ಮಂಗಳವಾರ, ಸೆಪ್ಟೆಂಬರ್ 28, 2021
25 °C
ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ

ಬುದ್ಧನ ಸಿದ್ಧಾಂತ ಬಸವಣ್ಣನಿಂದ ಪೂರ್ಣ; ಡಾ.ಶಶಿಕಾಂತ್‌ ಪಟ್ಟಣ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅಪೂರ್ಣಗೊಂಡಿದ್ದ ಬುದ್ಧ ತತ್ವಗಳ ಅನುಷ್ಠಾನ ಬಸವಣ್ಣನ ಕ್ರಾಂತಿಕಾರಿ ಹೋರಾಟದ ಮೂಲಕ ಪೂರ್ಣಗೊಂಡಿತು. ಇಬ್ಬರ ತತ್ವ–ಸಿದ್ಧಾಂತಗಳನ್ನೂ ಸಮನ್ವಯಗೊಳಿಸಿದ ವ್ಯಕ್ತಿ ಅಂಬೇಡ್ಕರ್‌’ ಎಂದು ಪುಣೆಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಶಶಿಕಾಂತ್‌ ಪಟ್ಟಣ್‌ ಅಭಿಪ್ರಾಯಪಟ್ಟರು.

ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಬಸವೇಶ್ವರ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌: ಭಾರತೀಯ ಸಮಾಜದ ಶಿಲ್ಪಿಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಬುದ್ಧ, ಬಸವ, ಅಂಬೇಡ್ಕರ್‌ ಜಗವು ಕಂಡ ಸಾಧಕರು, ದಾರ್ಶನಿಕರು. ನೆಲದೊಳಗೆ ಸಮತೆಯ ಕ್ರಾಂತಿ ಹಬ್ಬಿಸಿದ್ದು ಬುದ್ಧ. ಬುದ್ಧನ ದೀಪ ಬಸವಣ್ಣ. ಬಸವಣ್ಣನ ಕ್ರಾಂತಿಯ ದೀಪವನ್ನು ಹಚ್ಚಿದ್ದು ಅಂಬೇಡ್ಕರ್‌. ಮಹಿಳೆಯರು ಚಾಂಡಾಳ, ಪಂಚಮರು ಎನ್ನುತ್ತಿದ್ದ ಕಾಲದಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡಿದ ವ್ಯಕ್ತಿ ಬಸವಣ್ಣ. ಅವರು 12ನೇ ಶತಮಾನದ ಸರ್ವಶ್ರೇಷ್ಠ ಬಂಡಾಯಗಾರ’ ಎಂದು ಬಣ್ಣಿಸಿದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್, ‘‌ಸಮ ಸಮಾಜವು ಅಭಿವೃದ್ಧಿಯ ಅಂತಿಮ ಗುರಿಯಾಗಬೇಕು. ಇಂತಹ ಸಮಾಜವನ್ನು ಉತ್ತೇಜಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದ ಗುರಿ ನ್ಯಾಯವನ್ನು ಎತ್ತಿಹಿಡಿಯುವುದು, ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವುದು. ಅಂತಹ ಸಮಾಜ ನ್ಯಾಯಯುತ ವ್ಯವಸ್ಥೆಯನ್ನು ಖಾತರಿ ಪಡಿಸುತ್ತದೆ’ ಎಂದರು.

‘ದೇಶದಲ್ಲಿ ಅನ್ಯಾಯ (ಅಧರ್ಮ) ಮೇಲುಗೈ ಸಾಧಿಸಿದಾಗ ಅವತಾರ ಪುರುಷರು ಕಾಣಿಸಿಕೊಂಡು ಧರ್ಮವನ್ನು ಸ್ಥಾಪಿಸುತ್ತಾರೆ ಎಂಬ ನಂಬಿಕೆ ಇದೆ. 12ನೇ ಶತಮಾನದಲ್ಲಿ ಬಸವೇಶ್ವರ ಮತ್ತು 19ನೇ ಶತಮಾನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೀನದಲಿತರು, ಶೋಷಿತರ ವಿಮೋಚನಕಾರರಾಗಿ, ಅಜ್ಞಾನ ಮತ್ತು ಮೂಢನಂಬಿಕೆಗಳ ವಿರುದ್ಧ ಸಮಾಜ ಸುಧಾರಕರಾಗಿ ಕಾಣಿಸಿಕೊಂಡರು’ ಎಂದು ಪ್ರೊ.ಹೇಮಂತ್‌ ಕುಮಾರ್‌ ಹೇಳಿದರು.

‘ಬಸವಣ್ಣ, ಅಂಬೇಡ್ಕರ್‌ ವಿಭಿನ್ನ ಯುಗ ಮತ್ತು ಸಾಮಾಜಿಕ ಹಿನ್ನೆಲೆಗೆ ಸೇರಿದವರಾಗಿದ್ದರೂ, ಇಬ್ಬರ ನಡುವೆ ಸಾಮ್ಯತೆ ಇದೆ. ತುಳಿತಕ್ಕೊಳಗಾದ ಮತ್ತು ದನಿ ಇಲ್ಲದ ಸಮುದಾಯಗಳ ಸುಧಾರಣೆಗೆ ಹಾಗೂ ಸಮ ಸಮಾಜವನ್ನು ಸ್ಥಾಪಿಸಲು ಶ್ರಮಿಸಿದ್ದರು’ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಮಾತನಾಡಿ, ‘ಬಸವಣ್ಣ, ಅಂಬೇಡ್ಕರ್‌ ಸಮಾಜ ಸುಧಾರಕರು. 12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಗಾಗಿ, ದಲಿತರು, ಮಹಿಳೆಯರ ಪರವಾಗಿ ಹೋರಾಟ ಮಾಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿ ಮುಖ್ಯವಾಹಿನಿಗೆ ಬರಬೇಕು ಎಂದು ಬಯಸಿದ್ದರು. ಅದೇ ರೀತಿ, ಅಂಬೇಡ್ಕರ್‌ ಅವರು ದಲಿತರು, ದಮನಿತರು, ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸಿದ್ದರು. ಸಂವಿಧಾನದ ಮೂಲಕ ಎಲ್ಲರಿಗೂ ಹಕ್ಕುಗಳನ್ನು ಕಲ್ಪಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟಾ ವಿಮ್ಲ ಬ್ರಾಗ್ಸ್‌, ಸಹಾಯಕ ಪ್ರಾಧ್ಯಾಪಕಿ ಡಾ.ರೇಖಾ ಜಾದವ್‌, ಪ್ರೊ.ಚಂದ್ರಶೇಖರ್‌, ಪ್ರೊ.ಜಿ.ಎಚ್‌.ನಾಗರಾಜ್‌, ಡಾ.ಆರ್‌.ತಿಮ್ಮರಾಯಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.