ಬುಧವಾರ, ನವೆಂಬರ್ 25, 2020
21 °C
ಬೆಂಬಲ ನೀಡಲು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮನವಿ

26ರಂದು ಅಖಿಲ ಭಾರತ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಹಾಗೂ ಕೃಷಿ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ವತಿಯಿಂದ ನ.26ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ತಿಳಿಸಿದರು.

ಈ ಮುಷ್ಕರ ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು ಬೆಂಬಲ ನೀಡುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

‘ಸಂಪತ್ತು ಸೃಷ್ಟಿಸುವ ಶ್ರಮಿಕನನ್ನು, ಅನ್ನದಾತ ರೈತನನ್ನು ಗುಲಾಮಗಿರಿಗೆ ತಳ್ಳುವ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಲ್ಲರೂ ಒಂದಾಗಿ ಖಂಡಿಸಬೇಕು. ಈಗಾಗಲೇ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಕೈ ಜೋಡಿಸಿವೆ. ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಇಲಾಖೆ, ಸಂಸ್ಥೆಗಳ ನೌಕರರು, ಗುತ್ತಿಗೆ ಕಾರ್ಮಿಕರು, ಬಿಸಿಯೂಟ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಆಟೊ, ಟ್ಯಾಕ್ಸಿ ಚಾಲಕರು ಬೆಂಬಲ ವ್ಯಕ್ತಪಡಿಸುವುದಾಗಿ ಮುಂದೆ ಬಂದಿದ್ದಾರೆ’ ಎಂದರು.

‘ಅಂದು ಪುರಭವನದ ಮುಂದೆ ಸೇರಲು ಕಾರ್ಮಿಕ ಸಂಘಟನೆಗಳ ಸದಸ್ಯರಿಗೆ ಸೂಚನೆ ನೀಡಿದ್ದೇವೆ. ಸಾರ್ವಜನಿಕ ಸಭೆ ನಡೆಸಲು ಪೊಲೀಸರ ಅನುಮತಿ ಕೇಳಿದ್ದೇವೆ. ಆದರೆ, ಕೋವಿಡ್‌ ಕಾರಣ ನೀಡಿ ಅನುಮತಿ ನೀಡಲು ಹಿಂದೇಟು ಹಾಕಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಯನ್ನೂ ಭೇಟಿಯಾಗಿ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

ಎಚ್ಚರಿಕೆ ಗಂಟೆ: ಹಲವಾರು ದಲಿತ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಈ ಮುಷ್ಕರ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯರಾಂ, ಚಂದ್ರಶೇಖರ್ ಮೇಟಿ, ಸುನಿಲ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.