ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ ಅರಳಲಿ: ಇತಿಹಾಸ ನಿರ್ಮಾಣವಾಗಲಿ

ವಿಶ್ವಕರ್ಮ ಸಮಾವೇಶದಲ್ಲಿ ಬಿಜೆಪಿ ಯುವ ಮುಖಂಡ ಬಿ.ವೈ.ವಿಜಯೇಂದ್ರ ಅಭಿಮತ
Last Updated 4 ಡಿಸೆಂಬರ್ 2019, 11:57 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ‘ಶಾಸಕರ ಆಯ್ಕೆಗೆ ಉಪ ಚುನಾವಣೆ ನಡೆಯುತ್ತಿಲ್ಲ. ಸಚಿವರನ್ನು ಆಯ್ಕೆ ಮಾಡಲು ಕೆ.ಆರ್‌.ಪೇಟೆಯಲ್ಲಿ ಚುನಾವಣೆ ನಡೆಯುತ್ತಿದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಲಿದ್ದು, ಹೊಸ ಇತಿಹಾಸ ನಿರ್ಮಾಣವಾಗಲಿದೆ’ ಎಂದು ಬಿಜೆಪಿ ಯುವ ಮುಖಂಡ ಬಿ.ವೈ.ವಿಜಯೇಂದ್ರ ಹೇಳಿದರು.

ಪ್ರಚಾರದ ಅಂತಿಮ ದಿನವಾದ ಮಂಗಳವಾರ, ಪಟ್ಟಣದಲ್ಲಿ ನಡೆದ ವಿಶ್ವಕರ್ಮ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಕಂಡಿಲ್ಲ ಎಂಬ ಕೊರಗು ಮುಖ್ಯಮಂತ್ರಿಗೆ ಮೊದಲಿನಿಂದಲೂ ಇತ್ತು. ಆದರೆ, ಈಗ ಆ ಕೊರಗು ನೀಗಲಿದ್ದು, ಜಿಲ್ಲೆಯಲ್ಲಿ ಕಮಲ ಅರಳಲಿದೆ. ನನ್ನ ತಂದೆಯವರ ಆಸೆ ಈಡೇರುವ ಸಮಯ ಬಂದಿದೆ. ಜನ್ಮಭೂಮಿಯಲ್ಲಿ ಕಮಲ ಅರಳುವುದು ನಿಶ್ಚಯವಾಗಿದೆ. ಜೆಡಿಎಸ್‌, ಕಾಂಗ್ರೆಸ್ ಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ ಕ್ಷೇತ್ರದ ಪ್ರಬುದ್ಧ ಮತದಾರರು ಯಡಿಯೂರಪ್ಪ ಅವರ ಕೈಬಲಪಡಿಸುತ್ತಾರೆ’ ಎಂದು ಹೇಳಿದರು.

‘ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ನಾರಾಯಣಗೌಡರನ್ನು ಜನರು ಆಶೀರ್ವದಿಸಿ ಶಾಸಕರನ್ನಾಗಿ ಆಯ್ಕೆ ಮಾಡಿದರೆ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಯಾಗಿ ಕೆಲಸ ಮಾಡಲಿದ್ದಾರೆ. ಆ ಮೂಲಕ ಕ್ಷೇತ್ರ ಅಭಿವೃದ್ಧಿ ಪಥದತ್ತ ಮುನ್ನಡೆಯಲಿದೆ. ಜನರು ನೀಡುವ ಮತ ಯಡಿಯೂರಪ್ಪ ಅವರಿಗೆ ನೀಡುವ ಮತವಾಗಿದೆ. ತಮ್ಮ ವೃತ್ತಿ ಕೌಶಲದಿಂದ ಸಮಾಜವನ್ನು ಮುನ್ನಡೆಸುತ್ತಿರುವ ವಿಶ್ವಕರ್ಮ ಸಮಾಜದ ಬಂಧುಗಳು ತಪ್ಪದೇ ಈ ಬಾರಿ ಬಿಜೆಪಿ ಬೆಂಬಲಿಸಬೇಕು’ ಎಂದರು.

‘ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಕೆಆರ್‌ಎಸ್‌, ಹೇಮಾವತಿ ಎರಡೂ ಜಲಾಶಯ ಗಳಿಂದ ನೀರು ಪಡೆಯುವ ಸೌಲಭ್ಯವಿದೆ. ಆದರೆ, ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರಗಳು ನೀರಾವರಿ ಯೋಜನೆ ಗಳನ್ನು ಜಾರಿ ಗೊಳಿಸಲು ಸಾಧ್ಯವಾಗಿಲ್ಲ. ಹಲವು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎಂದರು.

ವಿಶ್ವಕರ್ಮ ಸಮಾಜದ ಮುಖಂಡ, ಬಿಜೆಪಿ ಸಹ ವಕ್ತಾರ ರಘು ಕೌಟಿಲ್ಯ ಮಾತನಾಡಿ, ‘ನವ ಕೆ.ಆರ್‌.ಪೇಟೆ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದ ಅಡಿಯಲ್ಲಿ ಎಲ್ಲಾ ವರ್ಗಗಳ ಜನರಿಗೂ ಸಮಾನ ಸೌಲಭ್ಯ ನೀಡಲಿದೆ’ ಎಂದು ಹೇಳಿದರು.

ವಿಶ್ವಕರ್ಮ ಜನಾಂಗದ ಅಧ್ಯಕ್ಷ ಕುಮಾರಸ್ವಾಮಿ, ಶೀಳನೆರೆ ಸಿದ್ದೇಶ್, ಈಶ್ವರಾಚಾರ್, ನಾಗಪ್ಪಾಚಾರ್, ಗಾಯತ್ರಿ, ಅನುಸೂಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT