ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ಜಾರಿಗೆ ವಿರೋಧ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶ; ಡಿಸಿಗೆ ಮನವಿ ಸಲ್ಲಿಕೆ
Last Updated 19 ಡಿಸೆಂಬರ್ 2019, 11:48 IST
ಅಕ್ಷರ ಗಾತ್ರ

ವಿಜಯಪುರ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನೇತೃತ್ವ ವಹಿಸಿದ್ದ ರೈತ-ಕಾರ್ಮಿಕ ಹೋರಾಟಗಾರ ಭೀಮಶಿ ಕಲಾದಗಿ ಮಾತನಾಡಿ, ‘ಭಾರತ ದೇಶದಲ್ಲಿ ಕೋಮುವಾದಿ ಶಕ್ತಿಗಳಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಅದರ ಭಾಗವಾಗಿ ಇಂದು ಪ್ರತಿಭಟನೆಯನ್ನು ನಿಷೇಧಿಸಿ ಸರ್ಕಾರ ಹಿಟ್ಲರ್ ನೀತಿಯನ್ನು ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಾತ್ಯತೀತ ತತ್ವಗಳನ್ನು
ಅಳವಡಿಸಿದ್ದಾರೆ. ಆದರೆ, ಕೋಮುವಾದಿ ಬಿಜೆಪಿ ಸರ್ಕಾರ ಜನರ ಮಧ್ಯೆ ಕೋಮು ದಳ್ಳುರಿ ಹೆಚ್ಚುವಂತೆ ಮಾಡುತ್ತಿವೆ. ಇದಕ್ಕೆ ಜನಾಂದೋಲನವೊಂದೇ ಪರಿಹಾರ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್‌ಯುಸಿಐ ರಾಜ್ಯ ಪ್ರಮುಖ ಬಿ.ಭಗವಾನ ರೆಡ್ಡಿ ಮಾತನಾಡಿ, ‘ಒಂದೆಡೆ ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ನಿರುದ್ಯೋಗ ತಾಂಡವಾಡುತ್ತಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಜನತೆಗೆ ಬೇಡವಾದ, ಆಘಾತಕಾರಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ದಿವಾಳಿಯತ್ತ ಒಯ್ಯುತ್ತಿದೆ’ ಎಂದು ಆರೋಪಿಸಿದರು.

ದಲಿತ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ‘ಕೇಂದ್ರ ಸರ್ಕಾರ ಕೋಮು ದಳ್ಳುರಿ ಹರಡುವ ದೃಷ್ಟಿಯಿಂದ ಈ ಕಾಯ್ದೆ ಜಾರಿಗೊಳಿಸಿದಂತಿದೆ. ಅನೇಕ ವಿರೋಧದ ಮಧ್ಯೆಯೂ ಈ ಕಾಯ್ದೆ ಜಾರಿಗೊಳಿಸುವ ಹಟ ತೋರುತ್ತಿರುವುದು ಸರಿಯಲ್ಲ’ ಎಂದರು.

ಸುರೇಖಾ ರಜಪೂತ, ಯಶವಂತ ರಣದೇವಿ, ರಾಜಮಾ ನದಾಫ, ಸಂಗಪ್ಪ ಕಪಾಲಿ, ಎಂ.ಎಚ್.ಬಾಗಲಕೋಟ, ಮಲ್ಲಿಕಾರ್ಜುನ ಎಚ್‌.ಟಿ., ಸಿದ್ಧಲಿಂಗ ಬಾಗೇವಾಡಿ, ಬಾಳು ಜೇವೂರ, ಸುನೀಲ ಸಿದ್ರಾಮಶೆಟ್ಟಿ, ಶೋಭಾ ಯರಗುದ್ರಿ, ಕಾವೇರಿ, ಸುಮಾ, ಮಹಾದೇವಿ ಲಿಗಾಡೆ, ಎಂ.ಎಚ್.ಮಹಾಬರಿ, ಪ್ರಭುಗೌಡ ಪಾಟೀಲ, ಶಹನಾಜ್ ಕೂಡಗಿ, ಎನ್‌.ಐ.ಹೂಲಿಕಟ್ಟಿ, ಅಬ್ದುಲ್ ಗಫಾರ್, ರಾಜು ಜಾಧವ, ಭೀಮಪ್ಪ ವಾಲಿಕಾರ, ಪ್ರಕಾಶ ಹಿಟ್ಟನಳ್ಳಿ, ಚನ್ನಬಸು ಯಲಗಾರ, ಪ್ರವೀಣ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT