ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು: ಬಿಷಪ್ ವಿಲಿಯಂ

ಯುವತಿ ಮೇಲೆ ಒತ್ತಡ ಹಾಕಿ ಹೇಳಿಸಿದ್ದಾರೆ
Last Updated 6 ನವೆಂಬರ್ 2019, 20:16 IST
ಅಕ್ಷರ ಗಾತ್ರ

ಮೈಸೂರು: ‘ಯುವತಿಯೊಬ್ಬಳು ನನ್ನ ಹಾಗೂ ಕೆಲವು ಪಾದ್ರಿಗಳ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು’ ಎಂದು ಮೈಸೂರು ಬಿಷಪ್‌ ಕೆ.ಎಂ.ವಿಲಿಯಂ ಹೇಳಿದರು.

‘ಕ್ರೈಸ್ತ ಸಮುದಾಯ ಏನು ಎಂಬುದು ಎಲ್ಲರಿಗೂ ಗೊತ್ತು. ಕೆಲವು ಸ್ವಾರ್ಥಿಗಳು ದುರುದ್ದೇಶದಿಂದ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಒಂದೊಂದು ದಿನ ಒಂದೊಂದು ಕತೆ ಕಟ್ಟುತ್ತಿದ್ದಾರೆ. ಇದೀಗ ವಿಡಿಯೊ ಬಿಡುಗಡೆ ಮಾಡಿದ್ದಾರೆ. ವಿಡಿಯೊದಲ್ಲಿ ಆ ಯುವತಿ ಮಾಡಿರುವ ಆರೋಪಗಳಲ್ಲಿ ಹುರುಳಿ‌ಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಸೋಸಿಯೇಷನ್‌ ಆಫ್‌ ಕನ್ಸರ್ನ್‌ಡ್‌ ಕ್ಯಾಥೊಲಿಕ್ಸ್‌ ಹೆಸರಿನ ಸಂಘಟನೆಯ ಸದಸ್ಯರು ಬುಧವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ವಿಡಿಯೊ ಬಿಡುಗಡೆ ಮಾಡಿದ್ದರು. ಯುವತಿಯೊಬ್ಬರು ಬಿಷಪ್‌ ವಿಲಿಯಂ ಹಾಗೂ ಪಾದ್ರಿ ಲೆಸ್ಲಿ ಮೋರೆಸ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವುದು ವಿಡಿಯೊದಲ್ಲಿದೆ.

ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಬಿಷಪ್‌ ಅವರು ಈ ಆರೋಪ ಅಲ್ಲಗಳೆದರು. ಮಾತ್ರವಲ್ಲ ವಿಡಿಯೊದಲ್ಲಿರುವ ಅದೇ ಯುವತಿ ಬಿಷಪ್‌ ಆಪ್ತರೊಂದಿಗೆ ಮಾತನ್ನಾಡಿದ್ದಾರೆ ಎನ್ನಲಾದ ಆಡಿಯೊ ಬಿಡುಗಡೆಗೊಳಿಸಿದರು. ‘ಯಾರೋ ಪಾದ್ರಿಗಳು ಬಿಪಷ್‌ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಯುವತಿ ಆಡಿಯೊದಲ್ಲಿ ಹೇಳಿದ್ದಾರೆ.

‘ಈ ಷಡ್ಯಂತ್ರದ ಹಿಂದೆ ಯಾರೋ ಇದ್ದಾರೆ. ಅವರು ಯುವತಿಯ ಮೇಲೆ ಒತ್ತಡ ಹಾಕಿಸಿ ವಿಡಿಯೊ ಮಾಡಿಸಿದ್ದಾರೆ. ಅದಕ್ಕೆ ಯುವತಿಯ ಆಡಿಯೊ ಪುರಾವೆಯಾಗಿದೆ’ ಎಂದು ವಿಲಿಯಂ ತಿಳಿಸಿದರು.

‘ಕೆಲವರು ಆಕೆಯನ್ನು ನಮ್ಮ ವಿರುದ್ಧ ದಾಳವಾಗಿ ಬಳಸುತ್ತಿದ್ದಾರೆ. ಆ ಯುವತಿ ನನ್ನ ಅಥವಾ ಲೆಸ್ಲಿ ಕೈಕೆಳಗೆ ಕೆಲಸ ಮಾಡಿಲ್ಲ. ಧರ್ಮಕ್ಷೇತ್ರದ ಫ್ಯಾಮಿಲಿ ಕಮಿಷನ್ಸ್ ವಿಭಾಗದಲ್ಲಿ ಸೆಕ್ರೆಟರಿಯಾಗಿದ್ದಳು. ಈಗ ಕೆಲಸ ಬಿಟ್ಟಿದ್ದಾಳೆ. ನಾನು ಕಚೇರಿಯ ಇನ್ನೊಬ್ಬರು ಸಿಬ್ಬಂದಿ ಜತೆ ಯಾವುದೇ ಕೆಲಸಕ್ಕೆ ಆಕೆಯನ್ನು ಎರಡು ಸಲ ಭೇಟಿಯಾಗಿರಬಹುದು. ಲೆಸ್ಲಿ ಕೂಡಾ ಒಂದೆರಡು ಸಲ ಭೇಟಿಯಾಗಿರುವ ಸಾಧ್ಯತೆಯಿದೆ’ ಎಂದರು.

‘ಇಂತಹ ಸುಳ್ಳು ಆರೋಪಗಳಿಗೆ ಅಂತ್ಯ ಹಾಡಬೇಕಿದೆ. ಗುರುವಾರ ಚರ್ಚ್‌ನ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ನನ್ನ ವಿರುದ್ಧ ಇದ್ದಾರೆ ಎನ್ನುವ ಪಾದ್ರಿಗಳನ್ನೂ ಸಭೆಗೆ ಕರೆದಿದ್ದೇನೆ. ಸಭೆಯಲ್ಲಿ ಒಂದು ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದರು.

ಮಾನನಷ್ಟ ಮೊಕದ್ದಮೆ ಹೂಡುವೆ: ಯುವತಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಾದ್ರಿ ಲೆಸ್ಲಿ ಮೋರೆಸ್, ‘ನಾನು ಲೈಂಗಿಕ ಸಂಬಂಧಕ್ಕಾಗಿ ಅಪೇಕ್ಷಿಸಿದ್ದೇನೆ ಎಂದು ಆಕೆ ಹೇಳುವುದು ವಿಡಿಯೊದಲ್ಲಿದೆ. ಆಕೆ ನನ್ನ ಕೈಕೆಳಗೆ ಕೆಲಸ ಮಾಡಿಲ್ಲ. ಪಾದ್ರಿ ಗಿಲ್ಬರ್ಟ್‌ ಕೈಕೆಳಗೆ ಕೆಲಸ ಮಾಡುತ್ತಿದ್ದಳು. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ನುಡಿದರು.

ದೂರು ನೀಡಿದ್ದೇವೆ: ಅಸೋಸಿಯೇಷನ್‌ ಆಫ್‌ ಕನ್ಸರ್ನ್‌ಡ್‌ ಕ್ಯಾಥೊಲಿಕ್ಸ್‌ ಸಂಘಟನೆ ಸದಸ್ಯರಾದ ಮುಂಬೈನ ವಕೀಲ ಜೋಸೆಫ್‌ ಸಾಡರ್, ಮೆಲ್ವಿನ್‌ ಫೆರ್ನಾಂಡಿಸ್‌ ಮತ್ತು ರಾಬರ್ಟ್‌ ರೊಸಾರಿಯೊ ಅವರು ಮಂಗಳವಾರ ಬಿಷಪ್‌ ವಿರುದ್ಧ ಅಧಿಕಾರ ದುರುಪಯೋಗ, ಹಣ ದುರ್ಬಳಕೆ, ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು.

ಬುಧವಾರ ಮತ್ತೆ ಸುದ್ದಿಗೋಷ್ಠಿ ನಡೆಸಿ ಯುವತಿಯ ವಿಡಿಯೊ ಬಿಡುಗಡೆ ಮಾಡಿದರು. ‘ಬಿಷಪ್‌ ವಿರುದ್ಧ ಈಗಾಗಲೇ ಲಷ್ಕರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಅವರನ್ನು ಸ್ಥಾನದಿಂದ ಕೆಳಗಿಳಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ರೊಸಾರಿಯೊ ತಿಳಿಸಿದರು.

ವಿಡಿಯೊದಲ್ಲಿ ಯುವತಿ ಹೇಳಿದ್ದೇನು?

‘ನಾನು ಪತಿ ಹಾಗೂ ಎರಡು ವರ್ಷದ ಮಗುವಿನ ಜತೆ ವಾಸವಾಗಿದ್ದೇನೆ. ಬಿಷಪ್‌ ಬಗ್ಗೆ ಕಾರ್ಡಿನಲ್‌ ಹಾಗೂ ಇತರರಿಗೆ ತಿಳಿಸುವ ಉದ್ದೇಶದಿಂದ ವಿಡಿಯೊ ಮಾಡುತ್ತಿದ್ದೇನೆ’ ಎಂದು ಯುವತಿ ಮಾತು ಆರಂಭಿಸುತ್ತಾರೆ.

‘ಮೈಸೂರಿನ ಬಿಷಪ್‌ ಕೆ.ಎ.ವಿಲಿಯಂ ಅವರಿಂದ ತೀರಾ ಕೆಟ್ಟ ಅನುಭವ ಉಂಟಾಗಿದೆ. ನನ್ನ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ನನಗಾದ ಕೆಟ್ಟ ಅನುಭವವನ್ನು ಯಾರಲ್ಲೂ ಹೇಳಿಕೊಂಡಿಲ್ಲ. ಆದ್ದರಿಂದ ವಿಡಿಯೊದಲ್ಲಿ ಹಂಚಿಕೊಂಡಿದ್ದೇನೆ’ ಎಂದಿದ್ದಾರೆ.

‘2013–18 ರಿಂದ ಫ್ಯಾಮಿಲಿ ಕಮಿಷನ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ವಿಲಿಯಂ ಅವರು ಬಿಷಪ್‌ ಆಗಿ ಮತ್ತು ಪಾದ್ರಿ ಲೆಸ್ಲಿ ಮೋರೆಸ್‌ ಫ್ಯಾಮಿಲಿ ಕಮಿಷ‌ನ್ಸ್ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತೀರಾ ಕೆಟ್ಟ ಅನುಭವ ಉಂಟಾಗಿದೆ.

‘ನಾನು ಪ್ರತಿದಿನ ಮಾಡಿದ ಕೆಲಸದ ವರದಿಯನ್ನು ಲೆಸ್ಲಿ ಅವರಿಗೆ ಒಪ್ಪಿಸಬೇಕಿತ್ತು. ಅವರ ಎದುರು ಕುಳಿತಾಗ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ರಾತ್ರಿ 8 ಗಂಟೆಗೆಲ್ಲಾ ಕರೆ ಮಾಡಿ ಬರುವಂತೆ ಒತ್ತಾಯಿತ್ತಿದ್ದರು. ಅವಾಚ್ಯ ಪದಗಳಿಂದ ಎಲ್ಲರೆದುರು ಬಯ್ಯುತ್ತಿದ್ದರು.

‘ನನ್ನ ಜತೆ ಲೈಂಗಿಕವಾಗಿ ಸಹಕರಿಸಿದರೆ ಕೆಲಸದಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ ಕೆಲಸ ತ್ಯಜಿಸಬೇಕು ಎಂದು ಒಂದು ದಿನ ನೇರವಾಗಿ ಹೇಳಿಬಿಟ್ಟರು. ಅವರ ಬೇಡಿಕೆಗೆ ಒಪ್ಪದಿದ್ದಾಗ ಕಿರುಕುಳ ಹೆಚ್ಚಾಯಿತು. ಕಿರುಕುಳ ತಾಳಲಾರದೆ ಕೆಲಸ ತ್ಯಜಿಸಿದೆ. ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಆದರೆ ಅಲ್ಲಿಗೆ ತನ್ನ ಆಳುಗಳನ್ನು ಕಳಿಸಿದ ಬಿಷಪ್‌ ಕಿಡ್ನಾಪ್‌ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT