ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನೋದೈಹಿಕ ವಿಕಾಸದ ಮೇಲೆ ಕೋವಿಡ್‌ ನೆರಳು: ತೂಗುಯ್ಯಾಲೆಯಲ್ಲಿ ಮಕ್ಕಳು

Last Updated 3 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ಮೈಸೂರು: ಮಕ್ಕಳು, ಶಾಲೆಯ ಮುಖ ನೋಡದೆ ಅರ್ಧ ವರ್ಷವೇ ಕಳೆದಿದೆ. ಈ ಸಮಯದಲ್ಲಿ ಅವರ ಊಟ, ಆಟ, ಪಾಠ, ನಿದ್ದೆಯ ಕ್ರಮದಲ್ಲಿಯೂ ವ್ಯತ್ಯಾಸಗಳಾಗಿವೆ. ಕೋವಿಡ್ ಸಂಕಷ್ಟದಿಂದಾಗಿ, ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಸದಸ್ಯರ ಆರೋಗ್ಯದಲ್ಲಾದ ಬದಲಾವಣೆ, ಸ್ನೇಹಿತರು ಮತ್ತು ಸಂಬಂಧಿಗಳಿಂದ ಕಾಯ್ದುಕೊಳ್ಳಬೇಕಾಗಿರುವ ಅಂತರ, ಕೆಲವೊಮ್ಮೆ ಹೆತ್ತವರಿಂದಲೇ ದೂರವಿರಬೇಕಾದ ಪರಿಸ್ಥಿತಿ ಅವರ ಮನೋದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ.

ಮನೆಯಿಂದ ಹೊರಬರಲಾಗದ ಈ ಸ್ಥಿತಿಯಲ್ಲಿ ಅವರಿಗೆ ಶಾಲೆ ಇಲ್ಲ; ಆಟದ ಸಮಯವಿಲ್ಲ. ಹೊಸ್ತಿಲಾಚೆ ನಡೆಯುವ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಲು ಆಗದಂತಹ ಈ ಸ್ಥಿತಿಯು ಅವರನ್ನು ಕಟ್ಟಿಹಾಕಿದಂತೆ ಮಾಡಿದೆ. ಹೀಗಾಗಿ ಬಹುಪಾಲು ಸಮಯವನ್ನು ಆನ್‌ಸ್ಕ್ರೀನ್‌ನಲ್ಲಿ ಕಳೆಯುತ್ತಿದ್ದಾರೆ. ಅದು ಟಿ.ವಿ ನೋಡುವುದಾಗಿರಬಹುದು, ಆನ್‌ಲೈನ್‌ ತರಗತಿ ಆಗಿರಬಹುದು, ವಿಡಿಯೊ ಗೇಮ್ ಆಗಿರಬಹುದು. ಇದೇ ಸ್ಥಿತಿ ಮುಂದುವರಿದಲ್ಲಿ, ಅವರ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಶಾಶ್ವತ ಹಾಗೂ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಎಚ್ಚರಿಸುತ್ತಾರೆ ಶಿಕ್ಷಣ ತಜ್ಞರು, ಮನೋವೈದ್ಯರು ಹಾಗೂ ನೇತ್ರತಜ್ಞರು.

ಡಾ.ಬಿ.ಎನ್‌. ರವೀಶ್

ಶಾಲೆ ಆರಂಭಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸರ್ಕಾರವಿದ್ದರೆ, ಶಾಲೆ ಆರಂಭವಾದರೂ ಕಳುಹಿಸಬೇಕೋ ಬೇಡವೋ ಎಂಬ ತುಮುಲ ಪೋಷಕರದ್ದು. ಈ ನಡುವೆ ಆನ್‌ಲೈನ್‌ ಪಾಠಗಳಲ್ಲಿ ಮುಳುಗಿರುವ ಮಕ್ಕಳ ಭಾವನೆಯನ್ನು, ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವೇ ತುರ್ತು ಅಗತ್ಯ ಎನ್ನುತ್ತಾರೆ ಮನೋವೈದ್ಯ ಡಾ.ಬಿ.ಎನ್‌. ರವೀಶ್‌.

ವರ್ತನೆಯಲ್ಲಿ ಬದಲಾವಣೆ:ಒಂದೆಡೆ ಕುಳಿತುಕೊಳ್ಳಲು ಆಗದ, ಎದುರು ಮಾತನಾಡುವ, ಕಿರುಚುವ, ಒಂಟಿಯಾಗಿ ತಮ್ಮಷ್ಟಕ್ಕೆ ತಾವಿರಬೇಕು ಎನ್ನುವಂಥ ವರ್ತನೆಯಲ್ಲಿನ ಬದಲಾವಣೆಗಳನ್ನು ಅವರು ಮಕ್ಕಳಲ್ಲಿ ಇತ್ತೀಚೆಗೆ ಗುರುತಿಸಿದ್ದಾರೆ.

ಶಾಲಾ ವಾತಾವರಣಕ್ಕಿಂತ ಭಿನ್ನವಾದ ತರಗತಿಯಲ್ಲಿ ಏಕಾಗ್ರತೆ ಮತ್ತು ಸ್ಫೂರ್ತಿಯ ಕೊರತೆ ಕಾಡುತ್ತಿದೆ. ಇದರೊಂದಿಗೆ ತಾಂತ್ರಿಕ ಸಹಕಾರ ಸಿಗದೇ (ಫೋನ್‌/ಲ್ಯಾಪ್‌ಟಾಪ್‌/ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌) ಮನಸ್ಸಿಗೆ ಕಿರಿಕಿರಿ, ಶಿಕ್ಷಕರು ಹೇಳುವ ಪಾಠ ಕೇಳಿಸಿಕೊಳ್ಳುವಲ್ಲಿ, ಪ್ರತಿಕ್ರಿಯಿಸುವಲ್ಲಿ ಆಗುವ ಸಣ್ಣ ಪುಟ್ಟ ಅಡೆತಡೆಗಳಿಗೂ ಮಕ್ಕಳು ಬಲುಬೇಗ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.

ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ಪಠ್ಯಕ್ರಮದ ಪಾಠಕ್ಕೇ ಜೋತು ಬೀಳಬೇಕಿಲ್ಲ. ಮಕ್ಕಳನ್ನು ಅಂಕಗಳ ಸ್ಪರ್ಧೆಗೆ ಅಣಿ ಮಾಡುವ ಅಗತ್ಯವಿಲ್ಲ. ಸಹಬಾಳ್ವೆ–ಹೊಂದಾಣಿಕೆಯಂತಹ ಸಾಮಾಜಿಕ ಬೆಳವಣಿಗೆಗೆ ಅಗತ್ಯವಾಗಿರುವ ಶಿಕ್ಷಣ ಬೇಕು. ಬದುಕುವ ಕಲೆಯನ್ನು ಹೇಳಿಕೊಡುವ, ಕಷ್ಟಗಳಿಗೆ ಮುಖಾಮುಖಿಯಾಗುವ ಎದೆಗಾರಿಕೆಯನ್ನು ಹೇಳಿಕೊಡುವ ಪಾಠ ಅವರಿಗೆ ಬೇಕು ಎನ್ನುತ್ತಾರೆ ಡಾ. ರವೀಶ್.

ಇಲ್ಲದೇ ಹೋದಲ್ಲಿ, ಸ್ಪರ್ಧೆಗಷ್ಟೇ ಅಣಿಯಾಗುತ್ತ ವೈಯಕ್ತಿಕ ಸಾಧನೆಯೇ ಮುಖ್ಯವಾಗಿ, ಮುಂದೊಂದು ದಿನ ಸಂಸ್ಥೆಯೊಂದರ ತಂಡದ /ಸಮಾಜದ ಭಾಗವಾಗಿ ಕೆಲಸ ಮಾಡುವಲ್ಲಿ ಅವರು ಸೋಲುತ್ತಾರೆ’ ಎಂದೂ ಎಚ್ಚರಿಸುತ್ತಾರೆ.

ಆನ್‌ಲೈನ್‌ ಶಿಕ್ಷಣವು ಕ್ಲಾಸ್‌ರೂಂ ಶಿಕ್ಷಣಕ್ಕೆ ಪರ್ಯಾಯ ಅಲ್ಲ. ಆದರೆ, ಸದ್ಯಕ್ಕೆ ಮಕ್ಕಳನ್ನು ಚಟುವಟಿಕೆಯಿಂದ ಇಡಲು ಆಯ್ದುಕೊಂಡ ಅನಿವಾರ್ಯ ಮಾರ್ಗ ಎಂಬುದನ್ನು ಶಿಕ್ಷಣ ತಜ್ಞರು ಒಪ್ಪುತ್ತಾರೆ. ಅದೇ ವೇಳೆಗೆ, ಮೊಬೈಲ್/ ಇಂಟರ್‌ನೆಟ್‌ ಬಳಕೆಗೆ ನಿರ್ಬಂಧ ಇಲ್ಲದಿರುವ ಅಥವಾ ನಿಗಾ ವಹಿಸಲು ಸಾಧ್ಯವಾಗದ ಸ್ಥಿತಿಯು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎಂಬುದನ್ನೂ ಹೇಳುತ್ತಾರೆ. ಹೀಗಾಗಿಯೇ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಂಡು, ಸಾಧ್ಯವಾದಷ್ಟು ಬೇಗ ಶಾಲೆ ಆರಂಭಿಸಿದರೆ ಒಳ್ಳೆಯದು ಎಂಬುದು ಅವರ ಅಭಿಪ್ರಾಯ.

ಶಿವಾನಂದ ಸಿಂಧನಕೇರಾ

ಶಾಲಾ ಕೊಠಡಿಗಳಿಂದ ಹೊರತಾದ ಹೊಸ ಕಲಿಕಾ ವ್ಯವಸ್ಥೆಯಲ್ಲಿ ಹೆಚ್ಚು ಗೊಂದಲಕ್ಕೀಡಾದವರು ಖಾಸಗಿ ಶಾಲೆಯ ಮಕ್ಕಳು ಹಾಗೂ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳುಎನ್ನುತ್ತಾರೆ ಶಿಕ್ಷಣ ತಜ್ಞ, ಮೈಸೂರಿನ ಶಿವಾನಂದ ಸಿಂಧನಕೇರಾ. ಹುಡುಗಿಯರಿಗಿಂತ ಹುಡುಗರು ಹಾಗೂ ಪೋಷಕರಲ್ಲಿ ತಾಯಂದಿರು ಹೆಚ್ಚು ಗಲಿಬಿಲಿ ಮತ್ತು ಒತ್ತಡಕ್ಕೆ ಒಳಗಾಗಿದ್ದಾರೆ. ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಬಡ ಮಕ್ಕಳಿಗೆ ಇತ್ತ ‘ವಿದ್ಯಾಗಮ’ವೂ ಇಲ್ಲದೇ, ಅತ್ತ ಫೋನ್‌ ಕೊಳ್ಳುವ ಸಾಮರ್ಥ್ಯವಿಲ್ಲದೇ ಆನ್‌ಲೈನ್‌ ಪಾಠದಿಂದಲೂ ವಂಚಿತರಾಗಬೇಕಾಗಿದೆ. ಆ ಮಕ್ಕಳ ಪೋಷಕರ ಅಸಹಾಯಕತೆ, ಹತಾಶೆ ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.

ಸರ್ಕಾರಿ ಶಾಲೆಯ ಮಕ್ಕಳು ‘ವಿದ್ಯಾಗಮ’ ಹಾಗೂ ವಿಡಿಯೊ ಮೂಲಕ ಪಾಠ ಕಲಿಯುತ್ತಿದ್ದು ಇವರಲ್ಲಿ ಒತ್ತಡ ಕಡಿಮೆ. ಬಹುತೇಕ ಖಾಸಗಿ ಶಾಲೆಯ ಮಕ್ಕಳು ಆನ್‌ಲೈನ್‌ ಮೂಲಕವೇ ತರಗತಿಗಳಿಗೆ ಹಾಜರಾಗುತ್ತಿದ್ದು, ತಾಂತ್ರಿಕ ತೊಂದರೆಯಿಂದ ಪಾಠಗಳನ್ನು ತಪ್ಪಿಸಿಕೊಂಡಲ್ಲಿ ಒತ್ತಡಕ್ಕೊಳಗಾಗುತ್ತಾರೆ. ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಏಕಕಾಲಕ್ಕೆ ಪಿಡಿಎಫ್‌ ರೂಪದಲ್ಲಿ ಬಂದು ಬೀಳುವ ವಿವಿಧ ವಿಷಯಗಳ ನೋಟ್ಸ್‌ಗಳು ಅವರನ್ನು ಹೈರಾಣು ಮಾಡುತ್ತಿವೆ. ದುಡಿಯುವ ದಂಪತಿಯ ಮಕ್ಕಳು, ಸೋದರ–ಸೋದರಿ ಇಲ್ಲದೇ ಇರುವ ಮಕ್ಕಳ ಮಾನಸಿಕ ತುಮುಲ ಮತ್ತೊಂದು ಬಗೆಯದು. ಇನ್ನು, ಪಿಯುದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿಕೊಂಡರೆ, ಆನ್‌ಲೈನ್ ಪಾಠ ಅವಲಂಬಿಸಿದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚು ಎನ್ನುತ್ತಾರೆ ಅವರು.

ಮನೆಯಲ್ಲೇ ಹೆಚ್ಚು ಸಮಯ ಕಳೆಯುವಹೆಣ್ಣುಮಕ್ಕಳಿಗಿಂತ, ಗಂಡುಮಕ್ಕಳಲ್ಲಿ ಹೆಚ್ಚು ಒತ್ತಡದ ಸಮಸ್ಯೆ ಕಾಣಿಸಿಕೊಂಡಿದ್ದನ್ನು ಗುರುತಿಸುತ್ತಾರೆ ಮನೋವೈದ್ಯರು.

ಒತ್ತಡ ಯಾರಲ್ಲಿ ಹೆಚ್ಚು?

* ಖಾಸಗಿ ಶಾಲೆಯ ಮಕ್ಕಳಲ್ಲಿ

* ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ

* ಹುಡುಗಿಯರಿಗಿಂತ ಹುಡುಗರಲ್ಲಿ ಹೆಚ್ಚು

* ಪೋಷಕರಲ್ಲಿ ತಾಯಿಯ ಮೇಲೇ ಹೆಚ್ಚಿನ ಹೊರೆ

* ಒಂಟಿಯಾಗಿ ಬೆಳೆಯುತ್ತಿರುವ ಮಕ್ಕಳಲ್ಲೂ (ಸಿಂಗಲ್‌ ಚೈಲ್ಡ್) ಒತ್ತಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT