ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಹತ್ತಿ ಬಿತ್ತನೆ: ಅರ್ಧದಷ್ಟು ಇಳಿಕೆ

ಮಳೆ ಕೊರತೆ--– ಹತ್ತಿಯಿಂದ ವಿಮುಖರಾದ ರೈತರು l ಮುಸುಕಿನ ಜೋಳ, ಸೂರ್ಯಕಾಂತಿ, ರಾಗಿ ಬಿತ್ತನೆ ಬಿರುಸು
Last Updated 9 ಜೂನ್ 2021, 1:49 IST
ಅಕ್ಷರ ಗಾತ್ರ

ಮೈಸೂರು: ಈ ವರ್ಷ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹತ್ತಿ ಬಿತ್ತನೆ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಅರ್ಧದಷ್ಟು ರೈತರು ಈ ಬೆಳೆಯನ್ನು ಕೈಬಿಟ್ಟು ಇತರೆ ಬೆಳೆಗಳ ಬಿತ್ತನೆಯತ್ತ ಚಿತ್ತ ಹರಿಸಿದ್ದಾರೆ.

ಒಟ್ಟು 3.95 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಇದರಲ್ಲಿ 46,780 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹತ್ತಿ ಬಿತ್ತನೆಯ ಗುರಿಯನ್ನು ನಿಗದಿಪಡಿಸಿತ್ತು. ಆದರೆ, ಈಗ ಕೇವಲ 25,430 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಹತ್ತಿ ಬಿತ್ತನೆಯಾಗಿದೆ. ಶೇ 54ರಷ್ಟು ಮಾತ್ರ ಗುರಿ ಈಡೇರಿದೆ.

ಈ ಬಾರಿ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯುವ ನಿರೀಕ್ಷೆಯಲ್ಲಿ ಹತ್ತಿ ಬಿತ್ತನೆಗೆ ಬದಲಾಗಿ ರೈತರು ಮುಸುಕಿನ ಜೋಳ ಮತ್ತು ರಾಗಿ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದಾರೆ.

ಏಕೆ ಹೀಗೆ?: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದೆ. ಸಾಮಾನ್ಯವಾಗಿ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಬೀಳುವ ಮಳೆಯನ್ನಾಧರಿಸಿಯೇ ಮೈಸೂರು ಜಿಲ್ಲೆಯಲ್ಲಿ ಹತ್ತಿಯನ್ನು ಬಿತ್ತನೆ ಮಾಡಲಾಗುತ್ತಿದೆ. ವಿಶೇಷವಾಗಿ ಭರಣಿ ಮಳೆಯನ್ನೇ ಇದಕ್ಕಾಗಿ ರೈತರು ಬಹುವಾಗಿ ನೆಚ್ಚಿಕೊಂಡಿದ್ದಾರೆ. ಒಂದು ವೇಳೆ ಈ ಮಳೆಯಾಗದಿದ್ದರೆ ಹತ್ತಿ ಬಿತ್ತನೆ ಮಾಡುವುದಿಲ್ಲ. ತಡವಾಗಿ ಬಿತ್ತನೆ ಮಾಡಿದರೆ ಕೀಟಬಾಧೆ ಉಂಟಾಗುತ್ತದೆ, ಸಮರ್ಪಕವಾದ ಇಳುವರಿ ಬರುವುದಿಲ್ಲ ಎಂಬ ಕಾರಣಕ್ಕೆ ರೈತರು ಬಿತ್ತನೆ ಮಾಡುವುದಿಲ್ಲ.

ಕಳೆದೆರಡು ತಿಂಗಳುಗಳಿಂದ ಮಳೆ ಕೊರತೆ: ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಶೇ 30ರಿಂದ 40ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ಉಂಟಾಗಿದೆ. ಏಪ್ರಿಲ್‌ನಲ್ಲಿ ಬೀಳಬೇಕಿದ್ದ 61.9 ಮಿಲಿಮೀಟರ್‌ಗೆ ಬಿದ್ದಿದ್ದು ಕೇವಲ 35.9 ಮಿ.ಮೀ ಮಾತ್ರ. ಇದೇ ರೀತಿ ಮೇ ತಿಂಗಳಿನಲ್ಲಿ 128 ಮಿ.ಮೀ ಮಳೆಯಾಗಬೇಕಿತ್ತು. ಆಗಿರುವುದು 72.5 ಮಿ.ಮೀ ಮಾತ್ರ. ಈ ಮಳೆಯೂ ಪ್ರಾದೇಶಿಕವಾಗಿ ಸಮ
ನಾಗಿ ಹಂಚಿಕೆಯಾಗಿಲ್ಲ. ಇದರಿಂದ ಸಹಜವಾಗಿಯೇ ಹತ್ತಿ ಬಿತ್ತನೆಗೆ ಹಿನ್ನೆಡೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ಬಿತ್ತನೆ ಮಾಡುವ ಬೆಳೆಗಳು: ಈಗ ಭತ್ತ, ರಾಗಿ, ಸೂರ್ಯಕಾಂತಿ, ಶಕ್ತಿಮಾನ್ ಮುಸುಕಿನ ಜೋಳ, ತೃಣಧಾನ್ಯಗಳನ್ನು ಬಿತ್ತನೆ ಮಾಡಬಹುದು ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಪ್ರಕಟಣೆ ತಿಳಿಸಿದೆ.

ಜಯ, ಬಿ.ಆರ್.2655, ಮಂಡ್ಯ ವಿಜಯ ಪ್ರಕಾಶ್ ಐಇಟಿ 8116 ಭತ್ತದ ತಳಿಗಳನ್ನು, ಇಂಡಾಫ್ 8, ಎಂ.ಆರ್.1, ಎಲ್.ಎಸ್.5, ಎಂ.ಎಲ್.365ಕೆ ಎಂ.ಆರ್.301, ಎಂ.ಎಲ್.365 ತಳಿಯ ರಾಗಿಯನ್ನು, ಮಾರ್ಡಿನ್, ಹೈಬ್ರಿಡ್ ತಳಿ–ಕೆಬಿಎಸ್‌ಎಚ್‌ 1 ತಳಿಯ ಸೂರ್ಯಕಾಂತಿಯನ್ನು ಬಿತ್ತನೆ ಮಾಡಬಹುದು.

ಹೈಬ್ರಿಡ್ ಹೇಮ, ನಿತ್ಯಶ್ರೀ, ಕಾಂಪೋಸಿಟ್ (ಎನ್‌ಎಸಿ) 6004, ಎನ್‌ಎಸಿ 6002 ತಳಿಯ ಮುಸುಕಿನ ಜೋಳ, ತೃಣಧಾನ್ಯಗಳ ಪೈಕಿ ಶಕ್ತಿಮಾನ್ ಸಜ್ಜೆ, ಡಬ್ಲೂಸಿಸಿ 75, ಕೆಎಚ್‌ವಿಬಿ 910 ತಳಿಯನ್ನು, ಆರ್‌ಎಸ್ 118, ಕೆ 221–1, ಪಿಎಸ್ –4, ಎಸ್‌ಐಎ 326 ತಳಿಯ ನವಣೆಯನ್ನು, ಸಿ.ಒ62175, ಸಿ.ಒ 419, ಸಿ.ಒ 7804, ಸಿ.ಒ86032, ಸಿಒಸಿ 671 ತಳಿಯ ಕಬ್ಬನ್ನು ಬಿತ್ತನೆ ಮಾಡಬಹುದು. ಮಾಹಿತಿಗೆ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ.ಪ್ರಕಾಶ್ ಅವರನ್ನು ದೂ: 0821–2591267 ಸಂಪರ್ಕಿಸಬಹುದು ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT