ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತ್ಯಾಜ್ಯ ಮುಕ್ತ ‘ಆಲನಹಳ್ಳಿ ಕೆರೆ’

ಮೂಲ ರೂಪಕ್ಕೆ ಮರಳಿದ ಜಲಮೂಲ l ರೈತರ ಜಮೀನಿಗೆ ಫಲವತ್ತಾದ ಹೂಳು
Last Updated 22 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ಬಿದ್ದ ಮಳೆ ನೀರು ಪೋಲಾಗದಂತೆ ಒಡಲು ತುಂಬಿಸಿಕೊಳ್ಳುತ್ತಿದ್ದ ನಗರವೂ ಸೇರಿದಂತೆ ಜಿಲ್ಲೆಯ ನೂರಾರು ಕೆರೆ–ಕಟ್ಟೆಗಳು ನಗರೀಕರಣದಿಂದಾಗಿ ಕಣ್ಮರೆಯಾಗುತ್ತಿವೆ. ಇವುಗಳ ಅಸ್ತಿತ್ವವನ್ನು ಉಳಿಸುವುದೇ ಸವಾಲಾಗಿರುವಾಗ ‘ಆಲನಹಳ್ಳಿ ಕೆರೆ’ ಈಗ ಮೂಲ ಸ್ವರೂಪಕ್ಕೆ ಮರಳಿದೆ.

ನಗರದ ತಿ.ನರಸೀಪುರ ರಸ್ತೆಯಲ್ಲಿರುವ ಆಲನಹಳ್ಳಿಯ ಕೆರೆಗೆ ‘ಹಾಲು ಕೆರೆ’ ಎಂದೇ ಹೆಸರು. ಹೂಳಿನಿಂದ ತುಂಬಿ ಅದರ ಅಸ್ತಿತ್ವವೇ ಮಾಯವಾಗಿತ್ತು. ಗ್ರಾಮೀಣಾಭಿವೃದ್ಧಿ ಇಲಾಖೆ, ಜಿಲ್ಲಾ ‍ಪಂಚಾಯಿತಿ, ಏಷ್ಯನ್‌ ಪೇಂಟ್ಸ್‌, ಜೆ.ಕೆ.ಟ
ಯರ್ಸ್ ಕಂಪನಿಗಳು ಹಾಗೂ ಸಂಘ–ಸಂಸ್ಥೆಗಳ ಶ್ರಮದಿಂದ ಅಭಿವೃದ್ಧಿ ಕಂಡಿದೆ.

ಏಷ್ಯನ್‌ ಪೇಂಟ್ಸ್‌ನ ಸಿಎಸ್‌ಆರ್‌ ನಿಧಿಯಲ್ಲಿ ‘ಕ್ರೆಡಿಟ್‌-ಐ’ ಸಂಸ್ಥೆಯು ‘ನಮ್ಮ ಜಲ ಭದ್ರತೆ’ ಯೋಜನೆಯಡಿ ಹೂಳನ್ನು ಇದೀಗ ತೆರವುಗೊಳಿಸಿದೆ. ಆಲನಹಳ್ಳಿ ಬಡಾವಣೆ ಬೆಳೆದಂತೆ ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್‌ ವಸ್ತುಗಳು ಕೆರೆಯನ್ನು ತುಂಬಿದ್ದವು. ಕೆರೆಯ ಒಟ್ಟು ವಿಸ್ತೀರ್ಣ 2.3 ಎಕರೆಯಿದ್ದು, 1 ಎಕರೆಯಷ್ಟೇ ಉಳಿದಿತ್ತು. ‘ಐಐಟಿ ಫಾರ್‌ ಐಐಟಿ’ ಸಂಸ್ಥೆಯ ತಾಂತ್ರಿಕ ಮಾರ್ಗದರ್ಶನದೊಂದಿಗೆ ಕೆರೆಯ ಒಡಲು ಮೂಲಸ್ವರೂಪಕ್ಕೆ ಮರಳಿದೆ.

ಹೂಳು ತೆರವಿನಿಂದ ಕೆರೆಯಲ್ಲಿ ಶುದ್ಧ ನೀರು ಸಂಗ್ರಹಗೊಂಡಿದೆ. ಬೇಸಿಗೆಯಲ್ಲೂ ಅಂತರ್ಜಲ ಉಕ್ಕುತ್ತಿರುವುದು ಈ ಕೆರೆಯ ವಿಸ್ಮಯ!

ಕೆರೆಯ ಅಂಚನ್ನು ಕಾಂಕ್ರೀಟ್‌ ಮಾಡದೆ ಜೀವವೈವಿಧ್ಯದ ಸಂರಕ್ಷಣೆಯ ಉದ್ದೇಶದಿಂದ ಮಣ್ಣಿನಲ್ಲೇ ಕೆರೆಯ ಏರಿಯನ್ನು ಮೂಲಸ್ವರೂಪದಲ್ಲಿ ಉಳಿಸಿಕೊಳ್ಳಲಾಗಿದೆ. ಕೆರೆಯ ಅಂಚಿನ ಹೂಳನ್ನು ಇಳಿಜಾರು ಹಾಗೂ ಮೆಟ್ಟಿಲು ಸ್ವರೂಪದಲ್ಲಿ ತೆಗೆಯಲಾಗಿದೆ.

‘ಕೆರೆಯ ಫಲವತ್ತಾದ ಹೂಳನ್ನು ಚಿಕ್ಕಹಳ್ಳಿ, ಆಲನಹಳ್ಳಿ, ದಂಡಿಕೆರೆ, ವಾಜಮಂಗಲ, ಭುಗತಹಳ್ಳಿ, ನೇತಾಜಿನಗರ, ಲಲಿತಾದ್ರಿಪುರ, ನಾಡನಹಳ್ಳಿ ಕೃಷಿಕರು ಕೊಂಡೊಯ್ದಿದ್ದಾರೆ. ಟ್ರಾಕ್ಟರ್‌ ಲೋಡ್‌ಗೆ ₹ 30 ವಂತಿಗೆ ಸಂಗ್ರಹಿಸಲಾಗಿದೆ’ ಎಂದು ‘ಕ್ರೆಡಿಟ್‌ ಐ’ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ವರ್ಷ ತಿಳಿಸಿದರು.

‘ಹೂಳು ತೆಗೆದಾಗ ಮಣ್ಣು ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪ್ರತ್ಯೇಕಗೊಳಿಸಲಾಯಿತು. ಕೆರೆ ಹೂಳಿನ ಮಣ್ಣನ್ನು ಜಮೀನುಗಳಿಗೆ ಹಾಕಿದರೆ ಐದು ವರ್ಷ ರಾಸಾಯನಿಕ ಗೊಬ್ಬರ ಬಳಸದೆ ಉತ್ತಮ ಇಳುವರಿಯನ್ನು ಪಡೆಯಬಹುದು’ ಎಂದು ಹೇಳಿದರು.

‘ಏಷ್ಯನ್‌ ಪೇಂಟ್ಸ್‌ ಜಿಲ್ಲೆಯಾದ್ಯಂತ ಕೆರೆಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಇದಕ್ಕೆ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಕೆರೆ ಕಾಮಗಾರಿಗೂ ಮುಂಚೆ ನಗರದ ಪರಿಸರ ತಜ್ಞ ಯು.ಎನ್‌.ರವಿಕುಮಾರ್‌ ಭೂ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದರು. ಅವರ ಸಲಹೆಯನ್ನು ಪಡೆಯಲಾಗಿದೆ’ ಎಂದರು.

ಆಲನಹಳ್ಳಿ ನಿವಾಸಿ ರೋಟೇರಿಯನ್‌ ಕಿರಣ್‌ ರಾಬರ್ಟ್‌ ಮಾತನಾಡಿ, ‘ಆಲನಹಳ್ಳಿ ಕೆರೆಯ ಏರಿ, ವಾಕಿಂಗ್‌ ಪಾತ್, ಉದ್ಯಾನ ಮತ್ತು ಇತರ ಅಭಿವೃದ್ಧಿಯನ್ನು ಜೆ.ಕೆ.ಟಯರ್ಸ್‌ ಕಂಪನಿಯು ವಹಿಸಿಕೊಂಡಿದ್ದು, ಮೈರಾಡ ಸಂಸ್ಥೆಯು ಕೆಲವು ದಿನಗಳಲ್ಲೇ ಕಾಮಗಾರಿ ಆರಂಭಿಸಲಿದೆ’ ಎಂದು ತಿಳಿಸಿದರು.

ವಿಶ್ವ ಜಲ ದಿನದ ವೇಳೆ ನಗರದ ಜಲಮೂಲವೊಂದು ಮೂಲ ಅಸ್ತಿತ್ವಕ್ಕೆ ಮರಳಿದ್ದು, ಮಳೆಗಾಲಕ್ಕೆ ಕಾಯುತ್ತಿದೆ.

‘ಶ್ರಮ ವ್ಯರ್ಥವಾಗಲಿಲ್ಲ’: ‘ಹಲವು ವರ್ಷಗಳಿಂದ ಆಲನಹಳ್ಳಿ ಕೆರೆ ಅಭಿವೃದ್ಧಿಗಾಗಿ ಕಚೇರಿಗಳಿಗೆ ಅಲೆದಿದ್ದೆ. ಆದರೆ, ಶ್ರಮ ವ್ಯರ್ಥವಾಗಲಿಲ್ಲ. ಸರ್ಕಾರ, ಅಧಿಕಾರಿಗಳು ಸಾಮಾನ್ಯ ನಾಗರಿಕನ ಮನವಿಯನ್ನು ಆಲಿಸಿದ್ದಾರೆ. ಇದೀಗ ಹೂಳು ತೆಗೆಯಲಾಗಿದೆ’ ಎಂದು ನೇತಾಜಿ ನಗರ ನಿವಾಸಿ, ರೋಟರಿ ಸಂಸ್ಥೆಯ ಕಿರಣ್‌ ರಾಬರ್ಟ್‌
ಹರ್ಷ ವ್ಯಕ್ತಪಡಿಸಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕೆರೆ ಅಭಿವೃದ್ಧಿಗೆ ಮನವಿ ಮಾಡಲಾಗಿತ್ತು. ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾ ಪಂಚಾಯಿತಿ ಮೂಲಕ ಕೆರೆ ದಶಕಗಳ ನಂತರ ಜೀವಂತಿಕೆ ಪಡೆಯುತ್ತಿದೆ’ ಎಂದರು.

‘ಅಂತರ್ಜಲ; ಕಾಣದ್ದನ್ನು ಸಾಕಾರಗೊಳಿಸುವುದು’: ವಿಶ್ವ ಜಲ ದಿನ– 2022ರ ಘೋಷವಾಕ್ಯ ‘ಅಂತರ್ಜಲ: ಕಾಣದ್ದನ್ನು ಸಾಕಾರಗೊಳಿಸುವುದು’. ಪ್ರತಿ ವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ, ಕೆರೆ, ಜಲ ಮೂಲಗಳನ್ನು ಉಳಿಸಿದರೆ 6 ಗುರಿಗಳನ್ನು ಮುಟ್ಟಬಹುದು. ಅಂತರ್ಜಲವನ್ನು ಹೆಚ್ಚಿಸುವುದು ಎಷ್ಟು ಮುಖ್ಯವೋ, ರಾಸಾಯನಿಕಗಳು ಜಲಮೂಲಗಳನ್ನು ಕಾಪಾಡುವುದೂ ಇಂದಿನ ತುರ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT