ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಮೂಡಿ ಏತ ನೀರಾವರಿಗೆ ಶಂಕುಸ್ಥಾಪನೆ: ಕುಮಾರ್ ಬಂಗಾರಪ್ಪ

ಏತ ನೀರಾವರಿ ಮಾಹಿತಿ ಕಾರ್ಯಾಗಾರದಲ್ಲಿ ಶಾಸಕ ಕುಮಾರ ಬಂಗಾರಪ್ಪ
Last Updated 9 ಡಿಸೆಂಬರ್ 2019, 11:32 IST
ಅಕ್ಷರ ಗಾತ್ರ

ಆನವಟ್ಟಿ: ಮೂಡಿ ಏತ ನೀರಾವರಿ ಯೋಜನೆಗೆ ₹ 223 ಕೋಟಿಗೆ ಟೆಂಡರ್ ಆಗಿದೆ. ಮೂಗುರು ನೀರಾವರಿಗೆ ಅಂದಾಜು ₹ 65 ಕೋಟಿ ಸಿದ್ಧವಿದೆ. ಏತ ನೀರಾವರಿಗೆ ಗುರುತಿಸಿರುವ ಜಮೀನಿನ ರೈತರು ಸಹಕಾರ ನೀಡಿದರೆ 18 ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ಜನವರಿ ಮೊದಲ ವಾರದಲ್ಲಿ ಯೋಜನೆಗೆ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗುವುದು ಎಂದುಶಾಸಕ ಕುಮಾರ ಬಂಗಾರಪ್ಪ ಹೇಳಿದರು.

ಭಾನುವಾರ ಇಲ್ಲಿನ ಪಬ್ಲಿಕ್ ಶಾಲೆಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂಡಿ, ಮೂಗುರು ಏತ ನೀರಾವರಿಯ ಬೃಹತ್ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮೂಡಿಯಿಂದ 66 ಕೆರೆಗಳು, ಮೂಗುರಿನಿಂದ 31 ಕೆರೆಗಳು ಮತ್ತು ಒಂದೊಂದು ಕೆರೆಯ ಸುತ್ತಲ ಪ್ರದೇಶದ 10 ಸಣ್ಣ ಕೆರೆಗಳು ತುಂಬುತ್ತವೆ. ಮೂಡಿ ಯೋಜನೆಯಿಂದ 27 ಸಾವಿರ ಎಕರೆ ಮತ್ತು ಮೂಗುರು ಯೋಜನೆಯಿಂದ 10 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.

ತಾಲ್ಲೂಕಿನ ದೊಡ್ಡ ಕೆರೆಯಾದ ಕುಬಟೂರು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರತ್ಯೇಕವಾಗಿ ₹ 30 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪಡೆದು ಬೃಂದಾವನ ಹಾಗೂ ದೋಣಿ ವಿಹಾರ ಕೇಂದ್ರ ನಿರ್ಮಿಸಲಾಗುವುದು. ಚಂದ್ರಗುತ್ತಿ, ಗುಡವಿ ಮುಂತಾದ ಪ್ರವಾಸಿ ತಾಣಗಳನ್ನು ಹೆಚ್ಚು ಆಕರ್ಷಣೀಯವಾಗಿಸುವುದರ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದೂ ಸೇರಿ ಸೊರಬದ ಸಮಗ್ರ ಅಭಿವೃದ್ಧಿಯ ಗುರಿ ಹೊಂದಲಾಗಿದೆ ಎಂದರು.

ಧರ್ಮಸ್ಥಳ ವೀರೇಂದ್ರ ಹೆಗಡೆ ಅವರ ನಿರ್ದೇಶದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಕೆರೆ ಸಂಜೀವಿನಿ, ಜಲಾಮೃತ ಯೋಜನೆಗಳ ಮೂಲಕ ಈಗಾಗಲೇ 6 ಕೆರೆಯ ಹುಳು ತೆಗೆಯಲಾಗಿದೆ. ಹೀಗೆ ಕೆಲವು ಯೋಜನೆಗಳ ಮೂಲಕ ಕೆರೆಗಳ ಹುಳು ತೆಗೆಯಲಾಗುವುದು ಎಂದರು.

ತಹಶೀಲ್ದಾರ್ ಪುಟ್ಟರಾಜ ಗೌಡ ಮಾತನಾಡಿ, ‘ಒತ್ತುವರಿಯಾಗಿರುವ ಕೆರೆಗಳ ಜಾಗವನ್ನು ಸರ್ವೆ ಮಾಡಿ ಬಿಡಿಸಿಕೊಳ್ಳಲಾಗುವುದು. ನೀರಾವರಿ ಯೋಜನೆ ಹಾದು ಹೋಗಿರುವ ಪ್ರದೇಶದಿಂದ 300 ಮೀಟರ್‌ವರೆಗೆ ಗಣಿಗಾರಿಕೆ ಮಾಡಲು ಅವಕಾಶವಿರುವುದಿಲ್ಲ. ಜಮೀನು ಕಳೆದುಕೊಳ್ಳುವವರಿಗೆ ಬೆಳೆ ಹಾನಿ ಆದವರಿಗೆ ಸೂಕ್ತ ಪರಿಹಾರ ಸಿಗುತ್ತದೆ. ಈಗಾಗಲೇ ಜಮೀನು ಕಳೆದುಕೊಂಡು ಪರಿಹಾರ ಪಡೆದವರು ಕಾನೂನಾತ್ಮಕವಾಗಿ ಭೂಮಿ ಬಿಟ್ಟುಕೊಡಬೇಕಾಗುತ್ತದೆ. ರೈತರಿಗಾಗಿ ಮಂಜೂರಾಗಿರುವ ನೀರಾವರಿಗೆ ಮುಕ್ತ ಮನಸ್ಸಿನಿಂದ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೇಳಿಕೊಂಡರು.

ಯೋಜನೆಯ ಸಂದೀಪ ನಾಡಿಗೇರ್, ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT