ಗುರುವಾರ , ಜುಲೈ 7, 2022
22 °C
ರಾಜ್ಯ ಬಜೆಟ್‌ನಲ್ಲಿ ಸಾಂಸ್ಕೃತಿಕ ನಗರಕ್ಕೆ ಕೆಲವು ಆಕರ್ಷಕ ಕೊಡುಗೆಗಳು

ಕರ್ನಾಟಕ ಬಜೆಟ್‌ | ಮೈಸೂರು: ನಿರೀಕ್ಷೆ ಬೆಟ್ಟದಷ್ಟು; ಸಿಕ್ಕಿದ್ದು ಸಾಸಿವೆಯಷ್ಟು!

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಾಜ್ಯ ಬಜೆಟ್‌ ಮೇಲೆ ಸಾಂಸ್ಕೃತಿಕ ನಗರಿ ಇರಿಸಿದ್ದ ಬೆಟ್ಟದಷ್ಟು ನಿರೀಕ್ಷೆಯಲ್ಲಿ ಕೆಲವಾದರೂ ಸಿಕ್ಕಿವೆ. ಮಹತ್ವದ ಯೋಜನೆಗಳಾದ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ, ಮೈಸೂರು– ಚೆನ್ನೈ ಹೈಸ್ಪೀಡ್‌ ರೈಲು ಯೋಜನೆ, ಚಾಮುಂಡಿಬೆಟ್ಟಕ್ಕೆ ರೋಪ್‌ವೇಯಂಥ ಆಕರ್ಷಕ ಹಾಗೂ ಮಹತ್ವದ ಕೊಡುಗೆಗಳು ಲಭಿಸಿವೆ.

ಸ್ಟಾರ್ಟ್ ಅಪ್‌ ಕ್ಲಸ್ಟರ್‌ಗಳ ರಚನೆ, ಅಗರಬತ್ತಿ ತಯಾರಿಕೆ ಕುರಿತು ಮೈಕ್ರೊ ಕ್ಲಸ್ಟರ್‌ಗಳ ರಚನೆಯಂತಹ ಬೆರಳೆಣಿಕೆಯಷ್ಟು ಕೊಡುಗೆಗಳು ಮಾತ್ರವೇ ಕೈಗಾರಿಕಾ ಕ್ಷೇತ್ರಕ್ಕೆ ದಕ್ಕಿವೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೈಸೂರು– ಶ್ರೀರಂಗಪಟ್ಟಣ– ಹಾಸನ– ಬೇಲೂರು– ಹಳೇಬೀಡು ಪ್ರವಾಸಿ ವೃತ್ತವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವ ಇದೆಯಾದರೂ, ಅದರ ರೂಪುರೇಷೆ ಹಾಗೂ ನಿಗದಿಯಾಗಿರುವ ಹಣದ ಕುರಿತು ಸ್ಪಷ್ಟತೆ ಇಲ್ಲ.

ಕೆ.ಆರ್.ಆಸ್ಪತ್ರೆ ಕಟ್ಟಡ ನವೀಕರಣಕ್ಕೆ ₹ 89 ಕೋಟಿ ಸಿಕ್ಕಿರುವುದು ಬಿಟ್ಟರೆ ಆರೋಗ್ಯ ಕ್ಷೇತ್ರದಲ್ಲಿ ಬೇರೆ ಕೊಡುಗೆಗಳಿಲ್ಲ. ಹಿಂದೆಯೇ ಘೋಷಿಸಿದ್ದ ಕ್ವಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡುವ ಪ್ರಸ್ತಾಪವೂ ಇಲ್ಲ. ಅದರ ಬದಲಿಗೆ ಬೆಳಗಾವಿಯಲ್ಲಿ ಕಿದ್ವಾಯಿ ಕೇಂದ್ರ ಆರಂಭಿಸುವ ಪ್ರಸ್ತಾವವನ್ನಿರಿಸಿ, ಮೈಸೂರನ್ನು ಕಡೆಗಣಿಸಲಾಗಿದೆ. ಇಲ್ಲಿ ಕಿದ್ವಾಯಿ ಕೇಂದ್ರ ತೆರೆದರೆ ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಭಾಗಗಳ ಜನರಿಗೆ ಅನುಕೂಲವಾಗುತ್ತಿತ್ತು. ಚಾಮುಂಡಿ ವಿಹಾರ ಕ್ರೀಡಾಂಗಣದ ಮೇಲಿನ ಒತ್ತಡ ತಗ್ಗಿಸಲು ನಗರ ವ್ಯಾಪ್ತಿಯಲ್ಲಿ ಇನ್ನೆರಡು ಸುಸಜ್ಜಿತ ಕ್ರೀಡಾಂಗಣಗಳು ಬೇಕು, ಈಜುಕೊಳಗಳ ಸಂಖ್ಯೆ ಹೆಚ್ಚಿಸಬೇಕು, ಹೋಬಳಿ ಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಬೇಕೆಂಬ ಬೇಡಿಕೆಗಳೂ ಈಡೇರಿಲ್ಲ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ₹ 30 ಕೋಟಿ ವೆಚ್ಚದಲ್ಲಿ ‘ಮೈಸೂರು ದಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಪ್ಲಗ್ ಅಂಡ್ ಪ್ಲೇ’ ಸ್ಥಾಪನೆಯ ಪ್ರಸ್ತಾವ ಇರುವುದನ್ನು ಬಿಟ್ಟರೆ ಶೈಕ್ಷಣಿಕವಾಗಿಯೂ ಮಹತ್ವದ ಕೊಡುಗೆಗಳಿಲ್ಲ. 

ಶತಮಾನ ಕಂಡಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಕಾಯಂ ಬೋಧಕರ ನೇಮಕ, ಹಾಸ್ಟೆಲ್‌ ಸೌಲಭ್ಯ ಹೆಚ್ಚಳ, ಸಂಶೋಧನಾ ಕ್ಷೇತ್ರಕ್ಕೆ ಪ್ರತ್ಯೇಕ ಅನುದಾನ ನಿಗದಿ ಮಾಡುವ ಮೂಲಕ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಶ್ರೇಣಿಯನ್ನು ಎ ಗ್ರೇಡ್‌ನಿಂದ ಎ + ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ.

ರಾಷ್ಟ್ರಕವಿ ಕುವೆಂಪು ವಾಸವಿದ್ದ ‘ಉದಯರವಿ’ ಮನೆ
ಯನ್ನು ಸ್ಮಾರಕವನ್ನಾಗಿಸುವ ಯೋಜನೆ, ಮೈಸೂರು ತಾಲ್ಲೂಕಿನ ಆಯರ
ಹಳ್ಳಿಯಲ್ಲಿ 10 ಎಕರೆಯಲ್ಲಿ ನಿರ್ಮಿಸುತ್ತಿರುವ ಗೋಶಾಲೆಗೆ ಅನುದಾನ, ಚಾಮರಾಜೇಂದ್ರ ಮೃಗಾಲಯದಲ್ಲಿ ವಿಶ್ವದರ್ಜೆಯ ಮತ್ಸ್ಯಾಲಯ (ಅಕ್ವೇರಿಯಂ) ನಿರ್ಮಾಣಕ್ಕೆ ಅನುದಾನ ಸೇರಿದಂತೆ ಬಹಳಷ್ಟು ಬೇಡಿಕೆಗಳು ಈಡೇರಿಲ್ಲ.

ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ಯೋಜನೆಗೆ ಹಣ, ಅಧಿಕಾರಿಗಳು, ಸಿಬ್ಬಂದಿ ನೇಮಕದ ಪ್ರಸ್ತಾಪವಿಲ್ಲ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಕೇಂದ್ರ, ಟ್ರಕ್ ಟರ್ಮಿನಲ್ ಯೋಜನೆ, ಕೈಗಾರಿಕಾ ಕ್ಲಸ್ಟರ್ ಆಭಿವೃದ್ಧಿ, ರೋಗಗ್ರಸ್ತ ಕೈಗಾರಿಕಾ ಪುನಶ್ಚೇತನಕ್ಕೆ ಯೋಜನೆ ರೂಪಿಸಿಲ್ಲ ಎಂಬ ಅಪಸ್ವರಗಳೂ ಕೇಳಿ ಬಂದಿವೆ.

ಘೋಷಿಸಿರುವ ಮಹತ್ವ ಯೋಜನೆಗಳಿಗೂ ಅನುದಾನದ ಪ್ರಮಾಣವನ್ನು ನಿಗದಿ ಮಾಡಿಲ್ಲ. ಅವುಗಳೂ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಹಾಗೆ ಕಾಗದದಲ್ಲೇ ಉಳಿಯುತ್ತವೆಯೇ ಎಂಬ ಪ್ರಶ್ನೆಯೂ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು