ಶುಕ್ರವಾರ, ಜನವರಿ 27, 2023
27 °C

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ರೈತರಿಂದ ವಿರೋಧ ಇಲ್ಲ: ಸಚಿವ ಬಿ‌.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ನಿಜವಾದ ರೈತರಿಂದ ವಿರೋಧ ವ್ಯಕ್ತವಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ‌‌.ಪಾಟೀಲ ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ತಿದ್ದುಪಡಿ ವಿರೋಧಿಸಿ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಐಕ್ಯ ಹೋರಾಟಕ್ಕೆ ಮುಂದಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ರೈತರಿಗೆ ಮಾರಕ ಅಲ್ಲ. ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು‌. ಆದರೆ, ಕೆಲವರು ಬೇಕಂತಲೇ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆಯೇ ಹೊರತು ನಿಜವಾಗಿ ಕೃಷಿಯನ್ನೇ ನಂಬಿರುವವರು ವಿರೋಧಿಸುತ್ತಿಲ್ಲ’ ಎಂದು ಹೇಳಿದರು.

ರೈತರ ಜಮೀನುಗಳನ್ನು ಕಿತ್ತುಕೊಳ್ಳುತ್ತಾರೆ ಎನ್ನುವುದು ಸುಳ್ಳು. ನೀರಾವರಿ ಭೂಮಿಯನ್ನು ಈ ತಿದ್ದುಪಡಿಯಿಂದ ಹೊರಗಿಡಲಾಗಿದೆ. ಉದ್ಯಮಿ, ವೈದ್ಯರು, ಕೃಷಿ ಪದವೀಧರರು ಸೇರಿದಂತೆ ಯಾರು ಬೇಕಾದರೂ ಕೃಷಿಕರಾಗುವ ಅವಕಾಶ ಇದೆ ಎಂದು ಹೇಳಿದರು.

ಕೃಷಿ ಅಧಿಕಾರಿಗಳು, ಕೃಷಿ‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ಕ್ಯಾಂಪಸ್ ಬಿಟ್ಟು ಜಮೀನುಗಳಲ್ಲಿ ರೈತರಿಗೆ ಸಿಗಬೇಕು. ಕಚೇರಿಯಲ್ಲೆ ಸದಾ ಕಾಲ ಕೂರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯೂರಿಯಾ ಕಳ್ಳಸಾಗಾಣಿಕೆ ಮತ್ತು ಕಳ್ಳದಾಸ್ತಾನು ಮಾಡುವ 85 ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.

ರಾಜ್ಯದಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಒಟ್ಟು 5,051 ಕೋಟಿ ನಷ್ಟ ಆಗಿದೆ. ಈ ಕುರಿತು ಕೇಂದ್ರ ತಂಡಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಚಿತ್ರ ನಟ, ನಟಿಯರು ಮಾದರಿಯಾಗಬೇಕು

ಸಮಾಜಕ್ಕೆ ಮಾದರಿಯಾಗಬೇಕಿದ್ದ ಚಿತ್ರ ನಟ, ನಟಿಯರು ಮಾದಕ ವಸ್ತು ಜಾಲದಲ್ಲಿ ಸಿಲುಕಿರುವುದು ದುರದೃಷ್ಟಕರ. ಇವರನ್ನೇ ಯುವಜನರು ಅನುಸರಿಸುತ್ತಾರೆ. ಇಂತಹ ನಟರನ್ನು ಚಿತ್ರರಂಗದಿಂದ ಕೆಲಕಾಲ ದೂರ ಇಡಬೇಕು ಎಂಬ ಚರ್ಚೆ ಆರಂಭವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ನಟಿ ರಾಗಿಣಿ ಅವರ ಮೇಲೆ ಈ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

‘ನಾನು ಗರತಿಯಾಗಿದ್ದರೆ ಎಲ್ಲಿ ಬೇಕಾದರೂ ಮನೆ ಕಟ್ಟಬಹುದು’ ಎಂಬ ಗಾದೆ ಮಾತಿದೆ. ನಾನು ನನ್ನ ಮಗಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದೇನೆ. ಆಕೆ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನದ ಕುರಿತು ಮುಂಬೈನಲ್ಲಿ ಪ್ರಸ್ತಾವವಾಗಿರಲಿಲ್ಲ. ಎಲ್ಲರೂ ಆದಷ್ಟು ಬೇಗ ಸಚಿವರಾಗಲಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 
 
 

 
 
 
 
 
 
 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು