ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 26ರ ಮುಷ್ಕರ ಯಶಸ್ಸಿಗೆ ಪಣ

ಸಮಾನ ಮನಸ್ಕರನ್ನು ಒಗ್ಗೂಡಿಸಲು ಕರೆ
Last Updated 7 ನವೆಂಬರ್ 2020, 15:13 IST
ಅಕ್ಷರ ಗಾತ್ರ

ಮೈಸೂರು: ನ. 26ರಂದು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಇಲ್ಲಿ ಗೋವರ್ಧನ್ ಹೋಟೆಲ್‌ನಲ್ಲಿ ಶನಿವಾರ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಮಾವೇಶ ನಿರ್ಣಯ ಕೈಗೊಂಡಿತು.

ಎಐಟಿಯುಸಿ, ಐಎನ್‌ಟಿಯುಸಿ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕ್, ಜೀವವಿಮೆ, ದಲಿತ ಸಂಘರ್ಷ ಸಮಿತಿ, ರೈತ ಸಂಘಟನೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

‌ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಾಧಿತರಾದ ಸಮಾನ ಮನಸ್ಕರನ್ನು ಒಗ್ಗೂಡಿಸಬೇಕು, ರೈತರು ಹಾಗೂ ದಲಿತರನ್ನು ಈ ಬಾರಿ ಹೆಚ್ಚು ಒಳಗೊಳ್ಳಬೇಕು ಎಂದು ನಿರ್ಣಯಿಸಲಾಯಿತು.

ನಂಜನಗೂಡಿನಲ್ಲೂ ಇದೇ ಬಗೆಯ ಸಮಾವೇಶವೊಂದನ್ನು ಮಾಡಿ ಮುಷ್ಕರ ಕುರಿತು ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು. ಎಲ್ಲರೂ ಸ್ವಯಂಪ್ರೇರಿತರಾಗಿ ತಾವು ಮಾಡುವ ಕೆಲಸದಿಂದ ಒಂದು ದಿನದ ಮಟ್ಟಿಗೆ ದೂರ ಉಳಿಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ತೀರ್ಮಾನಿಸಲಾಯಿತು.

ಕೋವಿಡ್‌ ಕುರಿತ ಮುಂಜಾಗ್ರತೆಯನ್ನು ಗಮನದಲ್ಲಿರಿಸಿಕೊಂಡು, ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಸಣ್ಣ ಸಣ್ಣ ಸಭೆಗಳನ್ನು ನಡೆಸಬೇಕು. ಕರಪತ್ರಗಳನ್ನು ಮುದ್ರಿಸಬೇಕು. ಮುಷ್ಕರ ಜನರ ಪರ ಎಂಬುದನ್ನು ಎಲ್ಲರಿಗೂ ತಿಳಿಸಬೇಕು ಎಂದು ನಿರ್ಣಯಿಸಲಾಯಿತು.

ಸಮಾವೇಶದಲ್ಲಿ ಮಾತನಾಡಿದ ಎಐಟಿಯುಸಿಯ ಜಿಲ್ಲಾಪ್ರಧಾನ ಕಾರ್ಯದರ್ಶಿ ಶೇಷಾದ್ರಿ, ‘ಕಾರ್ಮಿಕರಿಗೆ, ನೌಕರರಿಗೆ ಕೊಡುವಂತಹ ಡಿ.ಎ ಮೊದಲಾದ ಸೌಲಭ್ಯಗಳನ್ನು ಮುಂದಕ್ಕೆ ಹಾಕಲಾಗುತ್ತಿದೆ. ವೇತನ ಕಡಿತ, ಉದ್ಯೋಗ ಕಡಿತ ನೀತಿಗಳು ಜಾರಿಯಲ್ಲಿವೆ. ಇದರೊಂದಿಗೆ ಪೆಟ್ರೋಲ್, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳೂ ಹೆಚ್ಚಾಗಿವೆ. ಹೀಗಿರುವಾಗ ಜನಸಾಮಾನ್ಯರು ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಕೋವಿಡ್ ಸಂಕಷ್ಟದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ನಮ್ಮ ಉದ್ದೇಶ ಅಲ್ಲ. ಕಾರ್ಮಿಕರ ಶೋಚನೀಯ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂಬುದಷ್ಟೇ ನಮ್ಮ ಒತ್ತಾಯ. ಅದಕ್ಕಾಗಿ ನಾವು ಕೇವಲ 7 ಬೇಡಿಕೆಗಳನ್ನು ಮಾತ್ರವೇ ಸರ್ಕಾರದ ಮುಂದಿಟ್ಟಿದ್ದೇವೆ. ಇವುಗಳನ್ನು ಈಡೇರಿಸಿದರೆ ದೇಶದ ಬಡಜನರಿಗೆ ಒಳಿತಾಗುತ್ತದೆ’ ಎಂದರು.

ಎಐಟಿಯುಸಿಯ ಜಿಲ್ಲಾ ಉಪಪ‍್ರಧಾನ ಕಾರ್ಯದರ್ಶಿ ರಾಮಕೃಷ್ಣ, ಎಐಯುಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಮೇಟಿ, ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಂ, ದಲಿತ ಸಂಘರ್ಷ ಸಮಿತಿಯ ಶಂಭುಲಿಂಗಯ್ಯ, ಮುಖಂಡ ಪುರುಷೋತ್ತಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT