ಬಜೆಟ್ ವಿಶ್ಲೇಷಣೆ | ಕೃಷಿ ಕ್ಷೇತ್ರ; ದ್ವಂದ್ವ ನಿಲುವು

ಶನಿವಾರ, ಜೂಲೈ 20, 2019
28 °C

ಬಜೆಟ್ ವಿಶ್ಲೇಷಣೆ | ಕೃಷಿ ಕ್ಷೇತ್ರ; ದ್ವಂದ್ವ ನಿಲುವು

Published:
Updated:

‘ಕೃಷಿ ಕ್ಷೇತ್ರವನ್ನು ಕೇಂದ್ರ ಬಜೆಟ್‌ ಹೇಗೆ ಪರಿಭಾವಿಸಿದೆ?’ ಪ್ರಜಾವಾಣಿ ಮೈಸೂರು ಕಚೇರಿಯಲ್ಲಿ ನಡೆದ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ರೈತಪರ ಹೋರಾಟಗಾರ್ತಿ ನಂದಿನಿ ಜಯರಾಮ್ ನಡೆಸಿದ ವಿಶ್ಲೇಷಣೆಯ ಅಕ್ಷರ ರೂಪ ಇಲ್ಲಿದೆ.

ಮೈಸೂರು: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಜೆಟ್‌ ನಿರಾಸೆ ಮೂಡಿಸಿದೆ. ‌ಸಾಕಷ್ಟು ದ್ವಂದ್ವಗಳನ್ನು ಕಾಣಬಹುದು. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮಾನವ ಸಂಪನ್ಮೂಲ. ಆದರೆ, ಕೌಶಲಾಭಿವೃದ್ಧಿ ತರಬೇತಿ ನೀಡುವ ಬಗ್ಗೆ ಇದೇ ಬಜೆಟ್‌ನಲ್ಲಿ ಹೇಳುತ್ತಾರೆ. ಕೃಷಿಯಲ್ಲಿ ಭದ್ರತೆ ಇಲ್ಲದವರು, ಗ್ರಾಮೀಣ ಪ್ರದೇಶದ ಯುವಕರು ತರಬೇತಿಗೆ ಹೋಗುತ್ತಾರೆ. ಬೇರೆ ಉದ್ಯೋಗ ಕಂಡುಕೊಳ್ಳುತ್ತಾರೆ. ಆಗ ಕೃಷಿಗೆ ಮಾನವ ಸಂಪನ್ಮೂಲವೇ ಸಿಗುವುದಿಲ್ಲ. ಮಾನವ ಸಂಪನ್ಮೂಲ ಇಲ್ಲದಿದ್ದರೆ ಶೂನ್ಯ ಬಂಡವಾಳದ ಮೂಲಕ ಕೃಷಿ ಕ್ಷೇತ್ರವನ್ನು ಬಲಪಡಿಸುವುದಾದರೂ ಹೇಗೆ?


ನಂದಿನಿ ಜಯರಾಮ್

ಬಜೆಟ್‌ನಲ್ಲಿ ಈಗ ನೈಸರ್ಗಿಕ ಕೃಷಿ ಬಗ್ಗೆ ಮಾತನಾಡಿದ್ದರೆ. ಈ ಹಿಂದೆ ಪ್ರಧಾನಿ ಮೋದಿ ಅವರು ಹೆಚ್ಚು ಯೂರಿಯ ಉತ್ಪಾದನೆ ಆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಯೂರಿಯ ಹೆಚ್ಚಾಗಿ ಮಣ್ಣಿನ ಗುಣಮಟ್ಟ ತಗ್ಗಿದೆ. ಮನುಷ್ಯನ ದೇಹ ಸೇರಿ ಕಿಡ್ನಿ ಸಮಸ್ಯೆ ಉಂಟಾಗುತ್ತಿದೆ. ಇವೆಲ್ಲಾ ದ್ವಂದ್ವಗಳನ್ನು ಗಮನಿಸಬಹುದು.

ಶೂನ್ಯ ಬಂಡವಾಳ ಕೃಷಿಗೆ ಯಾವ ರೀತಿ ಪ್ರೋತ್ಸಾಹ ನೀಡುತ್ತಾರೆ, ರೈತರ ಆದಾಯವನ್ನು ಹೇಗೆ ದ್ವಿಗುಣಗೊಳಿಸುತ್ತಾರೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ, ವಿವಿಧ ಯೋಜನೆ ಕಲ್ಪಿಸಲು ಖಾಸಗಿ ಹೂಡಿಕೆದಾರರ ಮೊರೆ ಹೋಗುತ್ತಿರುವುದು ಅಪಾಯಕಾರಿ. ಧೈರ್ಯವಿದ್ದರೆ ಹೊರಗಿನಿಂದ ತರುವ ಕೃಷಿ ಪದಾರ್ಥಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಿ.

ರೈತನಿಗೆ ನೇರವಾಗಿ ಯಾವುದೇ ಯೋಜನೆ ತಲುಪುತ್ತಿಲ್ಲ. ₹ 1 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ಕೃಷಿ ಬಜೆಟ್‌ನಲ್ಲಿ ಇರಿಸಿದ್ದಾರೆ. ವಾಸ್ತವವಾಗಿ ಅದು ಕಂಪನಿಗಳ ಪಾಲಾಗುತ್ತಿದೆ. ಬಿತ್ತನೆ ಬೀಜದ ಕಂಪನಿ, ರಸಗೊಬ್ಬರ, ಯಂತ್ರ, ವಿಮೆ ಕಂಪನಿಗಳನ್ನು ಸೇರುತ್ತಿದೆ. ವಿಮೆ ಕ್ಷೇತ್ರದಲ್ಲಿ ನೇರವಾಗಿ ಶೇ 100ರಷ್ಟು ಬಂಡವಾಳ ಹೂಡಲು ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. 2016–17ರಲ್ಲಿ ಕರ್ನಾಟಕದ ರೈತರು ಕಟ್ಟಿದ ವಿಮೆ ₹ 22,437 ಕೋಟಿ. ರೈತರು ಮತ್ತೆ ಪಡೆದಿದ್ದು ಕೇವಲ ₹ 8,088 ಕೋಟಿ. ಉಳಿಕೆ ಹಣ ಎಲ್ಲಿ ಹೋಯಿತು? ಸರ್ಕಾರಕ್ಕೂ ಹೋಗಲಿಲ್ಲ, ರೈತರ ಬಳಿಯೂ ಉಳಿಯಲಿಲ್ಲ.

ಕೃಷಿ ಕ್ಷೇತ್ರದ ಬಗ್ಗೆ ನಿರ್ಮಲಾ ಸೀತಾರಾಮನ್ ಅವರಿಗೆ ಸ್ಪಷ್ಟತೆ ಇಲ್ಲ. ಹೇಳುವುದೇ ಒಂದು; ಕೃತಿಯಲ್ಲಿ ಇಳಿಸುತ್ತಿರುವುದು ಮತ್ತೊಂದು ಎಂಬಂತಾಗಿದೆ.

ವೈಯಕ್ತಿಕವಾಗಿ ಹೇಳಬೇಕೆಂದರೆ ಸಾಲಮನ್ನಾ ಎಂಬುದು ರಾಜಕೀಯ. ಸಾಲಮನ್ನಾ ವಿಚಾರದಲ್ಲಿ ಸರ್ಕಾರ ಏನು ಕ್ರಮ ವಹಿಸುತ್ತದೆ ಎಂಬ ಕುತೂಹಲ ಇತ್ತು. ಆದರೆ, ಆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಕೃಷಿ ಇತಿಹಾಸ ಗಮನಿಸಿದರೆ ರೈತರು ಯಾವುದೇ ಸಂದರ್ಭದಲ್ಲಿ ಕೈಚಾಚಿದವರು ಅಲ್ಲ; ಬದಲಾಗಿ ನೀಡುವವರಾಗಿದ್ದಾರೆ. ಅವರಿಗೆ ಬೇಕಿರುವುದು ಸಹಕಾರಿ ಕ್ಷೇತ್ರದಲ್ಲಿ ಸುಭದ್ರವಾದ ಮಾರುಕಟ್ಟೆ. ಏಕೆ ಈ ವಿಚಾರ ಹೇಳುತ್ತೇನೆ ಎಂದರೆ ಸೀತಾರಾಮನ್‌ ಅವರು ಖಾಸಗಿ ಬಂಡವಾಳದ ಬಗ್ಗೆ ಪದೇಪದೇ ಮಾತನಾಡುತ್ತಿದ್ದರು. ಖಾಸಗೀಕರಣ ಬಗ್ಗೆ ಇರುವಷ್ಟು ಒಲವು ಕೃಷಿ ಕ್ಷೇತ್ರದ ಬಗ್ಗೆ ಕಾಣಲಿಲ್ಲ.

10 ಸಾವಿರ ರೈತ ಉತ್ಪಾದನಾ ಸಂಘಗಳನ್ನು ರಚಿಸಲು ಮುಂದಾಗಿರುವುದು ಸರಿಯಲ್ಲ. ಗ್ರಾಮೀಣ ಭಾಗದ ಬದುಕೇ ಸಮುದಾಯದ ಬದುಕು. ಪ್ರತಿ ರೈತರೂ ವಿಜ್ಞಾನಿ. ರೈತರೇ ಸಂಘಟಿತರಾಗಿದ್ದಾರೆ. ರಟ್ಟೆಗೆ ಶಕ್ತಿ ತುಂಬಬೇಕೇ ವಿನಾ ಸಂಘಗಳನ್ನು ರಚಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬಾರದು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !