ಬಿಜೆಪಿಗೆ ಮತ ಹಾಕಿದವರ ಆಧಾರ್, ಪಡಿತರ ಕಾರ್ಡ್ ವಾಪಸ್: ವಾದಿರಾಜ್ ಆರೋಪ

ಮೈಸೂರು: ‘ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಮತದಾರರ ಆಧಾರ್ ಕಾರ್ಡ್, ಪಡಿತರ ಚೀಟಿಗಳನ್ನು ಅಲ್ಲಿನ ಸರ್ಕಾರ ವಾಪಸ್ ಪಡೆಯುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಆರೋಪಿಸಿದರು.
ಮೈಸೂರಿನ ಸಾಮಾಜಿಕ ನ್ಯಾಯ ವೇದಿಕೆಯು ನಗರದ ಗೋಪಾಲಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ‘ಪಶ್ಚಿಮ ಬಂಗಾಳ: ಚುನಾವಣೆ ನಂತರದ ಹಿಂಸಾಚಾರದ ಆಂತರ್ಯ’ ವಿಷಯದ ಕುರಿತು ಮಾತನಾಡಿದರು.
‘ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ದಿನ 24 ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು, ಬಿಜೆಪಿ ಬೆಂಬಲಿತ 29 ಜನ ದಲಿತರು ಮೃತಪಟ್ಟಿದ್ದಾರೆ. ಒಟ್ಟು 15 ಸಾವಿರ ದೂರುಗಳು ದಾಖಲಾಗಿವೆ. ಈ ಪೈಕಿ 145 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಾಗಿದೆ. ಸತ್ಯಶೋಧನಾ ವರದಿಗಾಗಿ ಭೇಟಿ ನೀಡಿದ್ದ ಸಮಿತಿ ಸದಸ್ಯರಿಗೆ ಸಂತ್ರಸ್ತರನ್ನು ತೋರಿಸಿದ ವ್ಯಕ್ತಿಯನ್ನೂ ಕೊಲೆ ಮಾಡಲಾಗಿದೆ. ಇಂತಹ ಭಯಾನಕ ವಾತಾವರಣ ಪಶ್ಚಿಮ ಬಂಗಾಳದಲ್ಲಿದೆ. ಸಂತ್ರಸ್ತರು ಜೀವ ಭಯದಿಂದ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ’ ಎಂದು ತಿಳಿಸಿದರು.
‘ಈ ದೌರ್ಜನ್ಯ ಇಲ್ಲಿಗೇ ನಿಂತಿಲ್ಲ. ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಮತದಾರರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಬಿಜೆಪಿಯನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ, ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬರೆಸಿಕೊಳ್ಳುವ ಜತೆಗೆ, ಅವರ ತಲೆಬೋಳಿಸುವಂತಹ ಪ್ರಕರಣಗಳೂ ನಡೆಯುತ್ತಿವೆ’ ಎಂದು ದೂರಿದರು.
ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಮಾತನಾಡಿ, ‘ಪಶ್ಚಿಮ ಬಂಗಾಳದಲ್ಲಿ ಶೇ 23ರಿಂದ 24ರಷ್ಟು ದಲಿತರು ಇದ್ದರೂ, ಬ್ರಾಹ್ಮಣರು, ಕ್ಷತ್ರಿಯರು ರಾಜಕೀಯವಾಗಿ ಪ್ರಬಲ್ಯ ಸಾಧಿಸಿದ್ದಾರೆ. ಉತ್ತರ ಭಾರತದ ಬ್ರಾಹ್ಮಣರಿಗೆ ಹೋಲಿಸಿದರೆ ದಕ್ಷಿಣ ಭಾರತದ ಬ್ರಾಹ್ಮಣರು ಸಾತ್ವಿಕರು. ಪಶ್ಚಿಮ ಬಂಗಾಳದ ಬ್ರಾಹ್ಮಣರು ಹೆಚ್ಚು ಫ್ಯೂಡಲಿಸ್ಟ್ ಆಗಿದ್ದಾರೆ. ಅಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫ್ಯೂಡಲಿಸ್ಟ್ ಆಗಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕು’ ಎಂದು ಹೇಳಿದರು.
‘ಪಶ್ಚಿಮ ಬಂಗಾಳದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ 77 ಕ್ಷೇತ್ರಗಳಲ್ಲಿ ಗೆದ್ದಿದ್ದು, ಈ ಪೈಕಿ 44 ಕ್ಷೇತ್ರಗಳಲ್ಲಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿಯು ತಳವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರ ಪರಿಣಾಮವಿದು. ಇದನ್ನು ಹೀಗೆಯೇ ಮುಂದುವರಿಸಬೇಕು’ ಎಂದರು.
ವೇದಿಕೆಯ ಉಪಾಧ್ಯಕ್ಷ ಡಾ.ಆನಂದ್ ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.