಾಸೋದ್ಯಮ ನೆಲಕಚ್ಚಿದೆ. ಚಾಲಕರು, ವ್ಯಾಪಾರಿಗಳ ಕಷ್ಟ ಹೇಳತೀರದಾಗಿದೆ. ಮುಂದೆ ಪರಿಸ್ಥಿತಿ ಸುಧಾರಿಸಬಹುದು ಎಂದು ಎದುರು ನೋಡುತ್ತಿದ್ದೇವೆ.
-ಹರೀಶ್‌, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT