ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗದಿಂದ ಸಿಗಂದೂರಿಗೆ ಸಂಪರ್ಕಿಸುವ ಮುಪ್ಪಾನೆ-ಕಡುವು ಬೋಟ್‌ ಸಂಚಾರ ಯಶಸ್ವಿ

ಜೋಗ–ಸಿಗಂದೂರು ಸಂಪರ್ಕದಲ್ಲಿ ಬಹುಮುಖ್ಯ ಪಾತ್ರ
Last Updated 7 ಮಾರ್ಚ್ 2020, 10:34 IST
ಅಕ್ಷರ ಗಾತ್ರ

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ಮತ್ತು ಪ್ರಸಿದ್ಧ ಧಾರ್ಮಿಕ ತಾಣವಾದ ಸಿಗಂದೂರಿಗೆ ಸುಲಭವಾಗಿ ಸಂಪರ್ಕ ಸಾಧಿಸುವುದಕ್ಕಾಗಿ ಜನವರಿಯಲ್ಲಿ ಆರಂಭಿಸಲಾಗಿರುವ ಮುಪ್ಪಾನೆ–ಕಡವು ಸಂಚಾರಿ ಬೋಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಈ ಸಂಪರ್ಕ ಸಾಧನದಿಂದ ಪ್ರಸಕ್ತ ರಸ್ತೆ ಮಾರ್ಗದಲ್ಲಿ 85 ಕಿ.ಮೀಗಳಷ್ಟು ದೂರ ಕ್ರಮಿಸಬೇಕಿದ್ದ ಲಘು ವಾಹನಗಳು, ಕೇವಲ 40 ಕಿ.ಮೀ ಅಂತರದಲ್ಲಿ ಗುರಿ ಮುಟ್ಟುತ್ತಿರುವ ಬಗ್ಗೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಜೋಗದಿಂದ ಹೊರಡುವ ಪ್ರವಾಸಿಗರು ಕಾರ್ಗಲ್ ಮಾರ್ಗವಾಗಿ 15 ಕಿ.ಮೀ ಕ್ರಮಿಸಿದರೆ ದೊರಕುವ ಮುಪ್ಪಾನೆ ಪ್ರಕೃತಿಧಾಮದ ಮಾರ್ಗದಲ್ಲಿ ಈ ಕಡವು ತಾಣವಿದೆ. ಬಂದರು ಮ‌ತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೇಲ್ವಿಚಾರಣೆಯಲ್ಲಿ ಇಲ್ಲಿಗೆ ಕಲ್ಪಿಸಿರುವ ಬಾರ್ಜ್‌ನಲ್ಲಿ 4 ಲಘು ಮೋಟರ್ ಕಾರುಗಳನ್ನು ಏರಿಸಿಕೊಂಡು 50 ಜನರನ್ನು ಹೊತ್ತು ಸಂಚರಿಸುವ ಸಾಮರ್ಥ್ಯವಿದೆ. ಜಲಮಾರ್ಗದ ಮೂಲಕ ಕೇವಲ 10 ನಿಮಿಷಗಳ ಅಂತರದಲ್ಲಿ ಹಲಿಕೆ ಗ್ರಾಮದ ಶರಾವತಿ ಹಿನ್ನೀರಿನ ದಡಕ್ಕೆ ತಲುಪಿಸುತ್ತದೆ. ಹಲಿಕೆ ಕಡವು ಮಾರ್ಗದಿಂದ 20 ಕಿ.ಮೀ ಅಂತರದಲ್ಲಿ ಸಿಗಂದೂರು ಚೌಡೇಶ್ವರಿ ದೇಗುಲವನ್ನು ತಲುಪಲು ಸಾಧ್ಯವಾಗುತ್ತಿದೆ.

ಹಿನ್ನೀರಿನ ನಿಸರ್ಗರಾಶಿಯ ನಡುವೆ ಜಲಮಾರ್ಗದಲ್ಲಿ ಸಂಚರಿಸುವ ಈ ನೂತನ ಮಾರ್ಗವನ್ನು ಪ್ರವಾಸಿಗರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 8ರಿಂದ ಆರಂಭವಾಗುವ ಈ ಜಲಸಂಚಾರ ಮಾರ್ಗ ಸಂಜೆ 5.30ರ ವರೆಗೆ ಇರುತ್ತದೆ. ಇಲ್ಲಿನ ಬೋಟ್ ಚಾಲಕ ಆರೋಡಿ ನಾಗರಾಜ್ ಇವರ ಮೊಬೈಲ್ ಸಂಖ್ಯೆಯಲ್ಲಿ ನಿಗದಿತ ಅವಧಿಯಲ್ಲಿ ತುರ್ತು ಸಂಚಾರಕ್ಕೂ ಸಂಪರ್ಕಿಸಬಹುದು (ಮೊ: 9480472939).

ಈ ಸಂಪರ್ಕ ಸಾಧನದಿಂದ ಶಿರಸಿ, ಬನವಾಸಿ ಮತ್ತು ಕೊಲ್ಲೂರು ಯಾತ್ರಾ ಸ್ಥಳಗಳ ಜೊತೆಗೆ ಹುಬ್ಬಳ್ಳಿಯಿಂದ ದಕ್ಷಿಣ ಕನ್ನಡ ಸಂಪರ್ಕ ಮಾರ್ಗ ತುಂಬಾ ಹತ್ತಿರವಾಗುತ್ತಿದೆ. ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯದಲ್ಲಿ ಬರುವ ಇಲ್ಲಿನ ಮಾರ್ಗದ ಬಗ್ಗೆ ವನ್ಯಜೀವಿ ಅಭಯಾರಣ್ಯ ಇಲಾಖೆಯವರು ಆರಂಭದಲ್ಲಿ ತಕರಾರು ಸಲ್ಲಿಸಿದ್ದರೂ ಪ್ರಸಕ್ತ ಘಟ್ಟದಲ್ಲಿ ಸಹಕಾರ ನೀಡುತ್ತಿರುವುದರಿಂದ ಈ ಹಾದಿ ಸುಗುಮವಾಗಿ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT