ಶುಕ್ರವಾರ, ಮಾರ್ಚ್ 24, 2023
30 °C
ಪುನರ್‌ವಿಂಗಡಣೆ ಬಳಿಕ ಮೈಸೂರು ತಾಲ್ಲೂಕು ಜಿ.ಪಂ. ಕ್ಷೇತ್ರಗಳ ಚಿತ್ರಣ ಬದಲು

ಬೇರೆ ಕ್ಷೇತ್ರಗಳತ್ತ ಆಕಾಂಕ್ಷಿಗಳು

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಘೋಷಣೆಯ ಬಳಿಕ ಹಲವು ಹಾಲಿ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.

2016ರ ಚುನಾವಣೆಯಲ್ಲಿ ಮೈಸೂರು ತಾಲ್ಲೂಕಿನಲ್ಲಿ 10 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದವು. ಪುನರ್‌ವಿಂಗಡಣೆ ಬಳಿಕ ಇದು ಏಳಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸ್ಥಾನಗಳ ಸಂಖ್ಯೆ 49 ರಿಂದ 53ಕ್ಕೆ ಏರಿಕೆಯಾಗಿದ್ದರೂ, ಮೈಸೂರು ತಾಲ್ಲೂಕಿನಲ್ಲಿ ಮಾತ್ರ ಕಡಿಮೆಯಾಗಿದೆ.

ಮೈಸೂರು ನಗರದ ಸುತ್ತಮುತ್ತಲಿನ ಕೆಲವು ಗ್ರಾಮ ಪಂಚಾಯಿತಿಗಳು ಪಾಲಿಕೆ ವ್ಯಾಪ್ತಿಗೆ ಸೇರಿರುವುದು ಮತ್ತು ಬೋಗಾದಿ, ಶ್ರೀರಾಂಪುರ, ಕಡಕೋಳ, ರಮ್ಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಿರುವುದು ಇದಕ್ಕೆ ಕಾರಣ. ಕಳೆದ ಬಾರಿ ಇದ್ದ ಶ್ರೀರಾಂಪುರ, ಹೂಟಗಳ್ಳಿ ಮತ್ತು ಹಿನಕಲ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಈ ಬಾರಿ ಇಲ್ಲ. ಹೊಸ ಮೀಸಲಾತಿ ಘೋಷಣೆಯಾಗಿರುವುರಿಂದಲೂ ಕೆಲವರು ಅಕ್ಕಪಕ್ಕದ ಕ್ಷೇತ್ರಗಳತ್ತ ಕಣ್ಣಿಡುವಂತಾಗಿದೆ.

ಮೈಸೂರು ಮೇಯರ್‌ ಆಗಿದ್ದ ರುಕ್ಮಿಣಿ ಮಾದೇಗೌಡ ಅವರ ಪತಿ ಜೆಡಿಎಸ್‌ನ ಜಿ.ಮಾದೇಗೌಡ ಪ್ರತಿನಿಧಿಸುತ್ತಿದ್ದ ಶ್ರೀರಾಂಪುರ ಕ್ಷೇತ್ರ, ಜೆಡಿಎಸ್‌ನ ಚಂದ್ರಿಕಾ ಸುರೇಶ್‌ ಪ್ರತಿನಿಧಿಸುತ್ತಿದ್ದ ಹೂಟಗಳ್ಳಿ ಮತ್ತು ಕಾಂಗ್ರೆಸ್‌ನ ರಾಕೇಶ್ ಪಾಪಣ್ಣ ಅವರು ಗೆದ್ದಿದ್ದ ಹಿನಕಲ್‌ ಕ್ಷೇತ್ರ ಮರೆಯಾಗಿದೆ.

‌ಬೇರೆ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುವಿರಾ ಎಂಬ ಪ್ರಶ್ನೆಗೆ ಮಾದೇಗೌಡ, ‘ಈಗಲೇ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ನೋಡೋಣ’ ಎಂದರು.

‘ಹೂಟಗಳ್ಳಿ ನಗರಸಭೆ ಆಗಿರುವುದರಿಂದ ಅಲ್ಲಿ ಚುನಾವಣೆ ಘೋಷಣೆಯಾದ ಬಳಿಕ ತೀರ್ಮಾನಿಸುವೆ. ಮತ್ತೊಮ್ಮೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುವ ಯೋಚನೆ ಇಲ್ಲ’ ಎಂದು ಚಂದ್ರಿಕಾ ಸುರೇಶ್‌ ಹೇಳಿದರು.

ಪುನರ್‌ವಿಂಗಡಣೆಯಿಂದ ಕೆಲವರು ಕ್ಷೇತ್ರವನ್ನು ಕಳೆದುಕೊಂಡರೆ, ಮೀಸ ಲಾತಿ ನಿಗದಿಯಾದ ಬಳಿಕ ಇನ್ನಷ್ಟು ಮಂದಿಗೆ ಹಾಲಿ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಕೈತಪ್ಪಿದೆ. ಇಲವಾಲ ಕ್ಷೇತ್ರ ಸಾಮಾನ್ಯ ವರ್ಗದಿಂದ ಬಿಸಿಎಂ– ಎ ಮಹಿಳೆಗೆ ಮೀಸಲಾಗಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್‌ನ ಎಸ್‌.ಅರುಣ್‌ ಕುಮಾರ್ ಬೇರೆ ಕ್ಷೇತ್ರವನ್ನು ಹುಡುಕಬೇಕಿದೆ.

‘ಈ ಬಾರಿಯೂ ಸ್ಪರ್ಧಿಸಬೇಕೆಂದಿದ್ದು, ಬೇರೆ ಕ್ಷೇತ್ರದಲ್ಲಿ ಅವಕಾಶ ಲಭಿಸುವುದೇ ಎಂಬುದನ್ನು ನೋಡಬೇಕು. ವರಿಷ್ಠರ ತೀರ್ಮಾನದಂತೆ ನಡೆಯುವೆ’ ಎಂದು ಅವರು ಪ್ರತಿಕ್ರಿಯಿಸಿದರು.

ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ ಅವರಿದ್ದ ಕ್ಷೇತ್ರ ಸಾಮಾನ್ಯ ವರ್ಗದಿಂದ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ‘ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬೀರಿಹುಂಡಿ ಮೂರು ಭಾಗಗಳಾಗಿ ಹಂಚಿಹೋಗಿದೆ. ಧನಗಳ್ಳಿ ಹೆಸರಿನಲ್ಲಿ ಹೊಸ ಕ್ಷೇತ್ರ ಬಂದಿದೆ. ಸದ್ಯ ಏನನ್ನೂ ತೀರ್ಮಾನಿಸಿಲ್ಲ’ ಎಂದು ಬಸವಣ್ಣ ನುಡಿದರು.

ಆಕ್ಷೇಪಣೆ ಸಲ್ಲಿಕೆ:  ‘ಶಾಸಕನಾಗಿ ನನಗೆ ಮೊದಲ ಬಾರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಾಗಿದೆ. ಕೆಲವರು ಮೀಸಲಾತಿ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಚುನಾವಣೆ ಆಯೋಗ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ಮತ್ತು ಪಕ್ಷದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

7 ಜಿ.ಪಂ ಕ್ಷೇತ್ರಗಳು: ಇಲವಾಲ, ಮೆಲ್ಲಹಳ್ಳಿ (ಹಾರೋಹಳ್ಳಿ), ಮಾರ್ಬಳ್ಳಿ (ಜಯಪುರ), ಉದ್ಬೂರು (ಕಡಕೊಳ), ವಾಜಮಂಗಲ (ವರುಣ), ಧನಗಳ್ಳಿ (ಬೀರಿಹುಂಡಿ) ಮತ್ತು ಬೆಲವತ್ತ (ಸಿದ್ದಲಿಂಗಪುರ) ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮೈಸೂರು ತಾಲ್ಲೂಕಿನಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು