ಗುರುವಾರ , ಮೇ 6, 2021
23 °C
ಜಿಲ್ಲೆಯಾದ್ಯಂತ 5 ಲಕ್ಷ ಡೋಸ್‌ ನೀಡಿಕೆ: ಮತ್ತೆ 5 ಲಕ್ಷ ಡೋಸ್‌ ಪೂರೈಸುವಂತೆ ಸರ್ಕಾರಕ್ಕೆ ಮನವಿ

ಕೋವಿಡ್‌ ಲಸಿಕೆ: ಮೈಸೂರು ಮುಂಚೂಣಿ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌–19 ಲಸಿಕೆ ಹಾಕುವಲ್ಲಿ ಮೈಸೂರು ಜಿಲ್ಲೆ ಮುಂಚೂಣಿಯಲ್ಲಿದೆ.

ಸಂಖ್ಯೆಯನ್ನಷ್ಟೇ ಪರಿಗಣಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಹೆಚ್ಚಿನ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಆದರೆ, ಗುರಿ ಸಾಧನೆಯನ್ನಷ್ಟೇ ಗಮನಿಸಿದರೆ ಮೈಸೂರು ಜಿಲ್ಲೆಯು ಮುಂಚೂಣಿಯಲ್ಲಿ ನಿಲ್ಲಲಿದೆ.

ಜಿಲ್ಲಾ ಆರೋಗ್ಯ ಇಲಾಖೆಯ ಅಂದಾಜಿನಂತೆ ಮೈಸೂರು ಜಿಲ್ಲೆಯಾದ್ಯಂತ 45 ವರ್ಷ ಮೇಲ್ಪಟ್ಟವರ ಸಂಖ್ಯೆ 8.48 ಲಕ್ಷ ಇದೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಏ.18ರ ವೇಳೆಗೆ 5 ಲಕ್ಷಕ್ಕೂ ಹೆಚ್ಚು ಕೋವಿಡ್‌–19ನ ಮೊದಲ ಹಾಗೂ ಎರಡನೇ ಲಸಿಕೆಯನ್ನು ಜನರಿಗೆ ನೀಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ಖಚಿತ ಪಡಿಸಿವೆ.

ಮಾರ್ಚ್‌ ತಿಂಗಳಿನಲ್ಲಿ 1,07,421 ಜನರಿಗೆ ಕೋವಿಡ್ ಲಸಿಕೆ ಹಾಕಿದ್ದರೆ, ಏ.1ರಿಂದ 17ರವರೆಗೂ 2,92,745 ಲಸಿಕೆಯನ್ನು ಹಾಕಲಾಗಿದೆ. ಇದಕ್ಕೂ ಮುನ್ನ 1 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಪಡೆದವರ ಸಂಖ್ಯೆಯಲ್ಲಿ ಮೈಸೂರು ನಗರಿಗರು ಮುಂಚೂಣಿಯಲ್ಲಿದ್ದರೆ, ಎಚ್‌.ಡಿ.ಕೋಟೆ ತಾಲ್ಲೂಕಿನ ಜನರು ಕೊನೆಯ ಸ್ಥಾನದಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತದ ಅಂಕಿ–ಅಂಶ ತಿಳಿಸಿದೆ.

‘ಒಟ್ಟು ಗುರಿಯಲ್ಲಿ ಶೇ 50ರಷ್ಟನ್ನು ಸಾಧಿಸಿದ್ದೇವೆ. ದಿನದ ಗುರಿ ಶೇ 100ರಷ್ಟು ದಾಟುತ್ತಿದೆ. ಜಿಲ್ಲಾಡಳಿತದ ಸಾರಥ್ಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಕಂದಾಯ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳು ಸಾಥ್‌ ನೀಡುತ್ತಿರುವುದರಿಂದ ಹಾಗೂ ರಾಜ್ಯ ಸರ್ಕಾರ ಸಕಾಲಕ್ಕೆ ಲಸಿಕೆ ಪೂರೈಸಿದ್ದರಿಂದ ಇದು ಸಾಧ್ಯವಾಗಿದೆ’ ಎಂದು ಜಿಲ್ಲಾ ಕೋವಿಡ್‌ ಲಸಿಕಾಧಿಕಾರಿ ಎಲ್‌.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಯಾವುದೇ ಕಾರಣಕ್ಕೂ ಶೇ 100ರ ಗುರಿ ತಲುಪುವುದು ಕಷ್ಟಸಾಧ್ಯ. ಶೇ 80ರಷ್ಟು ದಾಟಿದರೆ ಯಶಸ್ವಿಯಾದಂತೆ. ಇದನ್ನು ಹೀಗೆಯೇ ಮುಂದುವರಿಸಲು ಮತ್ತೆ ಐದು ಲಕ್ಷ ಡೋಸ್‌ ಲಸಿಕೆ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಲಸಿಕೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಏಪ್ರಿಲ್‌ನಲ್ಲಿ ಲಸಿಕಾ ಅಭಿಯಾನ ಶರವೇಗ ಪಡೆದಿದೆ. ನಮ್ಮ ಬೇಡಿಕೆಗೆ ತಕ್ಕಷ್ಟು ಲಸಿಕೆಗಳು ಸಕಾಲಕ್ಕೆ ಪೂರೈಕೆಯಾಗಬೇಕಷ್ಟೇ. ಏ.13ರ ಮಂಗಳವಾರ ಯುಗಾದಿ ಹಬ್ಬ. ಹಬ್ಬದ ದಿನದಂದು ಸಹ ಜಿಲ್ಲೆಯ ವಿವಿಧೆಡೆ 1,865 ಲಸಿಕೆ ಹಾಕಲಾಗಿದೆ’ ಎಂದು ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಅಭಿಯಾನ ಯಶಸ್ವಿಗಾಗಿ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಜನರನ್ನು ಲಸಿಕಾ ಕೇಂದ್ರಗಳಿಗೆ ಕರೆ ತರುತ್ತಿದ್ದಾರೆ. ಇದು ಸಹ ಯಶಸ್ವಿಗೆ ಪ್ರಮುಖ ಕಾರಣವಾಗಿದೆ’ ಎಂದು ಲಸಿಕಾಧಿಕಾರಿ ಎಲ್‌.ರವಿ ತಿಳಿಸಿದರು.

ಎನ್‌.ಆರ್‌. ಕ್ಷೇತ್ರದಲ್ಲಿ ಮಾತ್ರ ಕುಂಠಿತ
ಮೈಸೂರು ನಗರ ವ್ಯಾಪ್ತಿಯಲ್ಲಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 45 ವರ್ಷ ಮೇಲ್ಪಟ್ಟವರು ಅಂದಾಜು 70 ಸಾವಿರದಿಂದ 80 ಸಾವಿರ ಜನರಿದ್ದಾರೆ.

ಈ ಎಲ್ಲರಿಗೂ ಲಸಿಕೆ ಹಾಕಲಿಕ್ಕಾಗಿ ಜಿಲ್ಲಾಡಳಿತ ಸ್ಥಳೀಯ ಮುಸ್ಲಿಂ ಮುಖಂಡರು, ಧಾರ್ಮಿಕ ನಾಯಕರೊಟ್ಟಿಗೆ ಎರಡ್ಮೂರು ಬಾರಿ ಸಭೆ ನಡೆಸಿದೆ. ಜಾಗೃತಿ ಮೂಡಿಸಿದೆ. ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರು, ಉಪ ಮೇಯರ್‌ ಸ್ವತಃ ಸಭೆಯಲ್ಲಿ ಭಾಗಿಯಾಗಿ ಮನವಿ ಮಾಡಿದ್ದಾರೆ. ಲಸಿಕೆ ಬಗ್ಗೆ ತಿಳಿವಳಿಕೆ ಮೂಡಿಸಿದ್ದಾರೆ.

ಶಾಸಕ ತನ್ವೀರ್‌ ಸೇಠ್‌ ಸೇರಿದಂತೆ ಸ್ಥಳೀಯ ಕಾರ್ಪೊರೇಟರ್‌ಗಳು ಸಹ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇಷ್ಟೆಲ್ಲಾ ಕಸರತ್ತು ನಡೆಸಿದರೂ; ಲಸಿಕಾ ಅಭಿಯಾನದ ಪ್ರಗತಿ ಇಲ್ಲಿ ಮಾತ್ರ ನಿರೀಕ್ಷೆಯಂತೆ ಸಾಗುತ್ತಿಲ್ಲ; ಕುಂಠಿತವಿದೆ ಎಂದು ಎಲ್‌.ರವಿ ತಿಳಿಸಿದರು.‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು