ಶುಕ್ರವಾರ, ಜೂಲೈ 3, 2020
21 °C

 ಮೈಸೂರು | ಪರಸ್ಪರ ಧೈರ್ಯ ಹೇಳಿಕೊಂಡೆವು: ಕೋವಿಡ್‌ನಿಂದ ಗುಣಮುಖರಾದ ದಂಪತಿ

ಡಿ.ಬಿ. ನಾಗರಾಜ Updated:

ಅಕ್ಷರ ಗಾತ್ರ : | |

ಮೈಸೂರು: ‘ಪತಿ ಕೋವಿಡ್–19 ಪೀಡಿತರಾದರು. ಬೆನ್ನಿಗೆ ನಿಂತೆವು. ವಾರದೊಳಗೆ ನನಗೂ ಬಾಧಿಸಿತು. ನಮ್ಮ ಕುಟುಂಬವೇ ಕಂಗಾಲಾಯ್ತು. ಮಕ್ಕಳು ಆತಂಕಕ್ಕೊಳಗಾದರು. ಮನಸ್ಸಲ್ಲಿ ಭೀತಿ ಇದ್ದರೂ, ಧೈರ್ಯವಾಗಿದ್ದೆ. ಈ ಆತ್ಮವಿಶ್ವಾಸವೇ ನಮ್ಮ ಆರೋಗ್ಯ ಚೇತರಿಕೆಗೆ ಪೂರಕವಾಯ್ತು...’

ಕೋವಿಡ್‌ನಿಂದ ಗುಣಮುಖರಾದ ಗೃಹಿಣಿಯೊಬ್ಬರ ಮನದಾಳದ ಮಾತಿದು.

‘ಜಗತ್ತೇ ತಲ್ಲಣಿಸುತ್ತಿರುವ ಮಾರಕ ರೋಗಕ್ಕೆ ಪತಿ ಪೀಡಿತರಾಗಿದ್ದಾರೆ ಎಂಬ ಸುದ್ದಿ ತಿಳಿದೊಡನೆ ಬರಸಿಡಿಲು ಬಡಿದಂತಾಯ್ತು. ಮಾತೇ ಬರಲಿಲ್ಲ. ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡೆ. ಮನೆಯವರಿಗೆ ಧೈರ್ಯ ತುಂಬಿದೆ. ನಾನು ಪ್ರತ್ಯೇಕ ವಾಸ ಆರಂಭಿಸಿದೆ’ ಎಂದು ಹೇಳಿದರು.

‘ಆಸ್ಪತ್ರೆಯಲ್ಲಿದ್ದ ಪತಿಗೆ ಮನೆಯ ಲ್ಲಿದ್ದೇ ನಿತ್ಯವೂ ಮಾನಸಿಕ ಬಲ ತುಂಬು ತ್ತಿದ್ದೆ. ಅವರು ಆಸ್ಪತ್ರೆಗೆ ದಾಖಲಾಗಿ ವಾರವಾಗುವುದರೊಳಗೆ ನಾನೂ ಕೋವಿಡ್ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ನಾವು ಪರಸ್ಪರ ಧೈರ್ಯ ಹೇಳಿಕೊಂಡಿ ದ್ದೆವು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಲವರಲ್ಲಿ ರೋಗದ ಯಾವುದೇ ಲಕ್ಷಣ ಇರಲಿಲ್ಲ. ಇದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ದೂಡಿತ್ತು’ ಎಂದರು.

‘ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಸಕಾಲಕ್ಕೆ ಚಿಕಿತ್ಸೆ, ಊಟ ಕೊಟ್ಟು ಆರೈಕೆ ಮಾಡಿದರು. ಕುಗ್ಗಿದ್ದ ಮಾನಸಿಕ ಬಲವನ್ನು ಹೆಚ್ಚಿಸಿದರು. ಈ ಹೊತ್ತಿಗೆ ಕುಟುಂಬದವರು, ಒಡನಾಡಿಗಳ ಹಾರೈಕೆ ನಮ್ಮ ಮನೋಬಲ ಹೆಚ್ಚಿಸಿತು. ದಿನದಿಂದ ದಿನಕ್ಕೆ ಚೇತರಿಸಿಕೊಂಡು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು ಗಡೆಗೊಂಡೆವು’ ಎಂದು ಹೇಳಿದರು.

‘ನಾವು ಆಸ್ಪತ್ರೆಯಲ್ಲಿದ್ದ ವೇಳೆ ಮನೆಯ ಯೋಗಕ್ಷೇಮವನ್ನು ನೆರೆ ಮನೆಯವರು, ನಮ್ಮ ಕುಟುಂಬದ ಆಪ್ತರು ನೋಡಿಕೊಳ್ಳುತ್ತಿದ್ದರು. ನಾವಿರುವ ಪ್ರದೇಶದಲ್ಲಿ ಭೀತಿ ಹೆಚ್ಚಿದ್ದರೂ, ನಮ್ಮ ಜನ ಪ್ರೀತಿ ತೋರಿದರು. ಯಾವಾಗ ಬೇಕಾದರೂ ನೆರವು ಕೇಳಿ ಎಂದು ಹೇಳುವ ಜತೆಗೆ, ನಮಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಿದರು. ಅಧಿಕಾರಿ ವರ್ಗವೂ ನಮ್ಮ ಕುಟುಂಬದ ಕಾಳಜಿ ವಹಿಸಿತ್ತು. ಈ ಸಹಕಾರವನ್ನು ಎಂದೆಂದಿಗೂ ಮರೆಯಲಾಗದು’ ಎಂದು ಅವರು ಸ್ಮರಿಸಿಕೊಂಡರು.

‘ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ ಬಳಿಕವೂ ಎಲ್ಲರ ಪ್ರೀತಿ ಹಿಂದಿನಂತೆಯೇ ಇದೆ. ಇದು ನಮ್ಮ ಮಾನಸಿಕ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು