ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಶೇ 40ರಷ್ಟು ಸರಳ ಪ್ರಶ್ನಾವಳಿ: ಡಿಡಿಪಿಐ

ಕೋವಿಡ್ ಆತಂಕದಲ್ಲೂ 10ನೇ ತರಗತಿ ಫಲಿತಾಂಶಕ್ಕೆ ಒತ್ತು
Last Updated 17 ಫೆಬ್ರುವರಿ 2021, 2:38 IST
ಅಕ್ಷರ ಗಾತ್ರ

ಹುಣಸೂರು: ‘ಕೋವಿಡ್‌ನಿಂದಾಗಿ ಶಾಲೆ ಸಮರ್ಪಕವಾಗಿ ನಡೆಯದ ಕಾರಣ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯು ಶೇ 40ರಷ್ಟು ಸರಳಿಕೃತ ಪ್ರಶ್ನೆಗಳಿಂದ ಕೂಡಿರಲಿದೆ’ ಎಂದು ಡಿಡಿಪಿಐ ಎಚ್‌.ಪಾಂಡುರಂಗ ಹೇಳಿದರು.

ನಗರದ ಶಿಕ್ಷಕರ ಭವನದಲ್ಲಿ ಮಂಗಳವಾರ ನಡೆದ 10ನೇ ತರಗತಿ ಫಲಿತಾಂಶ ಉತ್ತಮಗೊಳಿಸುವ ವಿಷಯವಾರು ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲೆ 10ನೇ ತರಗತಿ ಪರೀಕ್ಷೆಯಲ್ಲಿ ಕಳೆದ ಸಾಲಿಗಿಂತಲೂ ಈ ಸಾಲಿನಲ್ಲಿ ಉತ್ತಮ ಸ್ಥಿತಿಗೆ ತಲುಪಲು ಶಿಕ್ಷಕರು ಅವರ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೆಲಸ ಮಾಡುವುದರಿಂದ ಮಕ್ಕಳಿಂದ ಉತ್ತಮ ಫಲಿತಾಂಶ ಪಡೆಯಲು ಸಹಕಾರಿ ಆಗಲಿದೆ’ ಎಂದರು.

‘ಈ ವರ್ಷ ತರಗತಿಗಳು ಸಮರ್ಪಕವಾಗಿ ನಡೆಯದೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನನುಕೂಲ ಆಗಿದ್ದು, ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರುವುದನ್ನು ಮನಗೊಂಡು ಶಿಕ್ಷಣ ಇಲಾಖೆ ಈ ಸಾಲಿನ ಪರೀಕ್ಷೆಯಲ್ಲಿ ಶೇ 40ರಷ್ಟು ಅಂಕಗಳಿಗೆ ಸರಳ ಪ್ರಶ್ನಾವಳಿ ನೀಡಿ ವಿದ್ಯಾರ್ಥಿಗಳು ಸುಲಭವಾಗಿ ಬರೆದು ತೇರ್ಗಡೆ ಹೊಂದುವ ಅವಕಾಶ ನೀಡಲಾಗಿದೆ. ಇದಲ್ಲದೆ ಶೇ 30ರಷ್ಟು ಪಠ್ಯದಲ್ಲಿ ಕಡಿತ ಮಾಡಿರುವುದರಿಂದ ಮಾನಸಿಕ ಒತ್ತಡ ತಗ್ಗಿಸುವ ಕೆಲಸ ಸರ್ಕಾರ ಮಾಡಿದೆ’ ಎಂದರು.

‘10ನೇ ತರಗತಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಪಿಯುಸಿ ವ್ಯಾಸಂಗ ಕ್ಲಿಷ್ಟಕರವಾಗಲಿದೆ. ಫಲಿತಾಂಶ ಶೇಕಡಾವಾರು ಉತ್ತಮಗೊಳಿಸಿಕೊಳ್ಳುವ ಭರದಲ್ಲಿ ಪಠ್ಯ ಗುಣಮಟ್ಟ ಹಾಳಾಗದಂತೆ ಎಚ್ಚರವಹಿಸಬೇಕು. 10ನೇ ತರಗತಿಯಲ್ಲಿ ಉತ್ತಮ ಅಂಕಪಡೆದು ಉನ್ನತಾಭ್ಯಾಸದಲ್ಲಿ ವಿದ್ಯಾರ್ಥಿ ಕಳಪೆ ಪ್ರದರ್ಶನ ತೋರುವುದರಿಂದ ಸಾಮಾಜಿಕ ಸಮಸ್ಯೆಗಳಿಗೆ ಬಾಗಿಲು ತೆರೆದಂತಾಗಲಿದೆ’ ಎಂದರು.

ಪಾಸಿಂಗ್ ಪ್ಯಾಕೇಜ್: 10ನೇ ತರಗತಿ ವಿದ್ಯಾರ್ಥಿಗಳು ಕನಿಷ್ಠ 35 ಅಂಕ ಪಡೆದು ಉತ್ತೀರ್ಣರಾಗುವ ರೀತಿ ಪಾಸಿಂಗ್ ಪ್ಯಾಕೇಜ್ ಪ್ರಶ್ನಾವಳಿ ಸಿದ್ಧಪಡಿಸಿ ತರಬೇತಿ ನೀಡಿ ಫಲಿತಾಂಶದ ಪ್ರಮಾಣ ಹೆಚ್ಚಿಸಲು ಶಿಕ್ಷಕರು ಸಜ್ಜಾಗಬೇಕು ಎಂದರು.

ಕೊರತೆ: ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡಿದ್ದು, ಈ ಕೊರತೆಯನ್ನು ಹಂಗಾಮಿ ಶಿಕ್ಷಕರ ನಿಯೋಜನೆಯಿಂದ ಭರ್ತಿ ಮಾಡಲಾಗಿದೆ. ಹೀಗಿದ್ದರೂ ಮಕ್ಕಳು ಪ್ರೌಢಶಾಲೆ ಸೇರ್ಪಡೆಯಾದ ನಂತರ ಸೇತುಬಂಧ ಪಠ್ಯಪ್ರವಚನ ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಇಒ ನಾಗರಾಜ್, ಸಂತೋಷ್ ಕುಮಾರ್, ಯೋಗಾನಂದ್, ಮಹದೇವಯ್ಯ, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT