ಗುರುವಾರ , ಜುಲೈ 29, 2021
21 °C

ಮೈಸೂರು | ಬಡವರ ಹಸಿವು ತಣಿಸುವ ಅಕ್ಷಯ ಆಹಾರ ಫೌಂಡೇಷನ್‌: ಮಿಕ್ಕ ಆಹಾರ ಎಸೆಯದಿರಿ

ಮಹಮ್ಮದ್‌ ನೂಮಾನ್‌ Updated:

ಅಕ್ಷರ ಗಾತ್ರ : | |

ಮೈಸೂರು: ‘ತಿನ್ನುವ ಹಕ್ಕಿದೆ, ಬಿಸಾಡುವ ಹಕ್ಕಿಲ್ಲ’ ಎಂಬ ಧ್ಯೇಯದೊಂದಿಗೆ ನಗರದಲ್ಲಿ ಕಳೆದ ಎಂಟು ವರ್ಷಗಳಿಂದ ಬಡವರು, ನಿರ್ಗತಿಕರ ಹಸಿವು ನೀಗಿಸುತ್ತಿರುವ ಅಕ್ಷಯ ಆಹಾರ ಫೌಂಡೇಷನ್‌ ತನ್ನ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ.

ಅಕ್ಷಯ ಫೌಂಡೇಷನ್‌ ‘ಅಕ್ಷಯ ಆಹಾರ ಜೋಳಿಗೆ’ ಹೆಸರಿನಲ್ಲಿ ಮದುವೆ, ಸಭೆ, ಸಮಾರಂಭ, ಹಾಸ್ಟೆಲ್‌, ಹೋಟೆಲ್‌ಗಳಲ್ಲಿ ಉಳಿಯುವ ಆಹಾರವನ್ನು ಸಂಗ್ರಹಿಸಿ ಬಡವರಿಗೆ ವಿತರಿಸುವ ಕೆಲಸ ಮಾಡುತ್ತಿದೆ. 2012ರಿಂದ ಇದುವರೆಗೆ ಲಕ್ಷಾಂತರ ಮಂದಿಯ ಹಸಿವು ನೀಗಿಸಿದೆ.

ಇದೀಗ ಮನೆಗಳಲ್ಲಿ ಉಳಿಯುವ ಅನ್ನ, ಆಹಾರವನ್ನೂ ಸಂಗ್ರಹಿಸಿ ಬಡವರಿಗೆ ಹಂಚಲು ತೀರ್ಮಾನಿಸಿದೆ. ಹಲವು ಮನೆಗಳಲ್ಲಿ ವ್ಯರ್ಥವಾಗಿ ಹೋಗುವ ಆಹಾರದ ಸದ್ಬಳಕೆ ಮಾಡುವುದು ಫೌಂಡೇಷನ್‌ ಉದ್ದೇಶ.

‘ಒಂದೆಡೆ ನಗರದಲ್ಲಿರುವ ಸಾವಿರಾರು ಮನೆಗಳಲ್ಲಿ ನಿತ್ಯ ಎಷ್ಟೋ ಆಹಾರ ವ್ಯರ್ಥವಾದರೆ, ಮತ್ತೊಂದೆಡೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ನೂರಾರು ಮಂದಿ ಇದ್ದಾರೆ. ಮನೆಗಳಲ್ಲಿ ವ್ಯರ್ಥವಾಗುವ ಆಹಾರ ನಿರ್ಗತಿಕರಿಗೆ ತಲುಪಿಸುವುದು ನಮ್ಮ ಗುರಿ’ ಎಂದು ಅಕ್ಷಯ ಆಹಾರ ಫೌಂಡೇಷನ್‌ ಸಂಸ್ಥಾಪಕ ಎಚ್‌.ಆರ್‌.ರಾಜೇಂದ್ರ ತಿಳಿಸಿದರು.

‘ಮನೆಗಳಲ್ಲಿ ಕಾರ್ಯಕ್ರಮ ಇದ್ದಾಗ ಸಿದ್ಧಪಡಿಸುವ ಆಹಾರ ಉಳಿದರೆ ಅಥವಾ ದಿನನಿತ್ಯ ತಯಾರಿಸುವ ಆಹಾರದಲ್ಲಿ ಉಳಿದರೆ ಎಸೆಯಬೇಡಿ. ಒಬ್ಬನಿಗೆ ಸಾಕಾಗುವಷ್ಟು ಆಹಾರ ಉಳಿದರೂ ಕಿಯೋಕ್ಸ್‌ಗೆ ತಂದುಕೊಡಬಹುದು’ ಎಂದರು.

‘ಕಚೇರಿಗಳಲ್ಲಿ ಕೆಲಸ ಮಾಡುವ ಬಹುತೇಕ ಮಂದಿ ಮಧ್ಯಾಹ್ನದ ಊಟವನ್ನು ಮನೆಯಿಂದ ತಂದಿರುತ್ತಾರೆ. ಕೆಲವು ದಿನ ಅನಿರೀಕ್ಷಿತವಾಗಿ ಸಹೋದ್ಯೋಗಿ ಅಥವಾ ಗೆಳೆಯರ ಜತೆ ಹೋಟೆಲ್‌ನಲ್ಲಿ ಊಟ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಆಹಾರವನ್ನು ವ್ಯರ್ಥ ಮಾಡದೆ, ಕಿಯೋಕ್ಸ್‌ಗೆ ನೀಡಬಹುದು’ ಎಂದು ಹೇಳಿದರು.

ಸಯ್ಯಾಜಿ ರಾವ್‌ ರಸ್ತೆಯ ಕೆ.ಆರ್‌.ವೃತ್ತ, ಕುವೆಂಪುನಗರದ ಸುಮ ಸೋಪಾನ ಪಾರ್ಕ್‌, (ಎ ಟು ಝಡ್‌ ಕಾಂಪ್ಲೆಕ್ಸ್ ಎದುರು) ಮತ್ತು ಸಿದ್ಧಾರ್ಥ ಬಡಾವಣೆಯ ಮೋಕ್ಷ ಮಾರ್ಗದಲ್ಲಿ ಅಕ್ಷರ ಆಹಾರ ಜೋಳಿಗೆ ಕಿಯೋಕ್ಸ್‌ಗಳಿದ್ದು, ಬೆಳಿಗ್ಗೆ 9ರಿಂದ ಸಂಜೆ 7ರವರೆಗೂ ಅಲ್ಲಿಗೆ ಆಹಾರ ತಂದುಕೊಡಬಹುದು ಎನ್ನುತ್ತಾರೆ.

ಫೌಂಡೇಷನ್‌ ಹಲವು ವರ್ಷಗಳಿಂದ ನಡೆಸುತ್ತಿರುವ ಸೇವೆಯನ್ನು ನೋಡಿ ಪಾಲಿಕೆ ಸದಸ್ಯ ಶಿವಕುಮಾರ್‌ ಅವರು ಕುವೆಂಪುನಗರದಲ್ಲಿ ಕಿಯೋಕ್ಸ್‌ ಕೊಡುಗೆಯಾಗಿ ನೀಡಿದ್ದಾರೆ. ಕೆ.ಆರ್‌.ಆಸ್ಪತ್ರೆ ಬಳಿ ಕಿಯೋಕ್ಸ್‌ ಆರಂಭಿಸಲು ಪಾಲಿಕೆ ಸಹಕಾರ ಕೊಟ್ಟಿದೆ. ರೋಟರಿ ಈಸ್ಟ್‌ ಸಂಸ್ಥೆಯವರೂ ಫೌಂಡೇಷನ್‌ ಬೆಂಬಲಕ್ಕೆ ನಿಂತಿದ್ದಾರೆ.

ಲಾಕ್‌ಡೌನ್‌ ವೇಳೆಯೂ ಸೇವೆ

ಕೊರೊನಾದಿಂದ ಲಾಕ್‌ಡೌನ್‌ ಹೇರಿದ್ದಾಗ ನಗರದಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆದಿಲ್ಲ. ಆದರೂ ಅಕ್ಷಯ ಆಹಾರ ಫೌಂಡೇಷನ್‌ನ ಸೇವೆ ನಿರಂತರ ಮುಂದುವರಿದಿತ್ತು. 

‘ಲಾಕ್‌ಡೌನ್‌ ವೇಳೆ ಪ್ರತಿನಿತ್ಯ 2 ಸಾವಿರದಿಂದ 3 ಸಾವಿರ ಮಂದಿಗೆ ಆಹಾರ ವಿತರಿಸಲಾಗಿದೆ. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಅಲ್ಲದೆ ಏಕಲವ್ಯನಗರ, ರಮಾಬಾಯಿನಗರ, ಬನ್ನಿಮಂಟಪ ಸೇರಿದಂತೆ ವಿವಿಧ ಕೊಳೆಗೇರಿ ಪ್ರದೇಶಗಳಲ್ಲಿ ಆಹಾರ ವಿತರಿಸಲಾಗಿದೆ’ ಎಂದು ರಾಜೇಂದ್ರ ತಿಳಿಸಿದರು.

ಆಹಾರ ನೀಡಲು ಬಯಸುವವರು ಮೊ: 9148987375 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು