ಶುಕ್ರವಾರ, ನವೆಂಬರ್ 22, 2019
20 °C
ಹಲವು ಭಕ್ತರಿಗೆ, ಪ್ರವಾಸಿಗರಿಗೆ ತೊಂದರೆ

ಮೈಸೂರು: ಆಣೆ, ಪ್ರಮಾಣಕ್ಕೆ ಭಕ್ತರಿಂದ ಟೀಕೆಗಳ ಮಹಾಪೂರ

Published:
Updated:
Prajavani

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಗುರುವಾರ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಧ್ಯೆ ನಡೆದ ಆಣೆ, ಪ್ರಮಾಣದ ವಿದ್ಯಮಾನ ಭಕ್ತರಿಂದ ತೀವ್ರ ಟೀಕೆಗೆ ಗುರಿಯಾಯಿತು.

‘ಯಾರೋ ಯಾರ ಮೇಲೋ ಆರೋಪ ಮಾಡಿದರೆ ಸಾಬೀತು ಮಾಡಲು ನ್ಯಾಯಾಲಯಗಳಿವೆ. ಪೊಲೀಸ್‌ ವ್ಯವಸ್ಥೆ ಇದೆ. ಇವುಗಳ ಮಧ್ಯೆ ಆಣೆ, ಪ್ರಮಾಣ ಮಾಡುತ್ತೇವೆ ಎಂದು ಬರುವುದು ಮೂರ್ಖತನದ ಪರಮಾವಧಿ’ ಎಂದು ಹಿರಿಯ ನಾಗರಿಕರಾದ ಚಂದ್ರಶೇಖರ ಹರಿಹಾಯ್ದರು.

ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಪ್ರತಿಕ್ರಿಯಿಸಿ, ‘ಈಗ ಉಭಯ ನಾಯಕರಿಗೂ ಕೆಲಸ ಇಲ್ಲ. ಮಾಧ್ಯಮದವರಿಗೂ ಸುದ್ದಿ ಇಲ್ಲ. ಹೀಗಾಗಿ, ಇದೊಂದು ಹೈಡ್ರಾಮ ಮಾಡಲು ಬಂದಿದ್ದೀರಿ. ಭಕ್ತಿಯಿಂದ ಬರುವ ನಮಗೆ ಅಡ್ಡಿಯಾಗಿದ್ದೀರಿ’ ಎಂದು ಅಕ್ಷರಶಃ ಕಿಡಿಕಾರಿದರು.

ಸಾ.ರಾ.ಮಹೇಶ್ ಅವರು ದೇವಸ್ಥಾನದ ಪ್ರಾಂಗಣದಲ್ಲಿ ನೂರೊಂದು ತೆಂಗಿನಕಾಯಿಗಳನ್ನು ಒಡೆಯುವ ಸಂದರ್ಭದಲ್ಲಿ ಅವರ ಕಾರ್ಯಕರ್ತರಿಂದ ಉಂಟಾದ ತಳ್ಳಾಟ, ನೂಕಾಟ ಕಂಡ ಅನಸೂಯ ಎಂಬುವವರು, ‘ಇದೇನು ದೇವಸ್ಥಾನವೇ, ಇವರ ಚುನಾವಣಾ ಪ್ರಚಾರದ ಕಾರ್ಯಕ್ರಮವೇ. ಏನೆಂದು ತಿಳಿದುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

ಚಾಮುಂಡಿಬೆಟ್ಟದ ಪಾದದ ಬಳಿಯೇ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು. ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ನಡೆಸಿ ಬಿಡಲಾಗುತ್ತಿತ್ತು. ಇದರಿಂದ ಅನೇಕ ಪ್ರವಾಸಿಗರಿಗೆ ಕಿರಿಕಿರಿಯಾಯಿತು.

ಉಭಯ ನಾಯಕರ ಸುತ್ತ ಪೊಲೀಸರೇ ಮುತ್ತಿಕೊಂಡಿದ್ದರು. ‘ಇವರಿಗೇನು ಯಾರಿಂದಲಾದರೂ ಜೀವಭಯ ಇದೆಯೇ’ ಎಂದು ಸ್ಥಳದಲ್ಲಿದ್ದ ವ್ಯಾಪಾರಿಯೊಬ್ಬರು ಕೇಳಿದರು.‌

ಬೆಳಿಗ್ಗೆ 7ರಿಂದ 11ರವರೆಗೂ ಇಡೀ ಬೆಟ್ಟ ಪೊಲೀಸರಿಂದ ತುಂಬಿ ತುಳುಕುತ್ತಿತ್ತು. ಉಭಯ ನಾಯಕರು ದೇಗುಲದಲ್ಲಿ ಇರುವಷ್ಟು ಹೊತ್ತು ಭಕ್ತಾದಿಗಳು ಸಾಲಿನಲ್ಲೇ ನಿಲ್ಲಬೇಕಾಯಿತು. ಅನೇಕ ಭಕ್ತರು ರಾಜಕೀಯ ನಾಯಕರಿಗೂ, ಪೊಲೀಸರಿಗೂ ಹಿಡಿಶಾಪ ಹಾಕಿದರು.

ಪ್ರತಿಕ್ರಿಯಿಸಿ (+)