ಸೋಮವಾರ, ಅಕ್ಟೋಬರ್ 18, 2021
28 °C
700 ಕೆ.ಜಿ ಮರಳಿನ ಮೂಟೆಯನ್ನು ಹೊತ್ತ ಗಜಪಡೆ

1ರಂದು ಮರದ ಅಂಬಾರಿಯ ತಾಲೀಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮರದ ಅಂಬಾರಿಯ ತಾಲೀಮು ಅ. 1ರಂದು ನಡೆಯಲಿದೆ. ಇದಕ್ಕಾಗಿ ಶುಭ ಮುಹೂರ್ತ ನೋಡಲಾಗುತ್ತಿದ್ದು, ಸದ್ಯದಲ್ಲೇ ಸಮಯವನ್ನೂ ನಿಗದಿಪಡಿಸಲಾಗುತ್ತದೆ.

ಗಜಪಡೆಯ ಮೇಲೆ 700 ಕೆ.ಜಿ ತೂಕದ ಮರಳಿನ ಮೂಟೆಯನ್ನು ಹೊರಿಸುವ ತಾಲೀಮು ಭಾನುವಾರ ನಡೆಯಿತು. ಅಭಿಮನ್ಯು ಆನೆ ಈ ಭಾರವನ್ನು ಹೊತ್ತು ಸಾಗಿತು. ನಂತರದ ದಿನಗಳಲ್ಲಿ ಕ್ರಮವಾಗಿ ಧನಂಜಯ ಹಾಗೂ ಗೋಪಾಲಸ್ವಾಮಿ ಆನೆಗಳು ಭಾರ ಹೊತ್ತು ಹೆಜ್ಜೆ ಹಾಕಲಿವೆ. ನಂತರ, ಇದರ ತೂಕವನ್ನು 750ರಿಂದ 800 ಕೆ.ಜಿಗೆ ಹೆಚ್ಚಿಸಲಾಗುತ್ತದೆ.

ಸೆ. 30ರಂದು ಮಾವುತರು, ಕಾವಾಡಿಗಳಿಗಾಗಿ ವೈದ್ಯಕೀಯ ಶಿಬಿರ ಆಯೋಜಿಸಲಾಗುತ್ತದೆ. 2ರಿಂದ 3 ಆಸ್ಪತ್ರೆಗಳು ಶಿಬಿರ ನಡೆಸಲು ಉತ್ಸುಕತೆ ತೋರಿವೆ. ಕಣ್ಣು ತಪಾಸಣೆ, ಇತರೆ ರೋಗಗಳ ತಪಾಸಣೆ ಸೇರಿದಂತೆ ಸಮಗ್ರ ಆರೋಗ್ಯ ತಪಾಸಣೆಯ ಸೌಲಭ್ಯ ದಸರಾ ಮಹೋ‌ತ್ಸವದಲ್ಲಿ ಭಾಗಿಯಾಗುವ ಸುಮಾರು 50ಕ್ಕೂ ಅಧಿಕ ಮಂದಿಗೆ ದೊರೆಯಲಿದೆ.

ಭರದಿಂದ ನಡೆದಿದೆ ಕುಶಾಲತೋಪಿನ ತಾಲೀಮು

ಅರಮನೆಯ ಆವರಣದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ಭರದಿಂದ  ನಡೆದಿದೆ. ಸದ್ಯ, ಬಂದಿರುವ ಸಿಡಿಮದ್ದಿನ (ಗನ್‌ಪೌಡರ್)ಪುಡಿಯನ್ನು ಒಣಗಿಸಲಾಗುತ್ತಿದೆ. ಈಗ ಸಿಬ್ಬಂದಿ ಫಿರಂಗಿ ನಿರ್ವಹಣೆಯ ತಾಲೀಮಿನಲ್ಲಿ ನಿರತರಾಗಿದ್ದಾರೆ.

ಕುಶಾಲ ತೋಪು ಒಮ್ಮೆ ಸಿಡಿದ ನಂತರ ಮಿಂಚಿನ ವೇಗದಲ್ಲಿ ‘ಸಿಂಬ’ವನ್ನು ಬ್ಯಾರಲ್‌ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ತೆಗೆಯಬೇಕಿದೆ. ರಾಷ್ಟ್ರಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ 21 ಬಾರಿ ಕುಶಾಲತೋಪು ಸಿಡಿಸಬೇಕಿದೆ. ಇಷ್ಟು ಕಡಿಮೆ ಸೆಕೆಂಡುಗಳಲ್ಲಿ ಬ್ಯಾರಲ್‌ನ್ನು 21 ಬಾರಿ ಸ್ವಚ್ಛಗೊಳಿಸುವುದು ಸವಾಲಿನ ಕೆಲಸ. ಇದಕ್ಕಾಗಿ ನಿತ್ಯ ತಾಲೀಮು ನಡೆಯುತ್ತಿದೆ.

ಅಣಿಯಾಗುತ್ತಿದೆ ದರ್ಬಾರ್‌ ಸಭಾಂಗಣ!

ದಸರಾ ಮಹೋತ್ಸವದಲ್ಲಿ ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ಗೆ ಸಿದ್ಧತಾ ಕಾರ್ಯಗಳು ಭಾನುವಾರ ಆರಂಭವಾಗಿವೆ. ದರ್ಬಾರ್ ಸಭಾಂಗಣದ ಕಂಬಗಳನ್ನು ಸ್ವಚ್ಛಗೊಳಿಸುವುದು, ಕಸ ತೆಗೆಯುವುದು, ಬಣ್ಣ ಲೇಪನ ಮೊದಲಾದ ಕಾರ್ಯಗಳು ನಡೆಯುತ್ತಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು