ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಚಿನ್ನ ಖರೀದಿಗೂ ಮುನ್ನ

ಪ್ರದೀಪ ಕುಂದಣಗಾರ Updated:

ಅಕ್ಷರ ಗಾತ್ರ : | |

Prajavani

‘ಮಾತು ಬೆಳ್ಳಿ ಮೌನ ಬಂಗಾರ’ ಎಂಬುದು ಗಾದೆ. ಆದರೆ, ಮೌನಕ್ಕೆ ಮಾತಿಗಿಂತ ಬೆಲೆ ಜಾಸ್ತಿ. ಅದಕ್ಕಾಗಿಯೇ ಮೌನ ಬಂಗಾರವೆಂದಿರಬಹುದು.

ಬಂಗಾರವೆಂದೇ ಗ್ರಾಮೀಣರಲ್ಲಿ ಪ್ರಚಲಿತದಲ್ಲಿರುವ ಹಳದಿ ಲೋಹ ಚಿನ್ನಕ್ಕೆ ಸದಾಕಾಲ ಬೇಡಿಕೆ ಇದ್ದೇ ಇದೆ. ಅದಕ್ಕೆ ಪ್ರತಿದಿನ, ಪ್ರತಿವರ್ಷ ಆಗುತ್ತಿರುವ ಮಾರಾಟದ ಲೆಕ್ಕವೇ ಸಾಕ್ಷಿ.

ಚಿನ್ನದ ಪ್ರಿಯರಾದ ಭಾರತೀಯರು, ಹಬ್ಬ, ಸಮಾರಂಭ, ಮದುವೆ–ಮುಂಜಿ ಎಂದು ಆಗಾಗ ತಮಗಾದ ಮಟ್ಟಿಗೆ ಖರೀದಿಸುತ್ತಿರುತ್ತಾರೆ. ಅದರಲ್ಲೂ ಅಕ್ಷಯ ತೃತೀಯದಂದು ಗುಂಜಿ ಬಂಗಾರವನ್ನಾದರೂ ಖರೀದಿ ಮಾಡಬೇಕು. ಇದರಿಂದ ಮನೆಯಲ್ಲಿ ಬಂಗಾರದ ಸಂಗ್ರಹ ಹೆಚ್ಚುವುದು ಎಂಬುದು ಬಹುಜನರ ನಂಬಿಕೆ.

ಗುರು ಪುಷ್ಯ (ಪುಷ್ಯ ನಕ್ಷತ್ರ ಗುರುವಾರ) ಇದ್ದಾಗ ಚಿನ್ನ ಖರೀದಿಸಬೇಕು ಎಂದು ಹಲವು ವರ್ಷಗಳ ಹಿಂದೆ ಜನ ಮುಗಿಬೀಳುತ್ತಿದ್ದರು. ಆ ಕಲ್ಪನೆ ಈಗ ಕಡಿಮೆಯಾಗಿದೆ. ಆದರೆ, ಅಕ್ಷಯ ತೃತೀಯದಂದು ಖರೀದಿ ಎಂದೂ ಕುಗ್ಗಿಲ್ಲ. ಅದಕ್ಕೆ ಜ್ಯುವೆಲರಿ ಮಳಿಗೆಗಳು ನೀಡುವ ಆಫರ್‌ಗಳೇ ಉದಾಹರಣೆಯಾಗಿವೆ.

ಈ ದುಬಾರಿ ಲೋಹವನ್ನು ಅಕ್ಷಯ ತೃತೀಯಾದಂದೇ ಕೊಳ್ಳಲು ವರ್ಷದಿಂದಲೂ ಕಾಯುವ ಜನ ಇದ್ದಾರೆ. ಈ ದಿನವನ್ನು ಲಾಭದಾಯಕವಾಗಿಸಿಕೊಳ್ಳಲು ಚಿನ್ನಾಭರಣ ವ್ಯಾಪಾರಿಗಳೂ ಭರ್ಜರಿ ಆಫರ್‌ಗಳನ್ನು ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತಾರೆ. ಅಮೂಲ್ಯ ವಸ್ತು ಕೊಳ್ಳಲು, ಶುಭ ಕಾರ್ಯ ಮಾಡಲು, ಚಿನ್ನ ಖರೀದಿಸಲು, ಹೊಸ ಉದ್ಯಮ ಆರಂಭಿಸಲು ಅತ್ಯಂತ ಶುಭ ದಿನ ಎಂಬ ಖ್ಯಾತಿ. ಹೀಗಾಗಿ ಚಿನ್ನವಷ್ಟೇ ಅಲ್ಲದೇ ಇತರೆ ಸಾಮಗ್ರಿಗಳ ಖರೀದಿಯೂ ಅಂದೂ ಭರ್ಜರಿಯಾಗಿಯೇ ಇರುತ್ತದೆ.

ಹಿಂದೆ ಅಕ್ಷಯ ತೃತೀಯ ಬಂದರೆ ಚಿನ್ನದ ಬೆಲೆ ಸಾಕಷ್ಟು ಹೆಚ್ಚಾಗಲಿದೆ. ಅವತ್ತು ಖರೀದಿಗೆ ಜನ ಮುಗಿಬೀಳುವುದರಿಂದ ದರ ಮತ್ತಷ್ಟು ಹೆಚ್ಚುವುದು ಎಂಬ ಅವ್ಯಕ್ತ ಭಯ ಕಾಡುತ್ತಿದ್ದರೂ, ಖರೀದಿಗೆ ಬರವಿರಲಿಲ್ಲ. ಆದರೆ, ಈಗ ವಾರ– ಹದಿನೈದು ದಿನದಿಂದ ಬುಕ್ಕಿಂಗ್ ಶುರುವಾಗುತ್ತಿದ್ದು, ನೀವು ದರ ಕಡಿಮೆ ಇರುವ ದಿನ ಬುಕ್ ಮಾಡಿದರೆ, ಅಕ್ಷಯ ತೃತೀಯದಂದು ಅಂಗಡಿಯಿಂದ ಚಿನ್ನ ಅಥವಾ ನಿಮಗೆ ಬೇಕಾದ ಆಭರಣ ಒಯ್ಯಬಹುದಾಗಿದೆ. ಇದು ಗ್ರಾಹಕರಿಗೆ ವರವೂ ಆಗಿದೆ ಎನ್ನಬಹುದು.

ಚಿನ್ನ ಖರೀದಿಸಿದರೆ ನಷ್ಟವೇನಲ್ಲ. ಅದಕ್ಕಾಗಿಯೇ ನೋಟಿಗಿಂತ ಚಿನ್ನಕ್ಕೆ ಬೇಡಿಕೆ ಜಾಸ್ತಿ. ಚಿನ್ನವನ್ನು ಕಾರ್ಡ್‌ ಕ್ಯಾಷ್ ಎಂದು ಕರೆಯುವುದು ಅದಕ್ಕಾಗಿಯೇ. ಚಿನ್ನಕ್ಕೆ ಬೆಲೆ ಹೆಚ್ಚುತ್ತಲೇ ಇರುವುದೂ ಜನರ ನಂಬಿಕೆಗೆ ಇನ್ನಷ್ಟು ಪುಷ್ಟಿ ಕೊಟ್ಟಿದೆ. ಚಿನ್ನ ಅಕ್ಷಯವಾಗದಿದ್ದರೂ, ಗ್ರಾಹಕರಿಗೆ ನಷ್ಟವಂತೂ ಆಗುವುದಿಲ್ಲ. ಹೀಗಾಗಿ ಕೊಳ್ಳಲು ಹಿಂದೇಟು ಹಾಕುವುದಿಲ್ಲ, ‘ಅಕ್ಷಯ ತೃತೀಯಾ’ ಚಿನ್ನ ಖರೀದಿಗೆ ಪ್ರಶಸ್ತ ದಿನ ಎಂಬ ಟ್ರೆಂಡ್‌ ಶುರುವಾಗಿದೆ.

ಪೌರಾಣಿಕ ಮಹತ್ವ

ಈ ದಿನಕ್ಕೆ ಇಷ್ಟೊಂದು ಮಹತ್ವ ಸೃಷ್ಟಿಯಾಗಿದ್ದಾದರೂ ಏಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಪುರಾಣಗಳಲ್ಲಿಯೂ ಈ ದಿನ ಅತ್ಯಂತ ಮಂಗಳಮಯ ಎಂದು ವರ್ಣಿಸಲಾಗಿದೆ. ಗೆಳೆಯ ಸುಧಾಮನಿಂದ ಅವಲಕ್ಕಿ ಪಡೆದು ತಿನ್ನುವ ಶ್ರೀಕೃಷ್ಣ, ಅವನಿಗೆ ಅರಿವಿಲ್ಲದಂತೆ ಅಷ್ಟೈಶ್ವರ್ಯಗಳನ್ನು ನೀಡಿದ್ದು ಇದೇ ದಿನ ಎನ್ನಲಾಗಿದೆ. ಪಾಂಡವರು ವನವಾಸದಲ್ಲಿದ್ದಾಗ ಅವರಿಗೆ ಕೃಷ್ಣ ಅಕ್ಷಯ ಪಾತ್ರೆ ನೀಡಿದ್ದು, ವಿಷ್ಣುವು ಪರಶುರಾಮನಾಗಿ ಅವತಾರ ತಾಳಿದ್ದು, ವ್ಯಾಸ ಮಹರ್ಷಿ ‘ಮಹಾಭಾರತ’ವನ್ನು ಬರೆಯಲು ಆರಂಭಿಸಿದ್ದು, ಕುಬೇರ ಸಂಪತ್ತಿನ ಅಧಿಪತಿಯಾದದ್ದು ಮೊದಲಾದ ಹಲವು ಕಥೆಗಳೂ ಅಕ್ಷಯ ತೃತೀಯಾದೊಂದಿಗೆ ಥಳಕು ಹಾಕಿಕೊಂಡಿವೆ.

ಮೈಸೂರಿನಲ್ಲಿ ಚಿನ್ನ ಮಾರಾಟ ಹೇಗೆ?

ಸ್ವರ್ಣಪಥವೆಂದೇ ಕರೆಯಲಾಗುವ ಅಶೋಕ ರಸ್ತೆಯ ಚಿನ್ನಾಭರಣ ವ್ಯಾಪಾರಿಗಳ ಸಂಘದಡಿ 480 ಜ್ಯುವೆಲರಿ ಅಂಗಡಿಗಳಿದ್ದು, ಅದರಲ್ಲಿ ಬಹುತೇಕ ಅಂಗಡಿಯವರು ಒಂದಿಲ್ಲೊಂದು ಕೊಡುಗೆ ನೀಡುತ್ತಾ ಗ್ರಾಹಕರನ್ನು ಆಕರ್ಷಿಸುತ್ತಾರೆ.

‘ಅಕ್ಷಯ ತೃತೀಯಾ ಮುಂಗಡ ಬುಕ್ಕಿಂಗ್‌ ಮಾಡಿದರೆ ಪ್ರತಿ ಗ್ರಾಂನ ವೆಸ್ಟೇಜ್‌ನಲ್ಲಿ ರಿಯಾಯಿತಿ ನೀಡಲಾಗುತ್ತಿದೆ’ ಎಂದು ಹೇಳುತ್ತಾರೆ ಚಿನ್ನಾಭರಣ ವ್ಯಾಪಾರಿಗಳ ಸಂಘಟ ಅಧ್ಯಕ್ಷ, ಲಲಿತಾ ಜ್ಯುವೆಲರಿ ಮಾರ್ಟ್‌ನ ಮಾಲೀಕ ಸಿ.ಎಸ್‌.ಅಮರನಾಥ್.

ಈಚೆಗೆ ಆರಂಭವಾದ ವೈವಿಧ್ಯ ಜ್ಯುವೆಲರಿಯಲ್ಲಿ ಗ್ರಾಹಕರು ಖರೀದಿಸುವ ಪ್ರತಿ ಗ್ರಾಂ ಚಿನ್ನದ ಮೇಕಿಂಗ್‌ ಚಾರ್ಜ್‌ಗೆ ₹ 200 ರಿಯಾಯಿತಿ ಹಾಗೂ ಅಡ್ವಾನ್ಸ್ ಬುಕ್ ಮಾಡಿದ ಗ್ರಾಹಕರಿಗೆ ಅಶ್ಯೂರ್ಡ್ ಗಿಫ್ಟ್‌ ಕೂಡಾ ನೀಡಲಾಗುತ್ತಿದೆ ಎಂದು ಪರ್ವೇಜ್ ಹೇಳಿದರು.

ದೊಡ್ಡ ದೊಡ್ಡ ಮಳಿಗೆಯವರು ₹ 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಕೊಂಡರೆ, 1 ಗ್ರಾಂ ಚಿನ್ನದ ನಾಣ್ಯ ಉಚಿತ ಉಚಿತ. ಚಿನ್ನ ಕೊಂಡರೆ, ಅದಕ್ಕೂ ರಿಯಾಯಿತಿ ನೀಡಲಾಗುತ್ತಿದೆ.

ದೇವರಾಜ ಅರಸ್‌ ರಸ್ತೆಯ ಶಾರದಾ ಜುವೆಲರಿಯವರು ಪ್ರತಿ ಗ್ರಾಂ ಚಿನ್ನ ಖರೀದಿ ಮೇಲೆ ₹ 100 ರಿಯಾಯಿತಿ, ವಜ್ರಾಭರಣದ ಮೇಲೆ ₹ 4 ಸಾವಿರ ರಿಯಾಯಿತಿ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು