ಹತ್ತು ಆತ್ಮಕಥೆ ಬರೆದರೂ ತೃಪ್ತಿಯಿಲ್ಲ; ಅರವಿಂದ ಮಾಲಗತ್ತಿ

ಮೈಸೂರು: ‘ಸಮಾಜ ಪರಿವರ್ತನೆಯ ಪ್ರಮುಖ ಅಸ್ತ್ರವೇ ಆತ್ಮಕಥನ’ ಎಂದು ಸಾಹಿತಿ ಅರವಿಂದ ಮಾಲಗತ್ತಿ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.
ನಗರದ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ ಬಳಗ, ಮೈಸೂರು ಗೆಳೆಯರ ಬಳಗದ ಸಹಯೋಗದಲ್ಲಿ ನಡೆದ ಸ್ವರಚಿತ ‘ನೀವೂ ದೇವರಾಗಿ’ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯದ ಪರಿಭಾಷೆಯಲ್ಲಿ ಸಮಾಜ ಪರಿವರ್ತನೆಗೆ ಆತ್ಮಕಥನ ರಚಿಸಿರುವೆ. ನಾನು ಬರೆದ ಎರಡೂ ಆತ್ಮಕಥನಗಳು ನನ್ನ ಆತ್ಮಕಥೆಗಳಲ್ಲ. ಆದರೆ ಅದರೊಳಗೆ ನಾನಿರುವೆ. ನನ್ನ ಸುತ್ತಲಿನ ಪರಿಸರ, ನೂರಾರು ಆತ್ಮಗಳಿವೆ’ ಎಂದು ಅವರು ಹೇಳಿದರು.
‘ಆತ್ಮಕಥನ ಎಂದರೆ ಕಂಡಿದ್ದನ್ನೆಲ್ಲಾ ತುಂಬೋ ಗೋಣಿಚೀಲವಲ್ಲ. ನನ್ನೆರಡು ಆತ್ಮಕಥನಗಳನ್ನು ದಲಿತ ಆತ್ಮಕಥೆ ಎಂದೇ ವ್ಯಾಖ್ಯಾನಿಸಿ ನೋಡಿ. ದಲಿತ ಸಂಪ್ರದಾಯದಲ್ಲಿ ಸಡಿಲಿಕೆ ಇಲ್ಲ. ಯಾವೊಂದು ಜನಾಂಗದ ಸಂಪ್ರದಾಯ, ಪದ್ಧತಿಯಲ್ಲೂ ಸಡಿಲಿಕೆ ಇರಲ್ಲ’ ಎಂದರು.
ಕೃತಿ ಬಿಡುಗಡೆ ಮಾಡಿದ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ ‘‘ನೀವೂ ದೇವರಾಗಿ’ ಅರವಿಂದರ ಆತ್ಮಕಥೆ ಮಾತ್ರವಲ್ಲ. ಒಂದು ಸಮುದಾಯದ ಆತ್ಮಕತೆಯಾಗಿದೆ’ ಎಂದು ತಿಳಿಸಿದರು.
‘ಮಾಲಗತ್ತಿ ನಾಲ್ಕು ದಶಕದಿಂದ ಕಾವ್ಯ, ಕಾದಂಬರಿ, ನಾಟಕ, ಸಂಶೋಧನೆ, ವಿಮರ್ಶೆ, ಜಾನಪದ, ಸಂಪಾದನೆ, ಆತ್ಮಕಥೆ... ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಸಾಹಿತ್ಯವನ್ನು ಮರು ಓದಿಗೊಳಪಡಿಸಿದರೆ 20ನೇ ಶತಮಾನದ ಪ್ರಮುಖ ಧ್ವನಿಯೊಂದು ಕಾಣಲಿದೆ’ ಎಂದು ಹೇಳಿದರು.
‘ದಮನಿತರ ಸಾಹಿತ್ಯವೆಂದರೆ ಆಕ್ರೋಶ ಧ್ವನಿಯನ್ನೇ ಪ್ರಧಾನವಾಗಿ ಪ್ರಸ್ತಾಪ ಮಾಡಲಾಗುತ್ತಿದೆ. ಆದರೆ, ಅರವಿಂದರ ಆಕ್ರೋಶದ ದನಿ ಭಿನ್ನವಾಗಿದೆ. ಇಡೀ ಸಾಹಿತ್ಯದ ಧ್ವನಿ ತಣ್ಣನೆಯ ಚಿಂತನೆಯ ಧ್ವನಿ. ಪ್ರಜ್ಞಾವಂತ ಮನಸ್ಸೊಂದು ಎಚ್ಚರದಿಂದ ಹಾಡುವ ಸೃಹಜಶೀಲ ಧ್ವನಿಯಾಗಿದೆ. ಹೀಗಾಗಿ ಮಾಲಗತ್ತಿಯವರ ಸಾಹಿತ್ಯವನ್ನು ಭಿನ್ನ ನೆಲೆಯಲ್ಲಿ ಚರ್ಚಿಸುವ ಅಗತ್ಯವಿದೆ. ಆದರೆ, ಈ ರೀತಿ ಚರ್ಚೆ ಆಗುತ್ತಿಲ್ಲ’ ಎಂದು ಬಾಲಸುಬ್ರಮಣ್ಯ ಬೇಸರ ವ್ಯಕ್ತಪಡಿಸಿದರು.
ಡಾ.ಬಿ.ಸಿ.ದೊಡ್ಡೇಗೌಡ, ಪದ್ಮಶ್ರೀ, ಶಭಾನ ಕೃತಿಯ ಒಂದೊಂದು ಅಧ್ಯಯನ ಓದಿದರು. ಕೃತಿ ಕುರಿತು ಡಾ.ರಾಜಶೇಖರ ಜಿ.ಮಠಪತಿ (ರಾಗಂ) ಮಾತನಾಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಬಸೂ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.