ಬುಧವಾರ, ಮೇ 18, 2022
24 °C
ಜಿ.ಪಂ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರ ಪ್ರಶ್ನೆ

ಇನ್ನೆಷ್ಟು ದಿನ ಹಿಟ್ಲರ್‌ ಆಡಳಿತ ನಡೆಸುವಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸ್ಥಾಯಿ ಸಮಿತಿಯಲ್ಲಿ ಸಾಂವಿಧಾನಿಕವಾಗಿ ಅನುಮೋದನೆ ನೀಡಿದ ಕ್ರಿಯಾಯೋಜನೆಗಳನ್ನು ಕೈಬಿಟ್ಟು ಜಿ.ಪಂ ಅಧ್ಯಕ್ಷರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕ್ರಿಯಾಯೋಜನೆಗೆ ಹೊಸ ಕಾಮಗಾರಿ ಸೇರಿಸಿದ್ದಾರೆ ಎಂದು ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯ ಕ್ರಿಯಾ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ, ಶುಕ್ರವಾರ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಸರಣಿ ಸಭೆ ನಡೆಸಿದರು. ಸ್ಥಾಯಿ ಸಮಿತಿ ನಿರ್ಧಾರಗಳಿಗೆ ಮನ್ನಣೆ ನೀಡದೇ ಹೊಸ ಕಾಮಗಾರಿ ಸೇರಿಸಲು ಕಾರಣವೇನು ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರ ನೀಡಲು ಅಧಿಕಾರಿಗಳು ತಡವರಿಸಿದರು. ಇದರಿಂದ ಕೋಪಗೊಂಡ ಸದಸ್ಯರು, ಯಾವ ಪುರುಷಾರ್ಥಕ್ಕೆ ಸ್ಥಾಯಿ ಸಮಿತಿ ಸಭೆ ನಡೆಸಬೇಕು, ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಪ್ರಶ್ನಿಸಿದರು.

‘ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಮಾಡಿದ ಕ್ರಿಯಾ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಜಿಪಂ ಅಧ್ಯಕ್ಷರು ಏಕಪಕ್ಷೀಯವಾಗಿ ನೀಡಿದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದು ಸರ್ವಾಧಿಕಾರಿ ಧೋರಣೆಯಾಗಿದೆ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಆರೋಪಿಸಿದರು.

‘ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಯದಿದ್ದರೂ ಕಾಲಕಾಲಕ್ಕೆ ಸ್ಥಾಯಿ ಸಮಿತಿ ಸಭೆ ಕರೆದು ಎಲ್ಲಾ ತಾಲ್ಲೂಕಿಗೂ ಸಮಾನವಾಗಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿತ್ತು. ಆದರೆ ಅಧ್ಯಕ್ಷರು ತಮ್ಮದೇ ಒಂದು ಪಟ್ಟಿಯನ್ನು ತಯಾರು ಮಾಡಿ ಆ ಕಾಮಗಾರಿಗಳಿಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆದಿದ್ದಾರೆ. ಕಾಯ್ದೆ, ನೀತಿ ನಿಯಮಗಳ ಉಲ್ಲಂಘನೆ ಮಾಡಿದ್ಧಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ರವಿ ಮಾತನಾಡಿ ‘ಅಧ್ಯಕ್ಷರು ಸಹಿ ಮಾಡಿರುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವುದಾದರೆ ಸ್ಥಾಯಿ ಸಮಿತಿ ಯಾಕೆ ಬೇಕು, ಇದು ಹಿಟ್ಲರ್ ಆಡಳಿತ ಆಗಿದ್ದು ಇನ್ನೆಷ್ಟು ದಿನ ಹೀಗೆಯೇ ಆಡಳಿತ ನಡೆಸುತ್ತಾರೆ, ಒಂದು ಅಧಿಕಾರ ಮುಗಿಯಲೇಬೇಕು. ನ್ಯಾಯಬದ್ಧವಾಗಿ ರಚನೆಯಾಗಿರುವ ಸಮಿತಿಗಳ ನಿರ್ಧಾರಗಳಿಗೆ ಮನ್ನಣೆ ನೀಡದ ಅಧ್ಯಕ್ಷರು ಪ್ರಭಾವ ಬೀರಿ ತಮ್ಮ ಪಟ್ಟಿಗೆ ಅನುಮೋದನೆ ಪಡೆದಿದ್ದಾರೆ’ ಎಂದು ಆರೋಪಿಸಿದರು.

ಸದಸ್ಯ ಎಚ್‌.ಎಚ್‌.ಯೋಗೇಶ್ ಮಾತನಾಡಿ ‘ಕೇವಲ ಅಧ್ಯಕ್ಷರ ಮಾತಿಗೆ ಮನ್ನಣೆ ಸಿಗುವುದಾದರೆ ಸ್ಥಾಯಿ ಸಮಿತಿಗಳ ಅಗತ್ಯವಿಲ್ಲ, ಎಲ್ಲವನ್ನೂ ಅಧ್ಯಕ್ಷರಿಂದಲೇ ಮಾಡಿಸಿಕೊಳ್ಳಿ’ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್, ಸ್ಥಾಯಿ ಸಮಿತಿ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರ ಜಾರಿಗೊಳಿಸಲಾಗಿದೆ. ಹೊಸ ಕಾಮಗಾರಿ ಸೇರ್ಪಡೆ ಆಗಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

‘ಅಧಿಕಾರಿಗಳ ಗಮನಕ್ಕೆ ತರದೆ ಅಧ್ಯಕ್ಷರು ಹೇಗೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯ. ನೀವೂ ಇದರಲ್ಲಿ ಭಾಗಿಯಾಗಿದ್ದೀರಿ. ಸಿಇಒ ಒಪ್ಪಿಗೆ ಇಲ್ಲದೆ ಯಾವುದೇ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಯೋಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ಒಂದೂವರೆ ವರ್ಷದಿಂದ ಯವುದೇ ಸಾಮಾನ್ಯ ಸಭೆ ನಡೆದಿಲ್ಲ.  ಅಧ್ಯಕ್ಷರು ತಮಗೆ ಬೇಕಾದವರಿಗೆ ಅನುದಾನ ಹಂಚಿಕೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಲು ಅಧಿಕಾರಿಗಳು ಪರದಾಡಿದರು.

ಸದಸ್ಯರಾದ ಅನುಪಮಾ, ಮಂಜು, ರಾಣಿ, ಉಪ ಕಾರ್ಯದರ್ಶಿ ಪ್ರಕಾಶ್ ಇದ್ದರು.

**********

ಪರಿಷ್ಕೃತ ಪ್ರಸ್ತಾವಕ್ಕೆ ಅನುಮೋದನೆ

ಕ್ರಿಯಾಯೋಜನೆಗಳು ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡಿದ್ದರೂ ಅಧ್ಯಕ್ಷರು ಮತ್ತೊಂದು ಪರಿಷ್ಕೃತ ಕ್ರಿಯಾಯೋಜನೆ ಕಳುಹಿಸಿರುವ ಅಂಶ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಬಹಿರಂಗವಾಯಿತು.

ಇದಕ್ಕೂ ಮುನ್ನ ನಡೆದ ಎರಡು ಸಭೆಗಳಲ್ಲಿ ಉತ್ತರ ನೀಡದೆ ತಪ್ಪಿಸಿಕೊಂಡಿದ್ದ ಅಧಿಕಾರಿಗಳು ಈ ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕಳುಹಿಸಿದ ಪತ್ರದಲ್ಲಿನ ವಿಷಯ ಬಹಿರಂಗಗೊಳಿಸಿದರು.

'ಸ್ಥಾಯಿ ಸಮಿತಿಗಳು ನ್ಯಾಯಯುತವಾಗಿ ಕ್ರಿಯಾ ಯೋಜನೆ ಮಾಡಿಲ್ಲ ಎಂಬ ಕಾರಣ ನೀಡಿ ಅಧ್ಯಕ್ಷರು ಪರಿಷ್ಕೃತ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದನ್ನೇ ಸರ್ಕಾರ ಅನುಮೋದನೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಜ.27ರಂದು ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಸದಸ್ಯ ಶಿವಪ್ರಕಾಶ್ ‘ಕೂಡಲೇ ಇದನ್ನು ನಿಲ್ಲಿಸಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಮಾಡಿದ್ದ ನಿರ್ಣಯ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು