ಗುರುವಾರ , ಜನವರಿ 30, 2020
18 °C
ಸಚಿವ ಕೆ.ಎಸ್.ಈಶ್ವರಪ್ಪ ಗರಂ

ತಲೆ ಕೆಟ್ಟವರು ಹಾಗೆ ಹೇಳುತ್ತಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ತಲೆ ಕೆಟ್ಟವರು ಹಾಗೆ ಹೇಳುತ್ತಾರೆ, ಅದರಲ್ಲಿ ಅರ್ಥವೇ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರೇ ಮೂರೂವರೆ ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮಂಗಳವಾರ ಇಲ್ಲಿ ಖಾರವಾಗಿ ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಬದಲಿಗೆ ಬಿ.ಎಲ್.ಸಂತೋಷ ಅವರನ್ನು ಸಿಎಂ ಮಾಡುವ ವದಂತಿ ಇದೆಯಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಸಂತೋಷ ಮುಖ್ಯಮಂತ್ರಿ ಆಗುತ್ತಾರೆ ಎಂದು ತಲೆ ಕೆಟ್ಟವರೇ ಹೇಳಬೇಕಲ್ಲ, ಮತ್ಯಾರು ಹೇಳಲು ಸಾಧ್ಯ’ ಎಂದು ಪ್ರಶ್ನಿಸಿದರು.

ಮುಳಗುತ್ತಿರುವ ಹಡಗು: ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಳುತ್ತಿರುವ ಹಡಗುಗಳು. ಒಬ್ಬರಿಗೊಬ್ಬರು ಅಪ್ಪಿಕೊಂಡು ಇಬ್ಬರೂ ಮುಳುಗುತ್ತಾರೆ. ಮುಳುಗುವ ಸಂದರ್ಭದಲ್ಲಿ ಬದುಕುವ ಉದ್ದೇಶದಿಂದ ಒಬ್ಬರಿಗೊಬ್ಬರು ಅಪ್ಪಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರೂ ಬದುಕುವುದಿಲ್ಲ’ ಎಂದು ಟೀಕಿಸಿದರು.

‘ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಬಹುಮತ ಪಡೆಯುತ್ತೇವೆ. ಜೆಡಿಎಸ್‌, ಕಾಂಗ್ರೆಸ್‌ನ ಸಾಕಷ್ಟು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಳುಗುತ್ತಿರುವ ಹಡಗಿನಲ್ಲಿರಲು ಯಾವ ಶಾಸಕರು ಇಷ್ಟ ಪಡುತ್ತಾರೆ. ಅವರು ತಾವಾಗಿಯೇ ಪಕ್ಷ ತೊರೆದು ಬಿಜೆಪಿಗೆ ನಾವೇನು ಮಾಡಲು ಆಗುತ್ತದೆ, ಬಂದವರನ್ನು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.

‘ಹನಿ ಟ್ರ್ಯಾಪ್‌ ಬಗ್ಗೆ ಪತ್ರಿಕೆ, ಟಿ.ವಿಯಲ್ಲಿ ನೋಡಿದ್ದೇನೆ. ಯಾವ ಶಾಸಕರ ಹೆಸರೂ ಬಹಿರಂಗವಾಗಿಲ್ಲ. ಇದು ಸತ್ಯವಾಗಿದ್ದರೆ ಎಂತಹ ಪ್ರಭಾವಿ ವ್ಯಕ್ತಿ, ಅಧಿಕಾರಿ ಇದ್ದರೂ ಅವರ ವಿರುದ್ಧ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಗೃಹ ಸಚಿವರೇ ಹೇಳಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)