ಶುಕ್ರವಾರ, ಏಪ್ರಿಲ್ 16, 2021
31 °C
ಗುತ್ತಲು ಕರೆ ಕಲುಷಿತ, ಮೀನುಗಳ ಮಾರಣಹೋಮ, ರೈತರಿಗೆ ರೋಗಭೀತಿ

ಹೆಸರಿಗಷ್ಟೇ ಕೊಳಚೆ ನೀರು ಶುದ್ಧೀಕರಣ ಘಟಕ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ಸಮರ್ಪಕವಾಗಿ ಶುದ್ಧೀಕರಣಗೊಳ್ಳದ ಪರಿಣಾಮ ನಗರದ ಹೊರವಲಯದ  ಕೆರೆ, ಹೆಬ್ಬಾಳ ಕಲುಷಿತಗೊಳ್ಳುತ್ತಿವೆ. ಅದರಲ್ಲೂ ಗುತ್ತಲು ಕರೆ ನೀರು ವಿಷಾಯುಕ್ತಗೊಂಡಿದ್ದು ಸಸ್ಯಸಂಕುಲ ನಾಶವಾಗಿದೆ, ಮೀನುಗಳು ಮಾರಣಹೋಮವಾಗಿದೆ, ಅಕ್ಕಪಕ್ಕದ ನಿವಾಸಿಗಳಿಗೆ ರೋಗಭೀತಿ ಎದುರಾಗಿದೆ.

ಪ್ರತಿನಿತ್ಯ ನಗರದಲ್ಲಿ 200 ಲಕ್ಷ ಲೀಟರ್‌ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಕೊಳಚೆ ನೀರು ಶುದ್ಧೀಕರಣಗೊಳಿಸಲು ನಗರದ ಹೊರವಲಯದ ಯತ್ತಗದಹಳ್ಳಿ ಹಾಗೂ ಚಿಕ್ಕೇಗೌಡನದೊಡ್ಡಿ (ಬಿ.ಟಿ.ಲಲಿತಾ ನಾಯಕ್‌ ಬಡಾವಣೆ)ಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟಕಗಳಲ್ಲಿ ಸಮರ್ಪಕವಾಗಿ ಕೊಳಚೆ ಶುದ್ಧೀಕರಣಗೊಳ್ಳದ ಪರಿಣಾಮ ತ್ಯಾಜ್ಯ ನೇರವಾಗಿ ಕೆರೆಗಳ ಒಡಲು ಸೇರುತ್ತಿದೆ.

ಚಾಮುಂಡೇಶ್ವರಿ ನಗರ, ಕಾವೇರಿ ನಗರ, ಮರೀಗೌಡ ಬಡಾವಣೆ, ಗಾಂಧಿನಗರ, ಸುಭಾಷ್‌ ನಗರ ಬಡಾವಣೆಗಳ ಕೊಳಚೆ ನೀರು ಯತ್ತಗದಹಳ್ಳಿ ಕೊಳಚೆ ಶುದ್ಧೀಕರಣ ಘಟಕ ಸೇರಬೇಕು. ಆದರೆ ಘಟಕದಲ್ಲಿ ಶುದ್ಧೀಕರಣ ಕಾರ್ಯ ನಡೆಯದ ಕಾರಣ ಬಡಾವಣೆಗಳ ನೀರು ನೇರವಾಗಿ ಗುತ್ತಲು ಕೆರೆ ಸೇರುತ್ತಿದೆ. ಅಲ್ಲಿಂದ ಮದ್ದೂರು ತಾಲ್ಲೂಕಿನ ಸೂಳೆಕರೆ ಸೇರುತ್ತಿರುವ ಈ ಕೊಳಚೆ ಅಲ್ಲಿಯ ಜಲಚರ ಹಾಗೂ ಅಚ್ಚುಕಟ್ಟುದಾರ ರೈತರಿಗೆ ರೋಗಭೀತಿ ತಂದೊಡ್ಡಿದೆ.

ಚಿಕ್ಕೇಗೌಡನದೊಡ್ಡಿಯಲ್ಲಿರುವ ಶುದ್ಧೀಕರಣ ಘಟಕವೂ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು ಅಲ್ಲಿಯ ನೀರು ಹೆಬ್ಬಾಳ ಸೇರುತ್ತಿದೆ. ಕಳೆದೊಂದು ದಶಕದಿಂದಲೂ ಯತ್ತಗದಹಳ್ಳಿ ಶುದ್ಧೀಕರಣ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಈ ಘಟಕ ಪಾಳು ಕಟ್ಟಡದಂತಾಗಿದ್ದು, ದುರ್ವಾಸನೆ ಕಿಲೋ ಮೀಟರ್‌ವರೆಗೂ ಹಬ್ಬಿದೆ. ಶುದ್ಧೀಕರಣ ಘಟಕ ಇದ್ದರೂ ಒಳಚರಂಡಿಯನ್ನು ನೇರವಾಗಿ ಗುತ್ತಲು ಕೆರೆಗೆ ಸಂಪರ್ಕಿಸಲಾಗಿದೆ.

ಯತ್ತಗದಹಳ್ಳಿ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಈ ಬಗ್ಗೆ ನಗರಸಭೆ, ಜಲಮಂಡಳಿ ಅಧಿಕಾರಿಗಳನ್ನು ಕೇಳಿದರೆ ‘ಮೋಟರ್‌ ಕೆಟ್ಟಿದೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ನಿಂತಲ್ಲೇ ನಿಂತಿರುವ ಕೊಳಚೆ ನೀರಿನಿಂದಾಗಿ ಘಟಕದ ಆವರಣ ಸೊಳ್ಳೆಗಳ ವಾಸಸ್ಥಾನವಾಗಿದೆ. ಆ ಭಾಗದಲ್ಲಿ ಓಡಾಡುವ ಜನರು ಸದಾ ಮೂಗುಮುಚ್ಚಿ ಓಡಾಡುತ್ತಾರೆ.

‘ಗುತ್ತಲು ಕರೆಯಲ್ಲಿ ಮಹಿಳೆಯರು ಸದಾ ಬಟ್ಟೆ ಹೊಗೆಯುತ್ತಿದ್ದರು, ರೈತರು ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದರು. ಸದಾ ಮೀನು ದೊರೆಯುತ್ತಿದ್ದವು. ಆದರೆ ಈಗ ಯಾವುದಕ್ಕೂ ಬಳಕೆಯಾಗುತ್ತಿಲ್ಲ. ಜಾನುವಾರುಗಳು ಆ ನೀರನ್ನು ಮೂಸಿಯೂ ನೋಡುವುದಿಲ್ಲ. ಕೊಳಚೆ ನೀರಿನಿಂದಾಗಿ ಎಲ್ಲೆಡೆ ಕತ್ತೆಕಿವಿ ಗಿಡ ಬೆಳೆದುಕೊಂಡಿದೆ. ಅಲ್ಲಿ ಓಡಾಡಿದರೂ ತುರಿಕೆಯಾಗುತ್ತದೆ’ ಎಂದು ಯತ್ತಗದಹಳ್ಳಿಯ ಶ್ರೀನಿವಾಸ್‌ ಹೇಳಿದರು.

ಅಂತರ್ಜಲವೂ ಕಲುಷಿತ: ಗುತ್ತಲು ಕೆರೆಗೆ ದಶಕದಿಂದಲೂ ಕೊಳಚೆ ನೀರು ಸೇರುತ್ತಿರುವ ಕಾರಣ ಸುತ್ತಮುತ್ತಲ ಬಡಾವಣೆಗಳಲ್ಲಿ ಅಂತರ್ಜಲವೂ ಕಲುಷಿತಗೊಂಡಿದೆ. ಆ ಭಾಗದ ಜನರು ಕೊಳವೆ ಬಾವಿ ನೀರು ಕುಡಿಯುವುದನ್ನೇ ಬಿಟ್ಟಿದ್ದಾರೆ. ಹೊರಗಿನಿಂದ ಆರ್‌ಒ ನೀರು ತರಿಸಿಕೊಂಡು ಕುಡಿಯುತ್ತಿದ್ದಾರೆ. ಕೊಳವೆ ಬಾವಿಯ ನೀರಿನ ಬಣ್ಣ ಬದಲಾಗಿದ್ದು, ವಾಸನೆ ಬರುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಮನೆ ಮಾಲೀಕರು ಸ್ವಂತ ಕೊಳವೆಬಾವಿ ಹಾಕಿಸಿಕೊಂಡಿದ್ದಾರೆ. ಆದರೆ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿಯ ಬಹುತೇಕ ಬಡಾವಣೆಗಳ ಜನರು ಹೊರಗಿನಿಂದ ನೀರಿನ ಕ್ಯಾನ್‌ ಹಾಕಿಸಿಕೊಳ್ಳುತ್ತಾರೆ’ ಎಂದು ಹಾಲಹಳ್ಳಿ ಬಡಾವಣೆಯ ನಿವಾಸಿ ಶಂಕರೇಗೌಡ ಹೇಳಿದರು.

ರೈತರಿಗೆ ಚರ್ಮ ಸೋಂಕು: ಹೊಸೂರು, ಭೂತನಹೊಸೂರು, ಚನ್ನಪ್ಪನ ದೊಡ್ಡಿ, ಚಿಕ್ಕೇಗೌಡನದೊಡ್ಡಿ ಮುಂತಾದ ಗ್ರಾಮಗಳ ರೈತರು ಗುತ್ತಲು ಕೆರೆಯ ಅಚ್ಚುಕಟ್ಟುದಾರರಾಗಿದ್ದಾರೆ. ಕಲುಷಿತ ನೀರು ಬಳಸಿಕೊಂಡೇ ಈ ಭಾಗದ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಆದರೆ ಗದ್ದೆಯಲ್ಲಿ ಕೆಲಸ ಮಾಡುವ ರೈತರಿಗೆ ಚರ್ಮದ ಸೋಂಕು ಸಾಮಾನ್ಯವಾಗಿದೆ. ಗದ್ದೆಯಲ್ಲಿ ಕೆಲಸ ಮಾಡಲು ಕೃಷಿ ಕಾರ್ಮಿಕರೂ ಹಿಂದೇಟು ಹಾಕುತ್ತಾರೆ.

‘ಗದ್ದೆಯಲ್ಲಿ ಭತ್ತ ನಾಟಿ ಮಾಡುವಾಗ ಮಣ್ಣಿನ ಸುವಾಸನೆ ಮೂಗಿಗೆ ಬಡಿಯಬೇಕು. ಆದರೆ ಇಲ್ಲಿ ಕೆಟ್ಟ ವಾಸನೆ ಮೂಗಿಗೆ ರಾಚುತ್ತದೆ. ನಾಟಿ ಮುಗಿಸಿ ಮನೆಗೆ ತೆರಳಿದರೆ ಮೈಯಲ್ಲಿ ಗಂಧೆಗಳು ಏಳುತ್ತಿವೆ. ಇದಕ್ಕೆ ಕುಲುಷಿತ ನೀರು ಕಾರಣವಾಗಿದೆ’ ಎಂದು ಗುತ್ತಲು ಗ್ರಾಮದ ರೈತರೊಬ್ಬರು ನೋವು ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಮಾಹಿತಿ ಇಲ್ಲ
ಯತ್ತಗದಹಳ್ಳಿ ಕೊಳಚೆ ಶುದ್ಧೀಕರಣ ಘಟಕದ ದುಸ್ಥಿತಿ, ಗುತ್ತಲು ಕೆರೆ ಕಲುಷಿತವಾಗುತ್ತಿರುವ ಬಗ್ಗೆ ಜಲಮಂಡಳಿ ಅಧಿಕಾರಿಗಳ ಮಾಹಿತಿ ಇಲ್ಲ.

‘ಘಟಕ ಸುಸ್ಥಿತಿಯಲ್ಲಿದ್ದು, ಕೆರೆಗೆ ಕೊಳಚೆ ನೀರು ಸೇರುತ್ತಿಲ್ಲ’ ಎಂದು ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಎನ್‌.ಎಂ.ಪ್ರಕಾಶ್‌ ತಪ್ಪು ಉತ್ತರ ನೀಡಿದರು.

ವಾಸ್ತವಾಂಶ ವಿವರಿಸಿದಾಗ ಶುದ್ಧೀಕರಣ ಘಟಕದ ನಿರ್ಮಾಣ, ಕೆರೆ ಶುದ್ಧೀಕರಣಕ್ಕೆ ರೂಪಿಸಿರುವ ಯೋಜನೆಯ ಮಾಹಿತಿ ನೀಡಿದರು.

‘ನೂತನ ಘಟಕ ನಿರ್ಮಾಣ ಹಾಗೂ ಗುತ್ತಲು ಕೆರೆ ಶುದ್ಧೀಕರಣ ಕಾಮಗಾರಿಗೆ ₹ 80 ಕೋಟಿ ಯೋಜನೆ ರೂಪಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಯೋಜನೆಗೆ ಸರ್ಕಾರ ಅನುಮೋದನೆ ನೀಡಿದರೆ ಸುಸಜ್ಜಿತ ಕೊಳಚೆ ಶುದ್ಧೀಕರಣ ಘಟಕ ನಿರ್ಮಾಣಗೊಳ್ಳಲಿದೆ’ ಎಂದು ಪ್ರಕಾಶ್‌ ತಿಳಿಸಿದರು.

ಚರಂಡಿಯಲ್ಲಿ ಡಯಾಗ್ನಾಸ್ಟಿಕ್‌ ತ್ಯಾಜ್ಯ?
ನಗರದ ಹೊರವಲಯದಲ್ಲಿರುವ ಡಯಾಗ್ನಾಸ್ಟಿಕ್‌ ಕೇಂದ್ರವೊಂದರ ಸಿಬ್ಬಂದಿ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ನೇರವಾಗಿ ಚರಂಡಿಗೆ ಹರಿಸುತ್ತಿದ್ದು ಅದು ನೇರವಾಗಿ ಗುತ್ತಲು ಕೆರೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಚರಂಡಿಯಿಂದ ಬರುವ ಸಿರಿಂಜ್‌, ಗಾಜಿನ ವಸ್ತುಗಳು ಯತ್ತಗದಹಳ್ಳಿ, ಹಾಲಹಳ್ಳಿ ಸುತ್ತಮುತ್ತ ದನ ಮೇಯಿಸುವ ಹುಡುಗರಿಗೆ ಸಿಗುತ್ತಿವೆ. ಹತ್ತಿ, ಬ್ಯಾಂಡೇಡ್‌ ಮುಂತಾದ ವಸ್ತುಗಳಿಂದ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.

‘ಈಚೆಗೆ ಗುತ್ತಲು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ತೆರಳಿದ್ದಾಗ ವೈದ್ಯಕೀಯ ತ್ಯಾಜ್ಯ ಕಣ್ಣಿಗೆ ಬಿತ್ತು. ಇದು ಡಯಾಗ್ನಾಸ್ಟಿಕ್‌ ಕೇಂದ್ರದ ತ್ಯಾಜ್ಯವೆಂದು ತಿಳಿದುಬಂದಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ನಗರಸಭೆ ಸಿಬ್ಬಂದಿಯೊಬ್ಬರು ತಿಳಿಸಿದರು.

ನೀರು ಪರೀಕ್ಷೆ ಮಾಡದ ಕೆಎಸ್‌ಪಿಸಿಬಿ
ಗುತ್ತಲು ಕೆರೆಯ ನೀರು ವಿಷಯುಕ್ತಗೊಳ್ಳುತ್ತಿದೆ ಎಂದು ಹಲವು ವರ್ಷಗಳಿಂದಲೂ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇಷ್ಟಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಲ್ಲಿಯ ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಲ್ಲ.

‘ಗುತ್ತಲು ಕೆರೆ ನೀರಿನಲ್ಲಿ ಕುಡಿಯುವ ನೀರಿನಲ್ಲಿ ಇರಬಹುದಾದ ಶುದ್ಧತಾ ಗುಣ (ಪಿ.ಎಚ್‌ ವ್ಯಾಲ್ಯೂ) ತೀರಾ ಕಡಿಮೆ ಇದೆ. ಆಮ್ಲಜನಕ ಪ್ರಮಾಣ ತೀವ್ರ ಕುಸಿದಿದ್ದು ಜಲಚರ, ಸಸ್ಯ ಸಂಕುಲ ನಾಶವಾಗುತ್ತಿವೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗುತ್ತಲು ಬಡಾವಣೆಯ ಉಪನ್ಯಾಸಕ ಶಿವಕುಮಾರ್‌ ಹೇಳಿದರು.

‘ಮುಂದಿನ ವಾರವೇ ನೀರು ಪರೀಕ್ಷೆ ಮಾಡಲಾಗುವುದು. ವರದಿ ಬರುವುದು 5 ದಿನಗಳಾಗುತ್ತದೆ. ನಂತರ ವರದಿ ಬಿಡುಗಡೆ ಮಾಡಲಾಗುವುದು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸವಿತಾ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು