ಮಂಗಳವಾರ, ನವೆಂಬರ್ 30, 2021
23 °C

‘ಮಿದುಳಿನ ಆಘಾತ– ವಾಸ್ತವಾಂಶಗಳು’ ಪುಸ್ತಕ ಬಿಡುಗಡೆ: ಡಾ.ಎನ್‌.ಕೆ. ವೆಂಕಟರಮಣ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಜಗತ್ತಿನಲ್ಲಿ ಈಗ ಮಿದುಳು ಆಘಾತ (ಬ್ರೇನ್ ಅಟ್ಯಾಕ್) ಎಂಬುದು ಸಾಮಾನ್ಯವಾಗಿದೆ. ಆದರೆ, ತೊಂದರೆಯಾದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಪಡೆದರೆ ಮತ್ತೆ ಆ ವ್ಯಕ್ತಿ ಗುಣಮುಖನಾಗುತ್ತಾನೆ’ ಎಂದು ಬ್ರೈನ್ಸ್‌ ಆಸ್ಪತ್ರೆ ಸಂಸ್ಥಾಪಕ ಹಾಗೂ ನರರೋಗ ತಜ್ಞ ಡಾ.ಎನ್.ಕೆ. ವೆಂಕಟರಮಣ ಹೇಳಿದರು.

ನಗರದ ಸುತ್ತೂರು ಮಠದಲ್ಲಿ ಬುಧವಾರ ತಾವೇ ಬರೆದ ‘ಬ್ರೇನ್ ಅಟ್ಯಾಕ್‌ ಫ್ಯಾಕ್ಟ್‌ ಮತ್ತು ರೆಸ್‌ಲೈಟೀಸ್‘ ಕೃತಿಯ ಕನ್ನಡ ಅನುವಾದಿತ ಕೃತಿ ‘ಮಿದುಳಿನ ಆಘಾತ– ವಾಸ್ತವಾಂಶಗಳು’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಿದುಳು ಆಘಾತ’ವನ್ನು ತಡೆಯಬಹುದು, ಅದಕ್ಕೆ ಜಾಗೃತಿ ವಹಿಸಬೇಕು. ಇದನ್ನು ತಿಳಿಸುವುದೇ ಈ ಪುಸ್ತಕದ ಮೂಲ ಉದ್ದೇಶ’ ಎಂದು ಹೇಳಿದರು.

‘ಮಿದುಳು ಆಘಾತವಾದಾಗ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ಹೋದರೆ, ಹೃದಯಾಘಾತಕ್ಕೆ ಚಿಕಿತ್ಸೆ ನೀಡಿದಂತೆ ಮಿದುಳಿಗೂ ಚಿಕಿತ್ಸೆ ನೀಡಿ ಸರಿಪಡಿಸಬಹುದು. ಮುಖ್ಯನರ ಸರಿಯಾಗಿ ಇರುವವರೆಗೆ ಚಿಕಿತ್ಸೆ ನೀಡಬಹುದು. ಅದು ಹಾಳಾದರೆ ಏನೂ ಮಾಡಲಾಗುವುದಿಲ್ಲ. ಅದಕ್ಕಾಗಿಯೇ ಮುಂಜಾಗ್ರತೆ, ಸಕಾಲಕ್ಕೆ ಚಿಕಿತ್ಸೆ ಅಗತ್ಯ. ನಂತರ ಆರೈಕೆಯೂ ಮುಖ್ಯ’ ಎಂದು ಅವರು ಹೇಳಿದರು.

‘ಮೂಢನಂಬಿಕೆಯಿಂದ ನಾಟಿ ಚಿಕಿತ್ಸೆ ಪಡೆಯಲು ಮುಂದಾಗಿ ಸಮಯ ವ್ಯರ್ಥ ಮಾಡದೆ, ತಕ್ಷಣವೇ ಮೊದಲು ಮಿದುಳಿನ ಯಾವ ಭಾಗಕ್ಕೆ ರಕ್ತಪರಿಚಲನೆ ನಿಂತಿದೆ ಎಂಬುದನ್ನು ತಿಳಿದು ಸರಿಪಡಿಸಬೇಕು. ನಂತರ ಮಸಾಜ್ ಮತ್ತಿತರ ಕ್ರಿಯೆಯಿಂದ ಹೆಚ್ಚು ರಿಲಾಕ್ಸ್ ಮಾಡಿಕೊಳ್ಳಬಹುದು’ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಮಿದುಳಿನ ಆಘಾತ– ವಾಸ್ತವಾಂಶಗಳು’ ಪುಸ್ತಕ ಬಿಡುಗಡೆ ಮಾಡಿ, ‘ಮಿದುಳು ಮನುಷ್ಯನ ಬಹಳ ಮುಖ್ಯವಾದ ಅಂಗ. ಅದು ಅತ್ಯಂತ ಸೂಕ್ಷ್ಮದ ಕೆಲಸಗಳನ್ನು ನಿರ್ವಹಿಸುತ್ತದೆ. ಅಪಘಾತಗಳು ಸಂಭವಿಸಿದರೆ ಮಿದುಳಿಗೆ ಯಾವುದೇ ತೊಂದರೆಯಾಗಬಾರದು ಎಂದೇ ಹೆಲ್ಮೆಟ್‌ಗಳನ್ನು ಧರಿಸಲು ತಿಳಿಸಲಾಗುತ್ತದೆ. ಆದರೆ ಬಹಳಷ್ಟು ಜನ ನಿರ್ಲಕ್ಷಿಸುವ ಕಾರಣ ಅಪಘಾತ ಸಂಭವಿಸಿದಾಗ ಮಿದುಳು ನಿಷ್ಕ್ರಿಯಗೊಳ್ಳುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮನುಷ್ಯನಿಗೆ ಎಲ್ಲ ಅಂಗವೂ ಮುಖ್ಯ. ಏಕೆಂದರೆ ಯಾವಾಗ ಯಾವುದು ಇಲ್ಲವಾಗುತ್ತದೆಯೋ ಆಗ ಅದರ ಮಹತ್ವ ಗೊತ್ತಾಗುತ್ತದೆ. ಅದಕ್ಕಾಗಿ ಅಂಗಾಂಗಗಳು ಅತ್ಯಂತ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಡಾ. ವೆಂಕಟರಮಣ ಅವರು ಮಿದುಳಿನ ಬಗ್ಗೆ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಈ ಕೃತಿಯಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಮಿದುಳಿನ ಆರೋಗ್ಯದ ಕುರಿತು ಇರುವ ಸಂಶಯಗಳಿಗೆ ಈ ಕೃತಿಯಲ್ಲಿ ಉತ್ತರ ದೊರಕುತ್ತದೆ. ಉತ್ತಮ ಲೇಖಕರು ಹಾಗೂ ಗಾಯಕರಾಗಿರುವ ಅವರು ಆಧ್ಯಾತ್ಮದಲ್ಲೂ ಸಾಕಷ್ಟು ಆಸಕ್ತಿಯನ್ನೂ ಹೊಂದಿದ್ದಾರೆ. ಅಷ್ಟೇ ಅಲ್ಲ ಅವರ ಮಾಸ ಪತ್ರಿಕೆ ‘ಬ್ರೇನ್ ವೈಸ್’ನಲ್ಲಿ ವಿಜ್ಞಾನದ ಜೊತೆಗೆ ಆಧ್ಯಾತ್ಮಿಕ, ಧರ್ಮ ಕುರಿತು ಲೇಖನಗಳಿರುತ್ತವೆ’ ಎಂದು ಹೇಳಿದರು.

ಕೃತಿಯ ಅನುವಾದಕರಾದ ಬಿ.ಎಸ್. ವೆಂಕಟೇಶ್ ಪ್ರಸಾದ್‌ ಅವರು ಮಾತನಾಡಿ, ನಾವೆಲ್ಲಾ  ಮಿದುಳಿನ ಸಾಮರ್ಥ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ. ಅನಗತ್ಯ ಒತ್ತಡವನ್ನು ಹೇರಲಾಗುತ್ತಿದೆ. ಹೀಗಾಗಿ ಮಿದುಳು ಆಘಾತಕ್ಕೆ ಒಳಗಾಗುತ್ತಿದೆ. ಇದರಿಂದಾಗಿಯೇ ಪ್ರಕರಣಗಳು ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರ ಬಗ್ಗೆಜನರಲ್ಲಿನ ತಪ್ಪು ತಿಳಿವಳಿಕೆಗೆ ಡಾ.ವೆಂಕಟರಮಣರವರು ಮಿದುಳಿನ ಅದ್ಭುತ ಶಕ್ತಿ ಮತ್ತು ಅದರ ರಕ್ಷಣೆಯ ಕುರಿತಾಗಿ ಈ ಕೃತಿಯಲ್ಲಿ ತಿಳಿಸಿದ್ದಾರೆ’ ಎಂದರು.

ಕೃತಿಯ ಸಂಪಾದಕರಾದ ಡಾ. ಕೆ.ಆರ್. ಕಮಲೇಶ್‌ ಮಿದುಳಿಗೆ ಸಂಬಂಧಪಟ್ಟ ಅನೇಕ ಕಾಯಿಲೆಗಳಿಗೆ ಹೆಚ್ಚಿನ ಔಷಧಿಗಳನ್ನು ನೀಡದೇ ಧ್ಯಾನ, ವ್ಯಾಯಾಮ ಮತ್ತು ಆಹಾರ ಪದ್ಧತಿಯ ಮೂಲಕವೇ ಚಿಕಿತ್ಸೆಯನ್ನು ಡಾ. ವೆಂಟರಮಣರವರು ನೀಡುತ್ತಿದ್ದಾರೆ. ಇದುವರೆಗೂ 40 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿ, ಅನೇಕರಿಗೆ ಪುನರ್‌ಜೀವ ನೀಡಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂ.ಕೆ. ಶಿವಶಂಕರ್, ಸಪ್ನ ಬುಕ್‌ ಹೌಸ್‌ನ ಎನ್.ವಿಜಯ್ ಉಪಸ್ಥಿತರಿದ್ದರು. ರುದ್ರದೇವರು ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿ. ನಿರಂಜನಮೂರ್ತಿ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು