ಶುಕ್ರವಾರ, ಫೆಬ್ರವರಿ 26, 2021
18 °C
ಅಂಗವಿಕಲ ಮಹಿಳೆಯರೇ ಈ ಬಾರಿ ಸರಗಳ್ಳರ ಗುರಿ

ಮತ್ತೆ ನಗರದಲ್ಲಿ ಸರಣಿ ಸರಗಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಮತ್ತೆ ಸರಣಿ ಸರಗಳವು ಸೋಮವಾರ ಸಂಭವಿಸಿದೆ. ಕೇವಲ 15 ನಿಮಿಷದ ಅಂತರದಲ್ಲಿ ಸರಗಳ್ಳ ತನ್ನ ಕೈಚಳಕ ಮೆರೆದಿದ್ದಾನೆ. ಮೇ 2ರಂದು ಹಿರಿಯ ನಾಗರಿಕ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ ಕಳ್ಳರು, ಈ ಬಾರಿ ಅಂಗವಿಕಲ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ.

ಸಿದ್ದಾರ್ಥನಗರದಲ್ಲಿ ಸಂಜೆ 4.30ಕ್ಕೆ ಉಮಾಶಂಕರಿ (50) ಎಂಬುವವರು ನಡೆದು ಹೋಗುವಾಗ ಹಿಂದಿನಿಂದ ಹೆಲ್ಮೆಟ್ ಧರಿಸಿ ಬಂದ ಬೈಕ್ ಸವಾರನೊಬ್ಬ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.  ನಜರ್‌ಬಾದ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇಲ್ಲಿಂದ ಉದಯಗಿರಿಗೆ ಬಂದ ಈತ 4.45ರ ಸಮಯದಲ್ಲಿ ಮಂಜುಳಾ (60) ಎಂಬ ಮಹಿಳೆ ನಡೆದು ಹೋಗುವಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೊರಟಿದ್ದಾನೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಡಿಸಿಪಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇರುವುದರಿಂದ ಒಬ್ಬನೇ ವ್ಯಕ್ತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಬಸ್‌ನಲ್ಲಿ ಮತ್ತೆ ಕಳವು

ಇಲ್ಲಿನ ನಗರ ಬಸ್‌ನಿಲ್ದಾಣದಿಂದ ಜೆಎಸ್ಎಸ್ ಬಡಾವಣೆಗೆ ತೆರಳುತ್ತಿದ್ದ ಗೀತಾ ಎಂಬ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ₹ 1.6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದಾರೆ.

ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ ಬಾಕ್ಸ್‌ನಿಂದ ಚಿನ್ನಾಭರಣಗಳನ್ನು ಅರಿವಿಗೆ ಬಾರದ ಹಾಗೆ ಕಳವು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಶ್ಯಾವಾಟಿಕೆ: ಒಬ್ಬ ಮಹಿಳೆಯ ರಕ್ಷಣೆ

ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಜಯಲಕ್ಷ್ಮೀಪುರಂ 2ನೇ ಮುಖ್ಯರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗಮ್ಮ (40) ಎಂಬ ಮಹಿಳೆಯನ್ನು ಬಂಧಿಸಿ, ಒಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್ ಎ.ಮಲ್ಲೇಶ್ ಹಾಗೂ ಜಯಲಕ್ಷ್ಮೀಪುರಂ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್‌ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು