ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದ ದೊಡ್ಡ ಚರಿತ್ರೆ ‘ಬಾಂಬೆ ಫೈಲ್ಸ್‌’ ಈ ವರ್ಷವೇ ಬಿಡುಗಡೆ: ವಿಶ್ವನಾಥ್

Last Updated 27 ಜೂನ್ 2022, 7:08 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಧೋರಣೆ ವಿರುದ್ಧ ಸಿಡಿದೆದ್ದು ನನ್ನನ್ನೂ ಒಳಗೊಂಡಂತೆ ಶಾಸಕರು ಮುಂಬೈಗೆ ಹೋಗಿದ್ದ ದಿನಗಳನ್ನು ಚಿತ್ರಿಸುವ ‘ಬಾಂಬೆ ಫೈಲ್ಸ್‌’ ಪುಸ್ತಕವನ್ನು ಇದೇ ವರ್ಷ ಬಿಡುಗಡೆ ಮಾಡಲಿದ್ದೇನೆ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಪುಸ್ತಕಕ್ಕೆ ಬಾಂಬೆ ಡೇಸ್ ಎಂದು ಹೆಸರಿಡಲು ನಿರ್ಧರಿಸಿದ್ದೆ. ‘ಕಾಶ್ಮೀರ್ ಫೈಲ್ಸ್‌’ ಚಲನಚಿತ್ರ ಬಂದ ಬಳಿಕ ‘ಬಾಂಬೆ ಫೈಲ್ಸ್‌’ ಎಂದು ಬದಲಿಸಿದ್ದೇನೆ. ಅದರಲ್ಲಿ ಬಾಂಬ್‌ ಇರುವುದಿಲ್ಲ; ವಾಸ್ತವಾಂಶಗಳನ್ನು ಒಳಗೊಂಡಿರಲಿದೆ’ ಎಂದರು.

‘ರಾಜಕಾರಣದ ದೊಡ್ಡ ಚರಿತ್ರೆ ಅದು. ಅದೆಲ್ಲವೂ ದಾಖಲಾಗಬೇಕು. ನಾವೆಲ್ಲರೂ ಹಣಕ್ಕಾಗಿ ಬಿಜೆಪಿ ಸೇರಿದೆವು ಎಂದೆಲ್ಲಾ ಮಾತುಗಳಿವೆ. ಅದೆಲ್ಲವೂ ಸುಳ್ಳು. ವಾಸ್ತವಾಂಶಗಳನ್ನು ಪುಸ್ತಕದಲ್ಲಿ ದಾಖಲಿಸಲಿದ್ದೇನೆ’ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ಥಿರತೆ ಬಗ್ಗೆ ಪ್ರತಿಕ್ರಿಯಿಸಿ, ‘ಹಿಂದೆ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಬೆಳವಣಿಗೆಗಳು ಈಗ ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನಡವಳಿಕೆಯೇ ಇದಕ್ಕೆ ಕಾರಣ. ಮುಖ್ಯಮಂತ್ರಿಯಾದವರು ಸರ್ವಾಧಿಕಾರಿಯಾದರೆ ಹೀಗಾಗುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಶಾಸಕರು ಸಿಡಿದೇಳುತ್ತಾರೆ. ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ನಮಗೂ ಹೀಗೆಯೇ ಆಗಿತ್ತು. ಸ್ವಾಭಿಮಾನ ಉಳಿಸಿಕೊಳ್ಳಲು ನಾವು ಪಕ್ಷ ತೊರೆದೆವು. ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ದರ್ಪ, ದೌರ್ಜನ್ಯದಿಂದ ಇಲ್ಲಿನ ಶಾಸಕರು ತಿರುಗಿ ಬಿದ್ದಿದ್ದರು. ನೆರೆಯ ಮಹಾರಾಷ್ಟ್ರದಲ್ಲೂ ಅದೇ ರೀತಿ ಕ್ಷಿಪ್ರಕ್ರಾಂತಿ ಆಗುತ್ತಿದೆ’ ಎಂದರು.

‘ಶಾಸಕಾಂಗ ಪಕ್ಷದ ನಾಯಕರು ಸರಿಯಾಗಿ ಇರದಿದ್ದರೆ ಹೀಗೆಲ್ಲಾ ಆಗುತ್ತದೆ. ಶಾಸಕರ ಸ್ವಾಭಿಮಾನವನ್ನು ಕೆಣಕಬಾರದು. ಕೆಣಕಿದರೆ ಕ್ಷಿಪ್ರಕ್ರಾಂತಿ ಆಗೇ ಆಗುತ್ತದೆ. ನಾವೂ ಅದನ್ನೆ ಮಾಡಿದ್ದೆವು’ ಎಂದು ತಿಳಿಸಿದರು.

‘ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್‌ನವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಎಲ್ಲದಕ್ಕೂ ‍ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್ಎಸ್‌ ಲಿಂಕ್‌ ಮಾಡುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

ತುರ್ತು ಪರಿಸ್ಥಿತಿ ಸಮರ್ಥಿಸಿಕೊಂಡ ಅವರು, ‘ತುರ್ತು ಪರಿಸ್ಥಿತಿ ಸಮಯವು ಕರ್ನಾಟಕದಲ್ಲಿ ಅಭಿವೃದ್ಧಿಯ ಯುಗವಾಗಿತ್ತು. ಆ ಸಂದರ್ಭವನ್ನು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯದ ಅಭಿವೃದ್ಧಿಗೆ ಬಳಸಿಕೊಂಡರು. ಕೆಟ್ಟ ಕಾನೂನನ್ನು ಒಳ್ಳೆಯ ರೀತಿ ಬಳಸಿಕೊಂಡರು. ಇದರಿಂದ ರಾಜ್ಯಕ್ಕೆ ಒಳ್ಳೆಯದೇ ಆಯಿತು’ ಎಂದು ಪ್ರತಿಕ್ರಿಯಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನಮ್ಮೂರಿಗೇ (ಬೆಂಗಳೂರು, ಮೈಸೂರು) ಬಂದಾಗ, ನಮಗೆ ಏನು ಬೇಕೆಂದು ಸರ್ಕಾರದವರು ಕನಿಷ್ಠ ಮನವಿಯನ್ನೂ ಕೊಡಲಿಲ್ಲ. ಇದು ಬೇಸರ ತರಿಸಿದೆ. ಇಷ್ಟೊಂದು ಸಚಿವರು, ಶಾಸಕರು, ಜನಪ್ರತಿನಿಧಿಗಳಿದ್ದರೂ ಮನವಿ ಸಲ್ಲಿಸದಿರುವುದು ದೊಡ್ಡ ಅಪರಾಧ ಹಾಗೂ ತಪ್ಪಾಗಿದೆ’ ಎಂದರು.

‘ಮೋದಿ ಬಳಿ ರಾಜ್ಯಕ್ಕೆ ಏನನ್ನಾದರೂ ಕೇಳಲು ಧೈರ್ಯ ಯಾಕೆ ಬೇಕು.‌ ಅವರೇನು ಸಿಂಹವೇ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT