ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಿಗ್ರಾಮ: ಆಷಾಢಕ್ಕೂ ಮುನ್ನ ಮೈದುಂಬಿಕೊಂಡ ಜೀವನದಿ

ಚುಂಚನಕಟ್ಟೆ ಧನುಷ್ಕೋಟಿ ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ಕಾವೇರಿ
Last Updated 21 ಜೂನ್ 2021, 3:05 IST
ಅಕ್ಷರ ಗಾತ್ರ

ಸಾಲಿಗ್ರಾಮ: ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದೆ. ಪ್ರಕೃತಿಯ ಸೊಬಗಿನಲ್ಲಿ ಹರಿದು ಬರುವ, ಶ್ರೀರಾಮನಿಂದ ನಿರ್ಮಾಣಗೊಂಡಿದೆ ಎಂದು ಪೌರಾಣಿಕ ಐತಿಹ್ಯದ ‘ಧನುಷ್ಕೋಟಿ’ ಯಲ್ಲಿ ಕಾವೇರಿ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಪರಿಸರದ ಸೊಬಗು ಹೆಚ್ಚಿಸಿದೆ.

ನಾಡಿನ ಜೀವನದಿಯಾದ ಕಾವೇರಿಯ ಈ ಸೌಂದರ್ಯ ಕಣ್ತುಂಬಿ ಕೊಳ್ಳಲು ಪ್ರವಾಸಿಗರು ಮಾತ್ರ ಇಲ್ಲ. ಕೊರೊನಾ ಲಾಕ್‌ಡೌನ್‌ ಕಾರಣದಿಂದ ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ.

ಕೊಡಗಿನಲ್ಲಿ ಮಳೆಯಬ್ಬರ ಹೆಚ್ಚಾಗುತ್ತಿದ್ದಂತೆ ವಿವಿಧ ಜಿಲ್ಲೆಗಳಿಂದ ಪ್ರಕೃತಿಪ್ರಿಯರು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಹೊರವಲಯದಲ್ಲಿ ಭೋರ್ಗರೆದು ಹರಿಯುವ ಕಾವೇರಿ ದಂಡೆ ಮೇಲೆ ನಿಂತು ಸುಮಾರು 15 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಕಾವೇರಿಯ ಜಲಧಾರೆಯನ್ನು ನೋಡುತ್ತಾ ದಿನ ಪೂರ್ತಿ ನದಿದಂಡೆ ಮೇಲೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ.

ಪ್ರತಿ ವರ್ಷ ಆಷಾಢ ಮಾಸದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿತ್ತು. ಆದರೆ, ಈ ಬಾರಿ ಅವಧಿಗಿಂತಲೂ ಮುನ್ನವೇ ಕಾವೇರಿ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಈ ದೃಶ್ಯವನ್ನು ವೀಕ್ಷಿಸಲು ಕೊರೊನಾದಿಂದಾಗಿ ಸಾಧ್ಯವಾಗುತ್ತಿಲ್ಲ ಎಂಬುದು ಬೇಸರ ತರಿಸಿದೆ ಎಂದು ಕೆ.ಎಲ್.ರಮೇಶ್ ಹೇಳಿದರು.

ಶ್ರೀರಾಮ ಸೀತಾಮಾತೆ ಜತೆ ವನವಾಸ ಮಾಡಿರುವ ಕುರುಹು ಇರುವ ಚುಂಚನಕಟ್ಟೆ ಗ್ರಾಮದಲ್ಲಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ವಿಶೇಷ ಸ್ಥಳ ಎಂದರೆ ‘ಧನುಷ್ಕೋಟಿ ಜಲಪಾತ’. ವನವಾಸದ ದಿನಗಳಲ್ಲಿ ಸೀತಾಮಾತೆ ನೀರು ಬೇಕು ಎಂದಾಗ ಶ್ರೀರಾಮ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ‘ಧನುಷ್ಕೋಟಿ’ ಎಂದು ಕರೆಯುತ್ತಾರೆ. ಇಲ್ಲಿ ಧುಮ್ಮಿಕ್ಕುವ ಕಾವೇರಿ ಅರಿಶಿಣ, ಸೀಗೆ ಮಿಶ್ರಿತ ಬಣ್ಣದಿಂದ ಕಾಣುವ ಜತೆಗೆ ಹಾಲಿನಂತೆ ನೊರೆಯಾಗಿ ಬೀಳುವುದನ್ನು ನೋಡುವುದೇ ಒಂದು ಸೊಬಗು.

ಸೀತಾಮಾತೆ ಸ್ನಾನ ಮಾಡುವ ವೇಳೆ ಮೈದುನ ಲಕ್ಷ್ಮಣ ಆ ಮಾರ್ಗವಾಗಿ ಬರುವುದನ್ನು ಗಮನಿಸಿ ಬಂಡೆಯನ್ನು ಸೀಳಿಕೊಂಡು ಮರೆಯಾದಳು ಎಂಬ ಐತಿಹ್ಯ ಇರುವ ‘ಸೀತಾಮಡು’ವಿನಲ್ಲಿ ಧುಮ್ಮಿಕ್ಕುವ ಕಾವೇರಿಗೆ ಮುತ್ತೈದೆಯರು ಮತ್ತು ನವದಂಪತಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದರೆ, ಲಾಕ್‌ಡೌನ್‌ನಿಂದಾಗಿ ಅದಕ್ಕೆ ಅವಕಾಶ ಇಲ್ಲ ಎಂದು ದೊಡ್ಡಕೊಪ್ಪಲು ವಿನಯ್‌ಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT