ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ‘ಕಾರ್ನಿವಾಲ್‌’

Last Updated 20 ಡಿಸೆಂಬರ್ 2019, 14:41 IST
ಅಕ್ಷರ ಗಾತ್ರ

ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುಸ್ವಾಮಿಯ ಜನ್ಮದಿನದ ಆಚರಣೆಯೇ ಕ್ರಿಸ್‌ಮಸ್‌. ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನು ಕೇಳುವಂತವನಾಗಬೇಕು ಎನ್ನುವುದೇ ಈ ಹಬ್ಬದ ಧ್ಯೇಯ. ಕ್ರೈಸ್ತರ ಪಾಲಿಗೆ ಅತ್ಯಂತ ಪ್ರಮುಖಹಬ್ಬವಾಗಿದೆ.

ಕ್ರಿಸ್‌ಮಸ್‌ಗೆ ಆಚರಣೆಯ ಮುಂಚೆ ಕರೋಲ್‌ ಗೀತೆಯನ್ನು ಹಾಡಲಾಗುತ್ತದೆ. ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕರ ಗುಂಪುಗಳು ರಾತ್ರಿ ತಮ್ಮ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕರೋಲ್‌ಗಳನ್ನು (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್‌ಮಸ್‌ ಹಾಡುಗಳು) ಹಾಡುತ್ತಾರೆ. ಅದರ ಮೂಲಕ ಯೇಸು ಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ ಮತ್ತು ಈ ಮನೆಯಲ್ಲಿ ಜೀವಿಸುತ್ತಾನೆ ಎಂದು ಸಾರಿ ಪವಿತ್ರ ಭಾವನೆ ಮೂಡಿಸುತ್ತಾರೆ.

ಲಕ್ಷ್ಮಿಪುರಂನ ಹಾರ್ಡ್ವಿಕ್‌ ಚರ್ಚ್‌, ಹಿನಕಲ್‌ನ ಇನ್ಫೆಂಟ್‌ ಜೀಸಸ್‌ ಚರ್ಚ್‌, ಬೆಂಗಳೂರು–ಮೈಸೂರು ರಸ್ತೆಯ ವೆಸ್ಲಿ ಚರ್ಚ್‌, ಗಾಂಧಿನಗರದ ಸಂತ ಅಣ್ಣಮ್ಮ ಚರ್ಚ್‌, ಬಾರ್ಥಲೋಮಿಯೊ ಚರ್ಚ್‌, ರಾಮಕೃಷ್ಣ ನಗರದಲ್ಲಿರುವ ಏಸು ಕೃಪಾಲಯ, ಸೇಂಟ್‌ ಫಿಲೋಮಿನಾ, ಸೇಂಟ್‌ ಜೋಸೆಫ್‌ ಚರ್ಚ್‌ಗಳು ಸೇರಿದಂತೆ ನಗರದೆಲ್ಲೆಡೆ ಕ್ರಿಶ್ಚಿಯನ್‌ ಸಮುದಾಯದವರ ಕಲರವಕ್ಕೆ ಸಾಕ್ಷಿಯಾಗುತ್ತವೆ.

ಕ್ರಿಸ್‌ಮಸ್‌ ಹಬ್ಬವು ಡಿ.24ರ ಮಧ್ಯರಾತ್ರಿಯಿಂದಲೇ (ಮಂಗಳವಾರ) ಕಾರ್ಯಕ್ರಮಗಳು ಆರಂಭಗೊಳ್ಳುತ್ತದೆ. ಯೇಸುಸ್ವಾಮಿ ಮಧ್ಯರಾತ್ರಿ ಹುಟ್ಟಿದ ಕಾರಣ, ಆ ದಿನದಂದು ಸಾಂಪ್ರದಾಯಿಕ ಕುಟುಂಬಗಳು, ಯುವಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಹಿರಿಯರು, ವಯಸ್ಕರು ಮರುದಿನ (ಡಿ.25) ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುತ್ತಾರೆ.

ರಾತ್ರಿ ಪೂಜೆ ಮತ್ತು ಬೆಳಗ್ಗಿನ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ, ಚರ್ಚ್‌ನ ಒಳ ಆವರಣ ಭರ್ತಿಯಾಗಿರುತ್ತದೆ.

ಇದೇ 21 ಹಾಗೂ 22ರಂದು ಸಂತ ಫಿಲೋಮಿನಾ ಚರ್ಚ್‌ನ ಆವರಣದಲ್ಲಿ ನಡೆಯಲಿರುವ ’ಕ್ರಿಸ್‌ಮಸ್‌ ಕಾರ್ನಿವಲ್‌‘ ಈ ಸಾಲಿನ ವಿಶೇಷತೆ. ಕ್ರಿಸ್ಮಸ್‌ ಹಬ್ಬದಂದು, ಕ್ರೈಸ್ತರು ಸೇರಿ, ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ’ಕ್ರಿಸ್‌ಮಸ್‌ ಕಾರ್ನಿವಲ್‌‘ ಮೂಲಕ ಎಲ್ಲ ಧರ್ಮದವರಿಗೂ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ.

ಕ್ರಿಸ್ಮಸ್‌ ಅಂದಾಕ್ಷಣ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುತ್ತದೆ. ಹಬ್ಬದ ವೇಳೆ, ಇತರರೂ, ಶುಭಾಶಯ ತಿಳಿಸುತ್ತಾರೆ. ಅವರಿಗೂ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ನಿವಲ್‌ ಮೂಲಕ ಈ ಸಲ ವಿಶೇಷವಾಗಿ ಆಯೋಜಿಸಲಾಗಿದೆ. ವಿವಿಧ ಶಾಲಾ ಕಾಲೇಜುಗಳು, ಅನೇಕ ನೃತ್ಯ, ಸಂಗೀತ ತಂಡ, ಕಂಸಾಳೆ, ಮಹಿಳೆಯರ ನಗಾರಿ ತಂಡಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಕಾರ್ನಿವಲ್‌ ಆಚರಣೆ ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ವೇಸಾಮಾನ್ಯ. ಮೈಸೂರು ಪ್ರವಾಸಿಗರ ಕೇಂದ್ರವಾಗಿರುವ ಕಾರಣ, ಅನ್ಯಧರ್ಮೀಯರು ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್‌ ವೀಕ್ಷಣೆ, ಪ್ರಾರ್ಥನೆಗೆ ಬರುತ್ತಾರೆ. ಅಂತಹವರಿಗೂ ಹಬ್ಬದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಕಾರ್ನಿವಲ್‌ನಲ್ಲಿ ಆಟಗಳು, ನಾಟ್ಯ, ನಾಟಕ, ಕೇಕ್‌ ಶಾಪ್ಪಿ, ಆಹಾರ ಮಳಿಗೆಗಳು, ಕ್ಯಾರೋಲ್‌ಗಳು, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

’ಕ್ರೈಸ್ತಧರ್ಮದ ಪ್ರಕಾರ, ಕ್ರಿಸ್‌ಮಸ್‌ ಹಬ್ಬಕ್ಕೆ ಆಧ್ಯಾತ್ಮಿಕವಾಗಿ 40 ದಿನಗಳ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆಧ್ಯಾತ್ಮಿಕ ಸಿದ್ಧತೆ ಜೊತೆಗೆ ಖರೀದಿಗೆ ಅವಕಾಶ, ಸಂತಸ ಹಂಚಿಕೆಗೆ ಅವಕಾಶ ಮಾಡಿಕೊಡಲು ಕಾರ್ನಿವಲ್‌ ಮೂಲಕ ನಿರ್ಧರಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ಮಳಿಗೆ ತೆರೆಯಲಿದ್ದು, ಒಂದೇ ಸೂರಿನಲ್ಲಿ ಎಲ್ಲ ವಸ್ತುಗಳನ್ನು ಒದಗಿಸುವ ಆಲೋಚನೆ ಹೊಂದಿದ್ದೇವೆ.‘ ಎಂದು ಸಂತ ಫಿಲೋಮಿನಾ ಚರ್ಚ್‌ನ ಧರ್ಮಗುರು ರೆವರೆಂಡ್‌ ಫಾದರ್‌ ಸ್ಟಾನೀ ಡಿ ಆಲ್‌ಮೀಡ ತಿಳಿಸಿದರು.

ಕ್ರಿಸ್ತಜಯಂತಿಯಂದು ಎಲ್ಲರಿಗೂ ಬಲಿಪೂಜೆಯಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ಸಿಗುವುದಿಲ್ಲ, ಅಂತಹವರಿಗೂ ಕ್ರಿಸ್ತನ ಸಂದೇಶವನ್ನು ಸಂಗೀತದ ಮೂಲಕ ಎಲ್ಲರನ್ನೂ ತಲುಪುವ ಅವಕಾಶ ಇಲ್ಲಿ ಮಾಡಿಕೊಡಲಾಗುತ್ತದೆ. ಈ ಮೂಲಕವೂ ಸಂಗೀತದಿಂದ ಆಧ್ಯಾತ್ಮಿಕ ಅನುಭೂತಿ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಸ್ವಾಗತಕ್ಕೆ ಸಜ್ಜು ಕ್ರಿಸ್‌ಮಸ್‌ ಸ್ವಾಗತಿಸಲು ನಗರ ಸಜ್ಜು: ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ 15 ಚರ್ಚ್‌ಗಳಿದ್ದು, 15ರಿಂದ 20 ಸಾವಿರ ಕ್ರೈಸ್ತ ಧರ್ಮೀಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಡಿ.24ರಂದು ಮಧ್ಯರಾತ್ರಿ ಕ್ರಿಸ್ತ ಹುಟ್ಟಿದ ಎಂಬ ನಂಬಿಕೆಯಿಂದ ಇಡೀ ರಾತ್ರಿ ಚರ್ಚ್‌, ಮನೆಗಳಲ್ಲಿ ಪ್ರಾರ್ಥನೆ ನಡೆಯುತ್ತದೆ. ಕ್ರಿಸ್ತ ಗೋದಲಿಯಲ್ಲಿ ಜನಿಸಿದ ಎನ್ನುವುದನ್ನು ನೆನಪಿಸಿಕೊಳ್ಳಲು ಹಲವರು ಮನೆ ಮುಂದೆ, ಮನೆಯೊಳಗೆ ಗೋದಲಿ ನಿರ್ಮಾಣ ಮಾಡುತ್ತಾರೆ. ಅದರೊಳಗೆ ಕುರಿ ಮರಿಗಳ ಆಟಿಕೆಗಳನ್ನು ಇಟ್ಟು, ದೀಪಾಲಂಕಾರ ಮಾಡುವುದನ್ನು ಕಾಣಬಹುದು, ಬಹುತೇಕ ಕ್ರೈಸ್ತ ಧರ್ಮೀಯರ ಮನೆಗಳಲ್ಲಿ ಹಬ್ಬದ ತಯಾರಿಯೂ ಮುಕ್ತಾಯಗೊಂಡಿದೆ.M

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT