ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕಾಗಿ 180 ಶಾಲೆ ದತ್ತು

ಶಿಕ್ಷಣ ಇಲಾಖೆಯಿಂದ 60 ನೋಡೆಲ್‌ ಅಧಿಕಾರಿಗಳ ನೇಮಕ, ವಾರಕ್ಕೊಮ್ಮೆ ಭೇಟಿ; ಪರಿಶೀಲನೆ ಕಡ್ಡಾಯ
Last Updated 18 ಫೆಬ್ರುವರಿ 2021, 8:10 IST
ಅಕ್ಷರ ಗಾತ್ರ

ಮೈಸೂರು: ಮಾನಸಿಕ ಒತ್ತಡ–ಕಿರಿಕಿರಿ ಅನುಭವಿಸದೆ, 2020–21ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸುಲಲಿತವಾಗಿ ಬರೆಯಲು ಸಹಕಾರಿಯಾಗುವಂತೆ; ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ವಿದ್ಯಾರ್ಥಿ ಸ್ನೇಹಿ ಯೋಜನೆಯೊಂದನ್ನು ಜಾರಿಗೊಳಿಸಿದೆ.

ಲಭ್ಯವಿರುವ ಅಲ್ಪ ಸಮಯದಲ್ಲೇ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಜೊತೆಯಲ್ಲೇ ಫಲಿತಾಂಶ ಹೆಚ್ಚಳ, ಸುಧಾರಣೆಯತ್ತಲೂ ಗಮನ ಕೇಂದ್ರೀಕರಿಸಿದೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಮಾನ ದಂಡವಾಗಿರುವ ಕನಿಷ್ಠ ಅಂಕಗಳನ್ನು ಗಳಿಸಲು ಸಹಕಾರಿ ಯಾಗುವಂತೆ ಪಾಸಿಂಗ್‌ ಪ್ಯಾಕೇಜ್‌ ರೂಪಿಸಿದೆ. ಶಿಕ್ಷಕರ ಸಹಕಾರದಿಂದ ಈಗಾಗಲೇ ಅನುಷ್ಠಾನಕ್ಕೂ ಮುಂದಾಗಿದೆ.

ಒಬ್ಬೊಬ್ಬ ಅಧಿಕಾರಿಗೆ ಮೂರು ಶಾಲೆ ದತ್ತು: ‘ಈ ಹಿಂದಿನ ಎರಡು ಶೈಕ್ಷಣಿಕ ವರ್ಷದಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿರುವ ಜಿಲ್ಲೆಯ 180 ಪ್ರೌಢಶಾಲೆಗಳನ್ನು ಇಲಾಖೆ ಗುರುತಿಸಿದೆ. ಈ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಿಸಲಿಕ್ಕಾಗಿಯೇ ಶಿಕ್ಷಣ ಇಲಾಖೆಯ 60 ಅಧಿಕಾರಿಗಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಒಬ್ಬೊಬ್ಬ ಅಧಿಕಾರಿಗೆ ತಲಾ ಮೂರು ಶಾಲೆಗಳನ್ನು ದತ್ತು ನೀಡಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ದತ್ತು ಪಡೆದ ಶಾಲೆಗೆ ವಾರಕ್ಕೊಮ್ಮೆ ಅಧಿಕಾರಿ ಭೇಟಿ ನೀಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮೇಲೆ ನಿಗಾ ವಹಿಸಬೇಕು. ನಿರೀಕ್ಷಿತ ಪ್ರಗತಿ ಗೋಚರಿಸದಿದ್ದರೆ, ಶಾಲೆಯ ಶಿಕ್ಷಕರ ಜೊತೆ ಚರ್ಚಿಸಿ ವಿದ್ಯಾರ್ಥಿಯ ಕಲಿಕೆ ಹಾಗೂ ಗ್ರಹಿಕೆ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಆದ್ಯತೆ ನೀಡಬೇಕು. ವಿಷಯವಾರು ಪ್ರಗತಿ ಹೇಗೆ ಸಾಗಿದೆ? ಎಂಬುದರ ಮೇಲೂ ಕಣ್ಗಾವಲಿಡಬೇಕು. ಈ ಯೋಜನೆಯಡಿ ಪರೀಕ್ಷೆ ಬರೆಯುವ ಪ್ರತಿ ಮಗುವೂ ಪಾಸಾಗುವಂತೆ ನೋಡಿಕೊಳ್ಳುವ ಹೊಣೆಯನ್ನು ಈ ನೋಡೆಲ್‌ ಅಧಿಕಾರಿಗಳಿಗೆ ನೀಡಿದ್ದೇವೆ’ ಎಂದು ಅವರು ಹೇಳಿದರು.‌

ವಿದ್ಯಾರ್ಥಿಗಳ ವರ್ಗೀಕರಣ

41 ಸಾವಿರ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ ಎಂದು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದರು.

ಚೆನ್ನಾಗಿ ಓದುವ ವಿದ್ಯಾರ್ಥಿಗಳು, ಸಾಧಾರಣ ಕಲಿಕಾ ಸಾಮರ್ಥ್ಯದ ವಿದ್ಯಾರ್ಥಿಗಳು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಎಂಬ ಗುಂಪುಗಳನ್ನು ಪ್ರತಿ ಪ್ರೌಢಶಾಲೆಯಲ್ಲೂ ರಚಿಸಲಾಗಿದೆ.

‘ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ಪಾಸಿಂಗ್‌ ಪ್ಯಾಕೇಜ್‌ ರೂಪಿಸಿದ್ದೇವೆ. ಈ ಗುಂಪಿನ ಮೇಲೆ ಪ್ರತಿ ವಿಷಯದ ಶಿಕ್ಷಕರು ವಿಶೇಷ ನಿಗಾ ಇರಿಸಲಿದ್ದಾರೆ. ಇವರಿಗಾಗಿಯೇ ವಿಶೇಷ ಬೋಧನೆಯೂ, ತರಗತಿಯೂ ನಡೆಯಲಿವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರೊಫೈಲ್‌ ಸಿದ್ಧಪಡಿಸಿಕೊಂಡು, ಕಲಿಕಾ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಶಿಕ್ಷಕರಿಗೂ ಜವಾಬ್ದಾರಿ ನೀಡಲಾಗಿದೆ’ ಎಂದು ಅವರು ಹೇಳಿದರು.

‘ಸಾಧಾರಣ ಕಲಿಕಾ ಸಾಮರ್ಥ್ಯದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಅನುಕೂಲವಾಗುವಂತೆ ಆಯಾ ಶಾಲೆಯಲ್ಲೇ ಸಿದ್ಧ ಪಠ್ಯ ಒದಗಿಸುವಂತೆ ಸೂಚಿಸಿದ್ದೇವೆ. ಉಳಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಪುನರ್‌ಮನನ ತರಗತಿ ನಡೆದಿವೆ. ಸಮಸ್ಯೆ ಬಗೆಹರಿಸಿಕೊಳ್ಳಲು ಶಾಲೆಗಳಲ್ಲೇ ಶಿಕ್ಷಕರು ಇದೀಗ ಲಭ್ಯರಾಗಿದ್ದಾರೆ’ ಎಂದರು.

ಮುಖ್ಯೋಪಾಧ್ಯಾಯರ ಸಭೆ: ಕ್ರಿಯಾಯೋಜನೆ

ಫಲಿತಾಂಶ ಹೆಚ್ಚಳಕ್ಕಾಗಿಯೇ ಇಲಾಖೆ ಜಿಲ್ಲೆಗೆ ನೋಡೆಲ್‌ ಅಧಿಕಾರಿಯನ್ನು ನೇಮಿಸಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ಮಾದೇಗೌಡ ಮೈಸೂರು ಜಿಲ್ಲೆಯ ನೋಡೆಲ್‌ ಅಧಿಕಾರಿಯಾಗಿದ್ದಾರೆ.

ಈಗಾಗಲೇ ತಿ.ನರಸೀಪುರ, ಮೈಸೂರು ಉತ್ತರ ಹಾಗೂ ದಕ್ಷಿಣ ಶೈಕ್ಷಣಿಕ ತಾಲ್ಲೂಕುಗಳಲ್ಲಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆದಿವೆ. ಫೆ.20ರಂದು ಕೆ.ಆರ್‌.ನಗರ ತಾಲ್ಲೂಕಿನ ಮುಖ್ಯೋಪಾಧ್ಯಾಯರ ಸಭೆ ನಡೆಯಲಿದೆ. ವಾರಕ್ಕೊಮ್ಮೆ ಒಂದೊಂದು ಶೈಕ್ಷಣಿಕ ತಾಲ್ಲೂಕಿನ ಮುಖ್ಯೋಪಾಧ್ಯಾಯರ ಸಭೆ ನಡೆಯಲಿದೆ.

ಈ ಸಭೆಗಳಲ್ಲಿ ಪ್ರತಿ ಶಾಲೆಯ ಹಿಂದಿನ ಎರಡು ಶೈಕ್ಷಣಿಕ ವರ್ಷದ ಫಲಿತಾಂಶವನ್ನು ವಿಶ್ಲೇಷಣೆ ಮಾಡುತ್ತಿದ್ದೇವೆ. ಯಾವ್ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, ಯಾವ ವಿಷಯದಲ್ಲಿ ಹೆಚ್ಚು ಫೇಲ್‌ ಆಗಿದ್ದಾರೆ, ಅನುತ್ತೀರ್ಣರಾಗಲು ಕಾರಣ ಏನು ಎಂಬ ವಿಶ್ಲೇಷಣೆ ನಡೆದಿದೆ. ಪ್ರತಿ ವಿದ್ಯಾರ್ಥಿಯೂ ತೇರ್ಗಡೆಯಾಗಲು ಯಾವ ಕ್ರಿಯಾಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಿದರೆ ಸಹಕಾರಿಯಾಗಲಿದೆ ಎಂಬುದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡುತ್ತಿದ್ದೇವೆ. ಇದು ಫಲಿತಾಂಶ ಸುಧಾರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಡಾ.ಪಾಂಡುರಂಗ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT