ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ಸಂಭ್ರಮದ ಬ್ರಹ್ಮರಥೋತ್ಸವ

ಬೆಟ್ಟದಪುರ: ಇಲ್ಲಿನ ಐತಿಹಾಸಿಕ ಭ್ರಮರಾಂಬಾ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.
ಬೆಳ್ಳಿ ಬಸಪ್ಪ, ವಿಘ್ನೇಶ್ವರ ಹಾಗೂ ಭ್ರಮರಾಂಬಾ ಮತ್ತು ಸಿಡಿಲು ಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿಗಳನ್ನು ವಿಶೇಷ ಪೂಜೆ ಸಲ್ಲಿಸಿ ಆಕರ್ಷಕ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಮೂರು ರಥಗಳಲ್ಲಿ ಪ್ರತಿಷ್ಠಾಪಿಸಿ ಉಘೇ ಮಲ್ಲಯ್ಯ, ಉಘೇ ಗಿರಿಜಮ್ಮ ಎಂದು ಭಕ್ತರು ಜೈಕಾರ ಹಾಕುತ್ತಾ ರಥವನ್ನು ಹರ್ಷೋದ್ಗಾರದಿಂದ ಎಳೆದರು.
ಜಾತ್ರೆಯ ಸಂಪ್ರದಾಯದಂತೆ ಶುಕ್ರವಾರ ರಾತ್ರಿ ಅಶ್ವಾರೋಹಣ ಸೇವೆ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮಾಡಲಾಯಿತು. ನಂತರ ದೇವಾಲಯದ ಪ್ರಾಂಗಣದಲ್ಲಿ ನಾಗರಾಜ ದೀಕ್ಷಿತ್ ಮತ್ತು ಸತೀಶ್ ಕಶ್ಯಪ ಅವರ ತಂಡ ಭ್ರಮರಾಂಬಾ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಶಾಸ್ತ್ರೋಕ್ತವಾಗಿ ಗಿರಿಜಾಕಲ್ಯಾಣ ನೆರವೇರಿಸಿದರು. ಮಧ್ಯರಾತ್ರಿ ಯವರೆಗೂ ನಡೆದ ಕಲ್ಯಾಣೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಬೆಳಿಗ್ಗೆ ರಥ ಬೀದಿಯಲ್ಲಿ ನೆರೆದಿದ್ದ ಭಕ್ತಾದಿಗಳು, ನೂತನ ದಂಪತಿಗಳು ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ರಥಗಳಿಗೆ ಹಣ್ಣು ಜವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ರಥೋತ್ಸವದ ಪ್ರಯುಕ್ತ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪ ಹಾಗೂ ತಳಿರು ತೋರಣಗಳನ್ನು ಅಲಂಕಾರ ಮಾಡಲಾಯಿತು.
ಜಾತ್ರೆಗೆ ಬಂದಿದ್ದ ಭಕ್ತಾದಿಗಳಿಗೆ ಅಲ್ಲಲ್ಲಿ ಪಾನಕ, ಮಜ್ಜಿಗೆ ವಿತರಿಸುತ್ತಿರುವ ದೃಶ್ಯ ಕಂಡುಬಂದವು. ಬೆಟ್ಟದಪುರಕ್ಕೆ ಆಕರ್ಷಣೆಯಾಗಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಸಾವಿರಾರು ಭಕ್ತಾದಿಗಳು 3600 ಮೆಟ್ಟಿಲುಗಳನ್ನು ಏರಿ ದೇವರ ದರ್ಶನ ಪಡೆದರು. ಬಿಸಿಲನ್ನು ಲೆಕ್ಕಿಸದೆ ಮಕ್ಕಳು, ವೃದ್ಧರು, ನವದಂಪತಿಗಳು, ಬೆಟ್ಟಕ್ಕೆ ಹತ್ತುವ ದೃಶ್ಯ ಸಾಮಾನ್ಯವಾಗಿತ್ತು.
ಆರೋಗ್ಯ ಇಲಾಖೆಯಿಂದ ಬೆಟ್ಟದ ತಪ್ಪಲಿನಲ್ಲಿ ಉಚಿತ ತಾತ್ಕಾಲಿಕ ಆರೋಗ್ಯ ಶಿಬಿರ ಕೇಂದ್ರವನ್ನು ಹಾಕಿದ್ದು, ಅದರಲ್ಲಿ ಭಕ್ತಾದಿಗಳ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿ ಬೆಟ್ಟ ಏರಲು ಅವಕಾಶ ನೀಡಲಾಗಿತ್ತು. ಸಂಜೆಯ ವೇಳೆಗೆ ರಥಗಳನ್ನು ಮರಳಿ ಸ್ವಸ್ಥಾನಕ್ಕೆ ನಿಲ್ಲಿಸಿದ ನಂತರ ಹಂಸ ವಾಹನದ ಮೂಲಕ ಉತ್ಸವ ಮೂರ್ತಿಗಳನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.