ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಗೃಹಗಳಿಗೆ ಬೇಕಿದೆ ಮೊದಲು ಚಿಕಿತ್ಸೆ

ಮದ್ದೂರು ತಾಲ್ಲೂಕಿನಲ್ಲಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲು ವೈದ್ಯರ ಹರಸಹಾಸ
Last Updated 14 ಜೂನ್ 2021, 5:14 IST
ಅಕ್ಷರ ಗಾತ್ರ

ಮದ್ದೂರು: ಕೋವಿಡ್‌ ದುರಿತ ಕಾಲದಲ್ಲಿ ತಾಲ್ಲೂಕಿನ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ, ಸಹಾಯಕರ ಸಮಸ್ಯೆ ಇಲ್ಲ. ಆದರೆ, ಆರೋಗ್ಯ ಕೇಂದ್ರಗಳ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ವಸತಿ ಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದು, ವಾಸಕ್ಕೆ ಯೋಗ್ಯವಿಲ್ಲವಾಗಿದೆ. ಜನರಿಗೆ ತುರ್ತು ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.

ತಾಲ್ಲೂಕು ಕೇಂದ್ರದಿಂದ ದೂರ ಇರುವ ಆರೋಗ್ಯ ಕೇಂದ್ರ ಸ್ಥಾನದಲ್ಲಿ ಇದ್ದು ಸೂಕ್ತ ಚಿಕಿತ್ಸೆ ಲಭ್ಯವಾಗುವ ನಿಟ್ಟಿನಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಆರೋಗ್ಯ ಕೇಂದ್ರಗಳ ಸಹಾಯಕಿಯರ ವಸತಿ ಗೃಹಗಳು ಶಿಥಿಲಾವಸ್ಥೆ ತಲುಪಿದ್ದು, ಇವುಗಳಿಗೆ ಮೊದಲು ಚಿಕಿತ್ಸೆ ನೀಡುವ ಮೂಲಕ ಗ್ರಾಮಾರೋಗ್ಯವನ್ನು ಸುಧಾರಿಸಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಆರೋಗ್ಯದಲ್ಲಿ ಏರು ಪೇರು ಆದಾಗ ತಾಲ್ಲೂಕು ಕೇಂದ್ರದಲ್ಲಿ ಆಸ್ಪತ್ರೆ, ಖಾಸಗಿ ಕ್ಲಿನಿಕ್‌ಗಳು ಲಭ್ಯವಿರುತ್ತವೆ. ಆದರೆ ಹಳ್ಳಿಗಳಲ್ಲಿ ಬಹುತೇಕ ಮಂದಿ ಆರೋಗ್ಯ ಕೇಂದ್ರಗಳ ಮೇಲೆ ಅವಲಂಬಿತರಾಗಿರುತ್ತಾರೆ. ರಾತ್ರಿ ವೇಳೆ ಉಳಿಯಲು ನಿರ್ಮಿಸಿರುವ ವಸತಿ ಗೃಹಗಳು ಶಿಥಿಲಗೊಂಡಿರುವುದರಿಂದ ಆರೋಗ್ಯ ಕೇಂದ್ರದ ಕಿರಿಯ ಸಹಾಯ ಕಿರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಸಾರ್ವಜನಿಕರು ಚಿಕಿತ್ಸೆಗಾಗಿ ಪಕ್ಕದ ಊರಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಆತಗೂರು ಹೋಬಳಿಯ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಪ್ಪ ಹೋಬಳಿಗೆ ಸೇರಿದ ಮರಳಿಗ, ಬಿದರಕೋಟೆ, ಹೊಸಕೆರೆ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ವಸತಿ ಗೃಹಗಳು ಬಳಕೆಗೆ ಬಾರದಂತಾಗಿವೆ. ಕೇಂದ್ರದ ಆವರಣದಲ್ಲಿನ ಶಿಥಿಲಾವಸ್ಥೆ ಕಟ್ಟಡಗಳು ವಿಷ ಜಂತುಗಳ ವಾಸ ಸ್ಥಾನವಾಗಿದ್ದು, ಇದರಿಂದ ವೈದ್ಯರು ಸೇರಿದಂತೆ ಆರೋಗ್ಯ ಸಹಾಯಕಿಯರು ಕೇಂದ್ರ ಸ್ಥಾನದಲ್ಲಿ ಇರಲು ಆಗದ ಪರಿಸ್ಥತಿ ನಿರ್ಮಾಣವಾಗಿದೆ. ನಮಗೆ ನೀಡಿರುವ ವಸತಿ ಗೃಹಗಳು ಸರಿ ಇದ್ದರೆ ನಾವು ಇಲ್ಲೇ ಉಳಿದುಕೊಂಡು ಸೇವೆ ನೀಡಬಹುದು ಎಂದು ಸಹಾಯಕಿಯೊಬ್ಬರು ಅಲವತ್ತುಕೊಂಡರು.

ಕೊಪ್ಪ ಹೋಬಳಿಯ ಕೆಲವು ಕಡೆ ಮಹಿಳಾ ಸಹಾಯಕಿಯರು ಇದ್ದು, ಲಸಿಕೆ ಪಡೆಯಲು ಗ್ರಾಮೀಣ ಭಾಗದ ಜನರು ಹರ ಸಾಹಸ ಪಡೆಬೇಕಾಗಿದೆ. ಮದ್ದೂರು ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿವಿ ಮತ್ತು ಮೂಗು, ಫಿಜಿಷಿಯನ್ ಸೇರಿದಂತೆ 10 ಮಂದಿ ವೈದ್ಯರು ಇದ್ದು, ಮೂಳೆ ತಜ್ಞ ವೈದ್ಯರ ಕೊರತೆಯಿದೆ. ಆರೋಗ್ಯ ಸಹಾಯಕಿಯರು, ಸಹಾಯಕರು, ಫಾರ್ಮಸಿಸ್ಟ್‌ಗಳು ಹಾಗೂ ಡಿ ಗ್ರೂಪ್ ನೌಕರರು ಇದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕೋವಿಡ್ ಕೇರ್ ಕೇಂದ್ರ ಸೇರಿದಂತೆ ಪಟ್ಟಣದ ಇನ್ನೆರಡು ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ, ವೈದ್ಯರನ್ನು ನೇಮಕ ಮಾಡುವ ಮೂಲಕ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಶೇ 50ರಷ್ಟು ಬೆಡ್‌ಗಳು ಖಾಲಿಯಾಗಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಭಾರತೀನಗರದಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರ ಇದ್ದು, ತಾಲ್ಲೂಕಿನಾದ್ಯಂತ ಒಟ್ಟು 18 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಎಲ್ಲ ಕಡೆ ವೈದ್ಯರು ಇದ್ದು, ಆರು ಹಿರಿಯ ಆರೋಗ್ಯ ಸಹಾಯಕಿಯರ ಕೊರತೆ ಇದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT