ಬುಧವಾರ, ಸೆಪ್ಟೆಂಬರ್ 22, 2021
23 °C

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ಯಡಿಯೂರಪ್ಪ ಹುಟ್ಟೂರಿನಲ್ಲಿ ಕಣ್ಣೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಕೂಡಲೇ ಅವರ ಹುಟ್ಟೂರು, ಕೆ.ಆರ್‌.ಪೇಟೆ ತಾಲ್ಲೂಕು ಬೂಕನಕೆರೆ ಗ್ರಾಮದಲ್ಲಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದರು.

ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ರಾಜಿನಾಮೆ ನಿರ್ಧಾರ ಪ್ರಕಟಿಸಿದಾಗ ಬೂಕನೆಕೆರೆ ಗ್ರಾಮಸ್ಥರ ದುಃಖದ ಕಟ್ಟೆ ಒಡೆಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಶೋಕದ ವಾತಾವರಣ ನೆಲೆಸಿತು. ಹಲವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ದುಃಖ ವ್ಯಕ್ತಪಡಿಸಿದರು. ಗ್ರಾಮದೇವತೆ ಗೋಗಾಲಮ್ಮ ದೇವಸ್ಥಾನ ಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರವ ಮೌನ ಆವರಿಸಿತ್ತು.

‘ಕರ್ನಾಟಕದಲ್ಲಿ ಬಿಜೆಪಿ ಯಾರಿಗೂ ಗೊತ್ತಿರಲಿಲ್ಲ. ಯಡಿಯೂರಪ್ಪ ಹೋರಾಟ ಮೂಲಕ ಪಕ್ಷ ಕಟ್ಟಿದ್ದರು. ಈಗ ಕೇಂದ್ರದ ನಾಯಕರು ಅವರನ್ನೇ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಯಡಿಯೂರಪ್ಪ ಅವರು ಬೆಳೆಸಿದ ಮರದಿಂದ ಹಣ್ಣು ತಿನ್ನಲು ಹಲವರು ಕಾಯುತ್ತಿದ್ದಾರೆ. ಅವರ ಕುಟುಂಬ ಸದಸ್ಯರಿಗೇ ಮುಖ್ಯಮಂತ್ರಿ ಸ್ಥಾನ ಕೊಡಬೇಕು, ಇಲ್ಲದಿದ್ದರೆ ಬಿಜೆಪಿ ಕರ್ನಾಟಕದಲ್ಲಿ ಸರ್ವನಾಶವಾಗುತ್ತದೆ’ ಎಂದು ಬೂಕನಕೆರೆಯ ಮಧುಸೂದನ್‌ ಹೇಳಿದರು.

ಮೈಷುಗರ್‌ ಆರಂಭವಾಗಲಿಲ್ಲ: ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ತವರು ಜಿಲ್ಲೆಯ ಐತಿಹಾಸಿಕ ಮೈಷುಗರ್‌ ಕಾರ್ಖಾನೆ ಆರಂಭಿಸುವಲ್ಲಿ ವಿಫಲರಾದರು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಅವರು ಜಿಲ್ಲೆಗೆ ಬಂದಾಗಲೆಲ್ಲಾ ‘ಮೈಷುಗರ್ ಆರಂಭಿಸುವುದೇ ಗುರಿ ಎನ್ನುತ್ತಿದ್ದರು. ಆದರೆ ಕೊಟ್ಟ ಮಾತು ತಪ್ಪಿದರು’ ಎಂದು ಸಂದೇಶ ಪ್ರಕಟಿಸಿದ್ದಾರೆ. ಇದಕ್ಕೆ ಪರ–ವಿರೋಧ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ:  ಸಿ.ಎಂ. ಬದಲಾವಣೆಯಿಂದ ರಾಜ್ಯಕ್ಕೆ ಪ್ರಯೋಜನವಿಲ್ಲ: ಸಿದ್ದರಾಮಯ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು