ಶುಕ್ರವಾರ, ಅಕ್ಟೋಬರ್ 22, 2021
29 °C
ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ಯ ಕನ್ನಡ ಅನುವಾದಿತ ಕೃತಿ ಬಿಡುಗಡೆ

ಅಸಹಿಷ್ಣುತೆಯ ಮನೋಧರ್ಮಕ್ಕೆ ಗೀತಾಂಜಲಿ ಪಾಠ: ಎಂ.ಎಸ್‌. ಆಶಾದೇವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅಸಹಿಷ್ಣುತೆಯ ಕಾಲಘಟ್ಟದ ಮನುಷ್ಯ ಕೇಂದ್ರಿತ ಮನೋಧರ್ಮಕ್ಕೆ ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ ಕೃತಿ ಪಾಠವಾಗುತ್ತದೆ’ ಎಂದು ವಿಮರ್ಶಕಿ ಡಾ.ಎಂ.ಎಸ್‌. ಆಶಾದೇವಿ ಅಭಿಪ್ರಾಯಪಟ್ಟರು.

ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್‌ ಹಾಗೂ ಹನ್ಯಾಳು ಪ್ರಕಾಶನದಿಂದ ನಗರದ ರೋಟರಿ ವೆಸ್ಟ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಸಾಹಿತಿ ಜೆ.ರಾಮಲಿಂಗೇಗೌಡ ಅನುವಾದಿಸಿರುವ ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

‘ನಮಗೆ ನಾವೇ ಕೃತಕ ಗೋಡೆಗಳನ್ನು ಕಟ್ಟಿಕೊಂಡು, ನಮ್ಮ ಬದುಕನ್ನು ವಿಕಾರಗೊಳಿಸಿಕೊಂಡಿದ್ದೇವೆ. ಅದಕ್ಕೆ ಬೇಕಾದ ಮದ್ದು ಪ್ರಕೃತಿಯಲ್ಲಿದೆ ಎಂಬ ಸಂದೇಶ ಸಾರುವ ಗೀತಾಂಜಲಿ ಕೃತಿಯು, ಈ ಕಾಲಕ್ಕೆ ತುರ್ತು ಚಿಕಿತ್ಸೆ ನೀಡಬಹುದಾದ ವೈದ್ಯನ ಕೆಲಸವನ್ನೂ ಮಾಡುತ್ತದೆ’ ಎಂದು ಹೇಳಿದರು.

‘ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಬಂಗಾಳದ ಮೂಲಕ ವಿಸ್ತರಿಸಿದ ಕೀರ್ತಿ ರವೀಂದ್ರರಿಗೆ ಸಲ್ಲುತ್ತದೆ. ಭಾರತ ಎನ್ನುವ ಪರಿಭಾವನೆ ಜನರಲ್ಲಿ ಮೂಡಲು ವೇದಿಕೆ ಒದಗಿಸಿಕೊಟ್ಟಿದ್ದರು. ಸಮಸ್ತ ಭಾರತದ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದರು’ ಎಂದರು.

‘ರವೀಂದ್ರನಾಥ ಠ್ಯಾಗೋರ್‌ ಹಾಗೂ ಗಾಂಧೀಜಿ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅವರ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ. ಕಾಂಗ್ರೆಸ್‌ ಪಕ್ಷವು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಾಗ ಅದನ್ನು ವಿರೋಧಿಸಿದ್ದರು. ಬಹುತ್ವಕ್ಕೆ ಒತ್ತು ನೀಡದಿದ್ದರೆ ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು’ ಎಂದು ತಿಳಿಸಿದರು.

‘ನವೋದಯ ಕಾವ್ಯ ಶೈಲಿಯ, ಮೈಸೂರು ಕನ್ನಡದಲ್ಲಿ ಗೀತಾಂಜಲಿಯ ಕವಿತೆಗಳನ್ನು ಅನುವಾದಿಸಲು ಜೆ.ರಾಮಲಿಂಗೇಗೌಡರು ಪ್ರಯತ್ನಿಸಿದ್ದಾರೆ. ಇದರಿಂದ ಈ ಕೃತಿ ವಿಶಿಷ್ಟವಾಗಿ ನಿಲ್ಲುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ವಾಂಸ ಜಿ.ರಾಮನಾಥ ಭಟ್‌ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಕಮಿಷನರ್‌ ಜೆ.ರಾಮಲಿಂಗೇಗೌಡ, ಪ್ರಕಾಶಕ ಎಚ್‌.ಎಸ್‌.ಗೋವಿಂದಗೌಡ, ಕಾರ್ಯದರ್ಶಿ ಎನ್‌.ಸಿ.ತಮ್ಮಣ್ಣಗೌಡ ಇದ್ದರು.

‘ರವೀಂದ್ರರಿಗೆ ಪರ್ಯಾಯ ಲೇಖಕ ಕುವೆಂಪು’
‘ರವೀಂದ್ರನಾಥ ಠ್ಯಾಗೋರ್‌ ನಿಧನರಾದ ದಿನ ಬಂಗಾಳದ ಪತ್ರಿಕೆಯೊಂದರ ಸಂಪಾದಕರು ಸಂಪಾದಕೀಯ ಬರೆಯುವ ಸಂದರ್ಭದಲ್ಲಿ, ರವೀಂದ್ರರಿಗೆ ಪರ್ಯಾಯವಾಗಿ ಇರಬಹುದಾದ ಭಾರತೀಯ ಲೇಖಕ ಇನ್ಯಾರು ಎಂಬ ಪ್ರಶ್ನೆ ಮೂಡಿತ್ತು. ಆಗ ಅವರಿಗೆ ಹೊಳೆದ ಹೆಸರು ಕುವೆಂಪು. ಈ ಎರಡೂ ವ್ಯಕ್ತಿತ್ವಗಳಲ್ಲಿರುವ ಗುಣ ಸ್ವಭಾವಗಳನ್ನು ಆ ಸಂಪಾದಕರು ಗುರುತಿಸಿದ್ದರು. ಅಂತಹ ಶಕ್ತಿಯೂ ಕುವೆಂಪು ಅವರಲ್ಲಿ ಇತ್ತು. ರವೀಂದ್ರರು ಗೀತಾಂಜಲಿ ಕೃತಿಯಲ್ಲಿ ಯಾವ ಅನುಭಾವವನ್ನು ಕಟ್ಟಲು ಪ್ರಯತ್ನಿಸಿದ್ದಾರೋ ಅದು ಕುವೆಂಪು ಅವರ ವಿಶ್ವಮಾನವ ತತ್ವಕ್ಕೆ ಸಮಾನವಾದದ್ದು’ ಎಂದು ಎಂ.ಎಸ್‌.ಆಶಾದೇವಿ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು