ಶನಿವಾರ, ಜೂನ್ 19, 2021
21 °C
ಮನೆ ಮನೆಯಲ್ಲೂ ಶ್ರೀರಾಮ ಪೂಜೆ

ಶ್ರೀರಾಮ ಭಾರತದ ಅಸ್ಮಿತೆ: ಶಾಸಕ ಎಸ್‌.ಎ.ರಾಮದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

A ramadas

ಮೈಸೂರು: ‘ಶ್ರೀರಾಮ ದೇಶದ ಅಸ್ಮಿತೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಗೊಳ್ಳಬೇಕು ಎಂಬ ಭಾರತೀಯರ ಶತ ಶತಮಾನದ ಕನಸು ಆ.5ರಂದು ನನಸಾಗಲಿದೆ’ ಎಂದು ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

‘ಪ್ರಧಾನಿ ಮೋದಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆ.5ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮ 90 ದೇಶಗಳಲ್ಲಿ ನೇರ ಪ್ರಸಾರಗೊಳ್ಳಲಿದೆ’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 14 ವೃತ್ತಗಳಲ್ಲೂ ಬುಧವಾರ ಶ್ರೀರಾಮನ ಪೂಜೆ ನಡೆಯಲಿದೆ. 312 ದೇಗುಲ, 25 ರಾಮ ಮಂದಿರಗಳಲ್ಲೂ ವಿಶೇಷ ಪೂಜೆ ಜರುಗಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ರಾಮಭಕ್ತರು ತಮ್ಮ ಮನೆಗಳಲ್ಲಿ ಶ್ರೀರಾಮ ಪೂಜೆಗೆ ಮುಂದಾಗಿದ್ದಾರೆ. ಇದು ಆ.5ರ ವೇಳೆಗೆ 25 ಸಾವಿರ ದಾಟಬಹುದು’ ಎಂದು ಮಾಹಿತಿ ನೀಡಿದರು.

‘ವಿದ್ಯಾರಣ್ಯಪುರಂ ಕಚೇರಿ ಮುಂಭಾಗ ಬೃಹತ್ ಎಲ್‌ಇಡಿ ಪರದೆ ಅಳವಡಿಸಿ, ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಶಿಲಾನ್ಯಾಸ ಸಮಾರಂಭದ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡಲಾಗುವುದು. ಇದೇ ಸಂದರ್ಭ 1992ರ ಡಿ.6ರಂದು ಅಯೋಧ್ಯೆಯಲ್ಲಿ ನಡೆದಿದ್ದ ರಾಮಜನ್ಮ ಭೂಮಿಯ ಕರಸೇವೆಯಲ್ಲಿ ಭಾಗಿಯಾಗಿದ್ದ ಮೈಸೂರಿನ ಸ್ವಯಂಸೇವಕರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

‘ಶಿಲಾನ್ಯಾಸದ ಸಮಯದಲ್ಲಿ ಕ್ಷೇತ್ರದ ವಿವಿಧೆಡೆ, ದೇಗುಲದಲ್ಲಿ ಶ್ರೀರಾಮ ಭಜನೆ ಹಮ್ಮಿಕೊಳ್ಳಲಾಗುವುದು. ಕೆಲವೆಡೆ ರಾಮ ತಾರಕ ಮಂತ್ರ, ರಾಮ ಕಥಾ ಪಾರಾಯಣ, ರಾಮನಿಗಾಗಿ ದೀಪ ಹಚ್ಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಪೂಜೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಜವಾಬ್ದಾರಿಯನ್ನು ಹಂಚಲಾಗಿದೆ. ಮಹಿಳಾ ಮೋರ್ಚಾದ ಪದಾಧಿಕಾರಿಗಳು ತಮ್ಮ ವಾರ್ಡ್‌ಗಳಲ್ಲಿ ರಂಗೋಲಿ ಹಾಕಿದರೆ, ಯುವ ಮೋರ್ಚಾ ಪದಾಧಿಕಾರಿಗಳು ಹಸಿರು ತೋರಣ, ಬಾಳೆ ಕಂದು ಕಟ್ಟಿ ಅಲಂಕಾರ ಮಾಡಲಿದ್ದಾರೆ’ ಎಂದರು.

ಜಿಎಸ್‌ಎಸ್‌ಎಸ್ ಸಂಸ್ಥೆಯ ಶ್ರೀಹರಿ, ಪ್ರಶಾಂತ್, ಬಿಜೆಪಿ ಮುಖಂಡರಾದ ಎಂ.ವಡಿವೇಲು, ಪ್ರೇಮ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ

‘ಏನೊಂದು ಇಲ್ಲದಿದ್ದ ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

‘ಮಕ್ಕಳಿಗೆ ಏನು ಕೊಡಬೇಕು ಎಂಬುದು ತಂದೆ–ತಾಯಿಗೆ ಚೆನ್ನಾಗಿ ಗೊತ್ತಿದೆ. ಅದೇ ರೀತಿ ತಾಯಿಯಾದ ನನ್ನ ಪಕ್ಷ, ತಂದೆ ಸಮಾನರಾದ ಯಡಿಯೂರಪ್ಪ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸೂಕ್ತ ಜವಾಬ್ದಾರಿ ಕೊಡ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಅತಿಥಿಗಳು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ಮನೆ ಮಕ್ಕಳಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯಿದೆ. ಇದು ಪೂರ್ಣಗೊಂಡ ಬಳಿಕ ಮಕ್ಕಳ ಕಡೆ ಗಮನ ಕೊಡಲಿದ್ದಾರೆ’ ಎಂದು ರಾಮದಾಸ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು