ಶನಿವಾರ, ಜೂನ್ 25, 2022
21 °C
ಬಗೆಬಗೆಯ ಹಲಸಿನ ಹಣ್ಣಿಗೆ ಮನಸೋತ ಜನರು, ವ್ಯಾಪಾರ ಭರಾಟೆ ಜೋರು

ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣು

ಹಾರೋಹಳ್ಳಿ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಹಲಸಿನ ಹಣ್ಣು ಕಂಡರೆ ಯಾರಿಗಾದರೂ ಬಾಯಲ್ಲಿ ನೀರೂರದೆ ಇರದು. ಹಲಸಿನ ಕಾಯಿ ಮೇಲ್ಭಾಗದಲ್ಲಿ ಒರಟಾದರೂ ಒಳಗೆ ಮೃದುವಾದ ಹಣ್ಣು ಸವಿಯಲು ಬಲು ರುಚಿಕರ.

ಬಿಳಿ, ಹಳದಿ, ಹೆಬ್ಬು, ಚಂದ್ರ, ಅಂಬು, ಬಿಳಿ ತೊಳೆ ಹಲಸಿನ ಹಣ್ಣುಗಳಿವೆ. ಅಂಬು ಹಲಸಿನ ಹಣ್ಣು ಕೊಡಗು, ಹೆಬ್ಬು ಹಲಸು ಸಕಲೇಶಪುರ ವ್ಯಾಪ್ತಿಯಲ್ಲಿ ಹೆಸರುವಾಸಿ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಚಂದ್ರ ತೊಳೆ ಹಲಸಿನ ಹಣ್ಣನ್ನು ಹೆಚ್ಚಾಗಿ ಬೆಳೆಲಾಗುತ್ತದೆ. ಚಂದ್ರ ತೊಳೆ ಹಲಸಿನ ಹಣ್ಣು ಬಲು ರುಚಿಕರ. ನೋಡುವುದಕ್ಕೂ ತುಂಬ ಆಕರ್ಷಕ.

ಹಲಸಿನ ಹಣ್ಣು ತಿನ್ನುವುದಕ್ಕೆ ಅಷ್ಟೆ ಅಲ್ಲದೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಚಿಪ್ಸ್‌, ಹಪ್ಪಳ, ದೋಸೆ, ಪಾನಕ, ಕೇಸರಿಬಾತ್‌, ಪಾಯಸ, ಕಡುಬು, ಸಿರಾ, ಹಲ್ವಾ, ಪಕೋಡ ಸೇರಿದಂತೆ ವಿವಿಧ ಬಗೆ ಖಾದ್ಯಗಳನ್ನು ತಯಾರಿಸಬಹುದು. ಹಲಸಿನ ಕಾಯಿ ಪಲ್ಯ ಸಹ ಮಾಡಬಹುದು. ಹಲಸಿನ ಹಣ್ಣಿನ ಬೀಜವನ್ನು ಸುಟ್ಟುಕೊಂಡು ಹಾಗೂ ಸಾರು ಮಾಡಿಕೊಂಡು ತಿನ್ನುತ್ತಾರೆ.

‘ಹಸಿದ ಹಲಸು ಉಂಡ ಮಾವು’ಎಂಬ ಗಾದೆಯಂತೆ ಮಾವಿನ ಹಣ್ಣನ್ನು ಊಟ ಮಾಡಿದ ನಂತರ ತಿನ್ನಬೇಕು. ಹಲಸಿನ ಹಣ್ಣನ್ನು ಹಸಿದು ತಿಂದರೆ ಚೆನ್ನ. ಹಲಸಿನ ಹಣ್ಣಿನ ರಸಾಯನವನ್ನು ಚಪ್ಪರಿಸಿಕೊಂಡು ತಿಂದರೆ ಅದರ ರುಚಿಯೇ ಬೇರೆ.

ಡಿಸೆಂಬರ್‌ನಲ್ಲಿ ಪ್ರಾರಂಭ ಗೊಳ್ಳುವ ಹಲಸಿನ ಸುಗ್ಗಿ ಜುಲೈನಲ್ಲಿ ಮುಕ್ತಾಯಗೊಳ್ಳುತ್ತದೆ. ಮಾರುಕಟ್ಟೆ ಗಳಿಗಿಂತ ನಗರ, ಪಟ್ಟಣ, ಹೆದ್ದಾರಿ ಹಾಗೂ ರಸ್ತೆ ಬದಿಯಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಬಲು ಜೋರಾಗಿ ನಡೆಯುತ್ತದೆ. ಉಂಡೆ ಹಣ್ಣಿನ ಮಾರಾಟಕ್ಕಿಂತ ಹಲಸಿನ ಹಣ್ಣಿನ ಬಿಡಿ ಬಿಡಿ ತೊಳೆ ಮಾರಾಟ ಮಾಡಿದರೆ ಲಾಭ ಹೆಚ್ಚು ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಜಕ್ಕನಹಳ್ಳಿ ವೃತ್ತದಲ್ಲಿ ವ್ಯಾಪಾರ ಜೋರು

ಪಾಂಡವಪುರ ತಾಲ್ಲೂಕಿನ ಜಕ್ಕನಳ್ಳಿ ಸರ್ಕಲ್‌ನಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಬಲು ಜೋರಾಗಿ ನಡೆಯುತ್ತದೆ. ಮೈಸೂರು– ಬೀದರ್ ಹೆದ್ದಾರಿ, ಮಂಡ್ಯ– ಕೆ.ಆರ್.ಪೇಟೆ– ಹಾಸನ ಹಾಗೂ ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಮುಖ್ಯ ರಸ್ತೆ ಸಂಪರ್ಕಿಸುವ ಸರ್ಕಲ್‌ನಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಭರಾಟೆ ಜೋರು. ಈ ಭಾಗದ ಕಾಡೇನಹಳ್ಳಿ, ಕದಲಗೆರೆ, ನಾರಾಯಣಪುರ, ಜಕ್ಕನಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ರೈತರು ಹಲಸಿನ ಮರಗಳನ್ನು ಬೆಳೆಸಿದ್ದಾರೆ. ಹಲಸಿನ ಹಣ್ಣಿನ ಗಾತ್ರ, ತಳಿಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಲಾಗುತ್ತದೆ. ಮೇಲುಕೋಟೆಯ ಚಲುವನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಜಕ್ಕನಹಳ್ಳಿ ಸರ್ಕಲ್‌ನಲ್ಲಿ ಹಲಸಿನ ಹಣ್ಣನ್ನು ತಿಂದು ಚಪ್ಪರಿಸಿಯೇ ಹೋಗುತ್ತಾರೆ. ಇಲ್ಲಿನ ವ್ಯಾಪಾರಸ್ಥರು ಹಲಸಿನ ಹಣ್ಣಿನ ತೊಳೆಗಳನ್ನು ತಟ್ಟೆಗಳಲ್ಲಿ ಇಟ್ಟುಕೊಂಡು ಬಸ್‌, ಕಾರು ಸೇರಿದಂತೆ ವಿವಿಧ ವಾಹನಗಳ ಬಳಿ ಹೋಗಿ ಮಾರಾಟ ಮಾಡುತ್ತಾರೆ.

**

ತಂದೆಯ ಕಾಲದಿಂದಲೂ ಹಲಸಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇವೆ. ಉಂಡೆ ಹಲಸಿನ ಹಣ್ಣನ್ನು ರೈತರಿಂದ ಖರೀದಿಸಿ ತೊಳೆ ಗಳನ್ನು ಇಲ್ಲಿ ಮಾರಾಟ ಮಾಡುತ್ತೇವೆ.
- ಮಂಜು, ಹಲಸಿನ ಹಣ್ಣಿನ ವ್ಯಾಪಾರಿ

**

ಜಕ್ಕನಹಳ್ಳಿ ಸರ್ಕಲ್‌ನಲ್ಲಿ ಸಿಗುವ ಹಲಸಿನ ಹಣ್ಣು ತಿನ್ನಲು ಬಲು ರುಚಿಕರವಾಗಿರುತ್ತದೆ. ಮೇಲುಕೋಟೆಗೆ ಬಂದಾಗಲೆಲ್ಲಾ ಇಲ್ಲಿ ಸಿಗುವ ಹಣ್ಣನ್ನು ತಿಂದು ಹೋಗುತ್ತೇವೆ.
- ಪ್ರೇಮಾ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು