ಮಂಗಳವಾರ, ಆಗಸ್ಟ್ 3, 2021
22 °C
ರಿವರ್ ಟರ್ನ್‌, ಲಿಟಲ್ ಟರ್ನ್, ಪ್ಯಾಟ್ರಿಂಕೂಲ್‌ ಹಕ್ಕಿಗಳ ಕಲರವ

ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನಲ್ಲಿ ಪಕ್ಷಿಗಳ ಸಂತಾನೋತ್ಪತ್ತಿ

ಸತೀಶ್‌ ಬಿ.ಆರಾಧ್ಯ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ಕಬಿನಿ ಜಲಾಶಯದ ಹಿನ್ನೀರಿನಲ್ಲಿ ರಿವರ್ ಟರ್ನ್‌, ಲಿಟಲ್ ಟರ್ನ್, ಪ್ಯಾಟ್ರಿಂಕೂಲ್‌ ಪಕ್ಷಿಗಳ ಕಲರವ ಹೆಚ್ಚಿದೆ.

ಜಲಾಶಯದ ಹಿನ್ನೀರಿನಲ್ಲಿ ಸಣ್ಣ ದ್ವೀಪದಂತಿರುವ ಸ್ಥಳದಲ್ಲಿ ಈ ಪಕ್ಷಿಗಳ ಸಮೂಹ ಸಂತಾನೋತ್ಪತ್ತಿಯಲ್ಲಿ ತೊಡಗಿವೆ.

ಇಂಡಿಯನ್ ರಿವರ್ ಟರ್ನ್, ಲಿಟಲ್ ಟರ್ನ್ ಇರಾನ್‌ನ ಪೂರ್ವದಿಂದ ಭಾರತ, ಮ್ಯಾನ್ಮಾರ್‌ ಹಾಗೂ ಥೈಲ್ಯಾಂಡ್‌ನ ಒಳನಾಡಿನ ನದಿಗಳ ಉದ್ದಕ್ಕೂ ವಾಸಿಸುತ್ತವೆ. ಸಿಹಿ ನೀರಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜಲಾಶಯಗಳ ಹಿನ್ನೀರಿನಲ್ಲಿ ದ್ವೀಪದಂತಹ ಸ್ಥಳಗಳನ್ನು ಹುಡುಕಿ ಸಂತಾನೋತ್ಪತ್ತಿಯಲ್ಲಿ ತೊಡಗುವುದು ಇವುಗಳ ವೈಶಿಷ್ಟ್ಯತೆ.

ಈ ಪ್ರಭೇದದ ಹಕ್ಕಿಗಳು ಮಾರ್ಚ್‌ನಿಂದ ಮೇ, ಜೂನ್‌ವರೆಗೂ ಜಲಾಶಯಗಳಲ್ಲಿನ ಜನ ಪ್ರವೇಶ ಕಡಿಮೆ ಇರುವ ಸ್ಥಳಗಳು ಮತ್ತು ದ್ವೀಪದಂತಹ ಸ್ಥಳಗಳಲ್ಲಿ ತಮ್ಮ ನೆಲೆ ಮಾಡಿಕೊಳ್ಳುತ್ತವೆ. ಬಂಡೆ ಅಥವಾ ಮರಳಿನ ಮೇಲೆ ಹಸಿರು-ಬೂದು, ಕಂದು ಬಣ್ಣದಿಂದ ಕೂಡಿದ ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ.

ಕಬಿನಿ ಜಲಾಶಯದ ಮಧ್ಯ ಭಾಗದಲ್ಲಿರುವ ದ್ವೀಪದಲ್ಲಿ ಸಾಕಷ್ಟು ಪಕ್ಷಿಗಳ ಮೊಟ್ಟೆಗಳು ಮತ್ತು ಮರಿಗಳು ಜಲಾಶಯದ ಹಿನ್ನೀರಿನ ಹೆಚ್ಚಳದಿಂದ ಹಾಳಾಗಿವೆ. ಇದು ಪಕ್ಷಿಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

ವೈಶಿಷ್ಟ್ಯತೆ: ಮಧ್ಯಮ ಗಾತ್ರದ ಟರ್ನ್, 38–43 ಸೆಂ.ಮೀ ಉದ್ದದ ಗಾಡ ಬೂದು ಬಣ್ಣದಿಂದ ಕೂಡಿರುತ್ತದೆ. ತಲೆಯ ಮೇಲ್ಭಾಗ ಟೋಪಿಯಂತೆ ಕಪ್ಪು ಬಣ್ಣದಿಂದ ಕೂಡಿದೆ. ದೇಹದ ಮೇಲ್ಭಾಗದಲ್ಲಿ ಕಂದು ಬಣ್ಣವಿದ್ದು, ಕೆಳ ಭಾಗದಲ್ಲಿ ಬಿಳಿ ಬಣ್ಣವಿರುತ್ತದೆ.

ಉದ್ದವಾದ ಹೊಂದಿಕೊಳ್ಳುವ ಸ್ಟ್ರೀಮರ್‌ಗಳನ್ನು ಹೊಂದಿರುವ ಫೋರ್ಕ್ಡ್ ಬಾಲ ಮತ್ತು ಉದ್ದನೆಯ ಮೊನಚಾದ ರೆಕ್ಕೆಗಳನ್ನೊಂದಿದೆ. ಹಳದಿ ಬಣ್ಣದ ಕೊಕ್ಕು ಮತ್ತು ಕೆಂಪು ಬಣ್ಣದ ಕಾಲುಗಳನ್ನು ಈ ‍ಪಕ್ಷಿಗಳು ಹೊಂದಿರುತ್ತವೆ.

ಸಂತಾನೋತ್ಪತ್ತಿ ವಿಳಂಬ

ಈ ಹೊತ್ತಿಗಾಗಲೇ ಸಂತಾನೋತ್ಪತ್ತಿ ಪೂರ್ಣಗೊಳ್ಳಬೇಕಿತ್ತು. ಜಲಾಶಯಗಳಲ್ಲಿ ನೀರು ಹೆಚ್ಚು ಇದ್ದಿದ್ದರಿಂದ ತಡವಾಗಿ ಸಂತಾನೋತ್ಪತ್ತಿ ನಡೆದಿದೆ. ಒಂದು ವಾರದ ಅವಧಿಯಲ್ಲೇ ದೊಡ್ಡ ಗಾತ್ರಕ್ಕೆ ಮರಿಗಳು ಬೆಳೆದು ಬಿಡುತ್ತವೆ.

ಪ್ರತಿ ನಿತ್ಯವೂ ಇವು ನೀರಿನಲ್ಲಿ ಮುಳುಗಿ ಏಳುತ್ತವೆ. ತಮ್ಮ ಮರಿಗಳಿಗೆ ತೊಂದರೆ ಆಗದಂತೆ ಕಲ್ಲಿನ ಮೇಲೆ ಬಡಿದು ಮೀನು ಗಂಟಲಲ್ಲಿ ಸಿಕ್ಕಿಕೊಳ್ಳದಂತೆ ತಿನಿಸುತ್ತವೆ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್‌.

ಸಹ ಜೀವಿ: ಪ್ಯಾಟ್ರಿಂಕೂಲ್‌ ಸಣ್ಣ ಪಕ್ಷಿ. ಇವುಗಳ ಗೂಡುಗಳನ್ನು ಹಾಳು ಮಾಡಲು ಹದ್ದು, ಕಾಗೆ, ಸೇರಿದಂತೆ ಇತರೆ ಬಕ ಪಕ್ಷಿಗಳ ದಾಳಿ ಆಗಾಗ್ಗೆ ನಡೆಯುತ್ತದೆ. ಇದರಿಂದಾಗಿ ತನ್ನನ್ನು ತಾನು ಕಾಪಾಡಿಕೊಳ್ಳಲು ರಿವರ್ ಟರ್ನ್ ಪಕ್ಷಿಗಳ ಆಶ್ರಯದಲ್ಲಿ ಪ್ಯಾಟ್ರಿಂಕೂಲ್‌ ಗೂಡಿ ಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ.

ರಿವರ್ ಟರ್ನ್ ಪಕ್ಷಿಗಳು ಬಕ ಪಕ್ಷಿಗಳನ್ನು ದೂರದಿಂದಲೇ ಗುರುತಿಸಿ, ಆಕ್ರಮಣಕಾರಿಯಾಗಿ ವರ್ತಿಸಿ ತನ್ನ ಗೂಡುಗಳ ಬಳಿ ಬಾರದಂತೆ ತಡೆಯುತ್ತವೆ ಎನ್ನುತ್ತಾರೆ ಪಕ್ಷಿ ಪ್ರೇಮಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು