ಬುಧವಾರ, ನವೆಂಬರ್ 25, 2020
24 °C
ಪೊಲೀಸರ ಕಾರ್ಯಾಚರಣೆ: ಆಭರಣ ಅಪಹರಿಸಿದ್ದ ದೇಗುಲದ ಪೂಜಾರಿ ಮನು ಬಂಧನ

ಹುಣಸೂರು: ₹ 21 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಐಶ್ವರ್ಯ ವೃದ್ಧಿಸುವ ಆಸೆ ತೋರಿಸಿ ₹ 21 ಲಕ್ಷ ಮೌಲ್ಯದ 460 ಗ್ರಾಂ ಚಿನ್ನಾಭರಣ ಅಪಹರಿಸಿದ್ದ ಪೂಜಾರಿಯನ್ನು ಬಂಧಿಸಿದ ಪೊಲೀಸರು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ತಾಲ್ಲೂಕಿನ ಉಯಿಗೌಡನಹಳ್ಳಿ ಗ್ರಾಮದ ನಿವಾಸಿ ನಿಂಗಪ್ಪ ಎಂಬುವವರನ್ನು ಕೆ.ಆರ್.ನಗರ ತಾಲ್ಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಪೂಜಾರಿ ಮನು ಬಿನ್ ಸ್ವಾಮಿ ನಾಯಕ ಎಂಬಾತ ನವರಾತ್ರಿಯಲ್ಲಿ ಚಿನ್ನಾಭರಣಗಳಿಗೆ ವಿಶೇಷ ಪೂಜೆ ಮಾಡುವುದರಿಂದ ಐಶ್ವರ್ಯ ವೃದ್ಧಿಯಾಗಲಿದೆ ಎಂದು ನಂಬಿಸಿದ್ದ ಎನ್ನಲಾಗಿದೆ.

ಪೂಜಾರಿ ಮಾತು ನಂಬಿದ್ದ ನಿಂಗಪ್ಪ ತನ್ನ ಬಳಿ ಇದ್ದ ಚಿನ್ನ ಸೇರಿದಂತೆ ತನಗೆ ಪರಿಚಯ ಇರುವ ಗ್ರಾಮದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶೀಲಾ, ದೀಪಾ ಹಾಗೂ ಹುಣಸೂರು ನಿವಾಸಿ ಸಂತೋಷ್ ಅವರಿಗೆ ಸೇರಿದ ಒಟ್ಟು 450 ಗ್ರಾಂ ಚಿನ್ನದ ಆಭರಣವನ್ನು ಸಂಗ್ರಹಿಸಿ ಆರೋಪಿ ಪೂಜಾರಿ ಮನು ಹೇಳಿದಂತೆ ಪೂಜಾರಿ ಮನೆಯ ಕಬ್ಬಿಣದ ಬೀರುವಿನಲ್ಲಿ ಇಟ್ಟು ಪೂಜಾ ಕೈಂಕರ್ಯ ನೆರವೇರಿಸಿದ್ದರು.

ಪೂಜಾರಿ ಮನು ಮಾರ್ಗಸೂಚಿಯಂತೆ ಪೂಜೆ ನೆರವೇರಿಸಿದ ಬಳಿಕ ಆಯುಧಪೂಜೆಯವರೆಗೆ ಬೀರುವಿನ ಬಾಗಿಲು ತೆರೆಯದಂತೆ ಸೂಚಿಸಿದ್ದನು. ಭಕ್ತರು ಪೂಜಾರಿ ಮಾತು ಪಾಲಿಸಿದ್ದರು. ಈ ಮಧ್ಯೆ ಆರೋಪಿ ಮನು ಆಯುಧಪೂಜೆ ದಿನದಂದು ರಾತ್ರಿ 8.30ರಲ್ಲಿ ಬಟ್ಟೆ ಬದಲಿಸುವುದಾಗಿ ಹೇಳಿ ಬೀರು ಇದ್ದ ಕೊಠಡಿಗೆ ಹೋಗಿ ಚಿನ್ನಾಭರಣ ಅಪಹರಿಸಿ ನಾಪತ್ತೆಯಾಗಿದ್ದನು.

ಈ ಸಂಬಂಧ ನಿಂಗಪ್ಪ ಮತ್ತು ಇತರರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಡಿವೈಎಸ್‌ಪಿ ಸುಂದರ್ ರಾಜ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಅ. 27ರಂದು ಕೆ.ಆರ್.ನಗರ ಬಸ್ ನಿಲ್ದಾಣದಲ್ಲಿ ಆರೋಪಿ ಮನು ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ₹ 21 ಲಕ್ಷ ಮೌಲ್ಯದ 450 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಪಿಐ ಪೂವಯ್ಯ, ಪ್ರಭಾರ ಸಿಪಿಐ ರವಿಕುಮಾರ್, ಬಿಳಿಕೆರೆ ಪಿಎಸ್ಐ ಜಯಪ್ರಕಾಶ್, ಎಎಸ್ಐ ಸ್ವಾಮಿನಾಯಕ ಸಿಬ್ಬಂದಿ ತಮ್ಮಣ್ಣ, ಅರುಣ್, ಪ್ರಸನ್ನಕುಮಾರ್, ಸತೀಶ್‌, ರವಿ, ಮಹದೇವ್, ಗೋವಿಂದ ಮತ್ತು ಚಿಕ್ಕಲಿಂಗು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು