ಬುಧವಾರ, ಸೆಪ್ಟೆಂಬರ್ 22, 2021
27 °C
ಮೈಸೂರಿನಲ್ಲಿ ಬಿಸಿಸಿಐ ಪಂದ್ಯಾವಳಿ ಅನುಮಾನ l ಸೆಪ್ಟೆಂಬರ್‌ನಲ್ಲಿ ಕೆಎಸ್‌ಸಿಎ ಲೀಗ್‌ ಪಂದ್ಯ ಸಾಧ್ಯತೆ

ಕ್ರಿಕೆಟ್‌ ಮೈದಾನದಲ್ಲಿ ಇನ್ನು ಹುರುಪು ಶುರು!

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಕ್ರಿಕೆಟ್‌ ಪಂದ್ಯಗಳನ್ನು ಮತ್ತೆ ಆರಂಭಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮೈಸೂರು ವಲಯ ಸಿದ್ಧತೆ ನಡೆಸಿದ್ದು, ಕ್ರಿಕೆಟ್‌ ಪ್ರಿಯರಲ್ಲಿ ಹುರುಪು ಮೂಡಿಸಿದೆ.

ಹಿಂದಿನ ವರ್ಷ ಕೋವಿಡ್‌ನಿಂದಾಗಿ ಎಂಟು ತಿಂಗಳು ಕ್ರಿಕೆಟ್‌ ಪಂದ್ಯ
ಗಳು ನಡೆದಿರಲಿಲ್ಲ. ಮೊದಲನೇ ಅಲೆ ಕಡಿಮೆಯಾದ ಬಳಿಕ, ನವೆಂಬರ್‌ನಲ್ಲಿ ಆರಂಭ ವಾಗಿದ್ದವು. ಈ ವರ್ಷದ ಮಾರ್ಚ್‌ವರೆಗೂ ಹಲವು ಟೂರ್ನಿಗಳು ನಡೆದಿದ್ದವು. ಆ ಹೊತ್ತಿನಲ್ಲಿ ಎರಡನೇ ಅಲೆ ಶುರುವಾದ್ದರಿಂದ ಮತ್ತೆ ತಡೆ ಬಿದ್ದಿತ್ತು.

ಇದೀಗ ಸೀನಿಯರ್‌ ಕ್ರಿಕೆಟ್‌ ಟೂರ್ನಿ ಗಳನ್ನು ಆಯೋಜಿಸಲು ಕೆಎಸ್‌ಸಿಎ ಅನುಮತಿ ನೀಡಿದ್ದು, ‘ಜೂನಿಯರ್‌ (16 ವರ್ಷಕ್ಕಿಂತ ಕೆಳಗಿನವರು) ಕ್ರಿಕೆಟ್‌ ಸದ್ಯಕ್ಕೆ ಬೇಡ’ ಎಂದಿದೆ. ಮೈಸೂರು ವಲಯ
ದಲ್ಲಿ ಆಗಸ್ಟ್‌ 15ರ ಬಳಿಕ ಪಂದ್ಯಗಳನ್ನು ಆಯೋಜಿಸಲು ತಯಾರಿ ನಡೆದಿದೆ.

‘19 ವರ್ಷದೊಳಗಿನವರ (ಅಂಡರ್‌–19) ಅಂತರ ಜಿಲ್ಲಾ ಪಂದ್ಯಗಳ ಮೂಲಕ ಕ್ರಿಕೆಟ್‌ ಚಟುವಟಿಕೆ ಆರಂಭಿಸಲಿದ್ದೇವೆ. ಆ ಬಳಿಕ 19 ವರ್ಷದೊಳಗಿನವರ ಮೈಸೂರು ವಲಯ ತಂಡದ ಆಯ್ಕೆ ನಡೆಯಲಿದೆ. ಈ ತಂಡ ಬೆಂಗಳೂರಿನಲ್ಲಿ ನಡೆಯಲಿರುವ ಅಂತರ ವಲಯ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ’ ಎಂದು ಕೆಎಸ್‌ಸಿಎ ಮೈಸೂರು ವಲಯ ನಿಮಂತ್ರಕ ಎಸ್‌.ಸುಧಾಕರ್ ರೈ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

‘18 ವರ್ಷಕ್ಕಿಂತ ಮೇಲಿನವರು ಕೋವಿಡ್‌ ಲಸಿಕೆಯ ಕನಿಷ್ಠ ಒಂದು ಡೋಸ್‌ ಪಡೆದಿರಬೇಕು. ಅಂಡರ್‌–
19 ತಂಡದಲ್ಲಿ 16, 17 ವರ್ಷ ವಯಸ್ಸಿನವರು ಪಂದ್ಯಕ್ಕೆ ಮುನ್ನ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂಬ ಸೂಚನೆಯನ್ನು ಕೆಎಸ್‌ಸಿಎ ನೀಡಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿ
ಕೊಂಡೇ ಪಂದ್ಯಗಳನ್ನು ನಡೆಸಲಾಗುವುದು’ ಎಂದರು.

ಬಿಸಿಸಿಐ ಪಂದ್ಯ ಅನುಮಾನ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ ಪಂದ್ಯಗಳು ಈ ಬಾರಿ ಮೈಸೂರಿನಲ್ಲಿ ನಡೆಯುವ ಸಾಧ್ಯತೆ ಕಡಿಮೆ.

‘ಕೋವಿಡ್‌ ಕಾರಣ ಬಯೋಬಬಲ್‌ (ಜೀವ ಸುರಕ್ಷಾ) ನಿಯಮದಡಿ ಪಂದ್ಯಗ
ಳನ್ನು ನಡೆಸಬೇಕು. ಮೈಸೂರಿನಂಥ ಸಣ್ಣ ಕೇಂದ್ರಗಳಲ್ಲಿ ಅಂಥ ವ್ಯವಸ್ಥೆಯಡಿ ಪಂದ್ಯದ ಆಯೋಜನೆ ಕಷ್ಟ. ಆದ್ದರಿಂದ ಮೈಸೂರಿಗೆ ಬಿಸಿಸಿಐನ ಯಾವುದೇ ಪಂದ್ಯಗಳು ಲಭಿಸದು’ ಎಂದು ಸುಧಾಕರ್‌ ರೈ ಅಭಿಪ್ರಾಯಪಟ್ಟರು.

ಈ ಹಿಂದಿನ ವರ್ಷಗಳಲ್ಲಿ ಬಿಸಿಸಿಐನ ಅಂಡರ್‌ –19, ಅಂಡರ್‌– 23 ಅಂತರ ರಾಜ್ಯ ಪಂದ್ಯಗಳು ಅಲ್ಲದೆ ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳಿಗೂ ಮೈಸೂರು ಆತಿಥ್ಯ ವಹಿಸಿತ್ತು. ಈ ಬಾರಿ ಬಿಸಿಸಿಐನ ಪಂದ್ಯಗಳು ಬೆಂಗಳೂರಿನಲ್ಲಿ ಮಾತ್ರ ಆಯೋಜನೆಯಾಗಲಿದೆ.

ತಂಡ ಆಯ್ಕೆ; 14 ರಂದು ಟ್ರಯಲ್ಸ್: ಕೆಎಸ್‌ಸಿಎ ಮೈಸೂರು ವಲಯವು 19 ವರ್ಷದೊಳಗಿನವರ ಅಂತರ ಜಿಲ್ಲಾ ಟೂರ್ನಿಗೆ ತಂಡದ ಆಯ್ಕೆಗೆ ಆ.14 ರಂದು ಬೆಳಿಗ್ಗೆ 8.30 ರಿಂದ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಟ್ರಯಲ್ಸ್‌ ಆಯೋಜಿಸಿದೆ. ಆಸಕ್ತರು ಆ.12ರ ಸಂಜೆ 5ರ ಒಳಗಾಗಿ ಹೆಸರು ನೋಂದಾಯಿಸಬಹುದು. 2002ರ ಸೆ.1ರ ಬಳಿಕ ಜನಿಸಿದವರು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಹೊಂದಿದ್ದಾರೆ. 16 ವರ್ಷಕ್ಕಿಂತ ಕೆಳಗಿನವರಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ ದೂ: 0821–2519900 ಸಂಪರ್ಕಿಸಬಹುದು.

ಲೀಗ್‌ ಪಂದ್ಯ; ಅಭಿಪ್ರಾಯ ಸಂಗ್ರಹ: ಕೆಎಸ್‌ಸಿಎ ಲೀಗ್‌ ಪಂದ್ಯಗಳನ್ನು ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ಸೆಪ್ಟೆಂಬರ್‌ನಲ್ಲಿ ಆಯೋಜಿಸಲು ಚಿಂತನೆ ನಡೆದಿದೆ. ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಒಟ್ಟು 40 ಕ್ಲಬ್‌ಗಳು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ. ಈ ಸಂಬಂಧ ಈಗಾಗಲೇ ಕ್ಲಬ್‌ ಕಾರ್ಯದರ್ಶಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು