ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜರ ದಸರಾ ನಾಡಹಬ್ಬವಾಯ್ತು...

Last Updated 24 ಸೆಪ್ಟೆಂಬರ್ 2019, 10:09 IST
ಅಕ್ಷರ ಗಾತ್ರ

ಮೈಸೂರು ದಸರಾಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ವಿಜಯನಗರದ ಅರಸರು ಆರಂಭಿಸಿದ ನವರಾತ್ರಿಯ ದಸರಾ ಸಂಭ್ರಮಕ್ಕೀಗ 409ರ ಸಡಗರ.

ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ‘ಸಿಂಹಾಸನ’ ಮೈಸೂರು ಸಂಸ್ಥಾನದ ಅರಸರಿಗೆ ಲಭಿಸಿತ್ತು. ಸಿಂಹಾಸನ ದೊರೆತ ವರ್ಷದಿಂದಲೂ ಒಡೆಯರ್ ನವರಾತ್ರಿಯ ದಸರಾ ಆಚರಿಸಿದ್ದರು. ಸಾಮ್ರಾಜ್ಯ ಟಿಪ್ಪು ಪಾಲಾದಾಗ ದಸರಾ ಆಚರಣೆಯನ್ನು ನಿಲ್ಲಿಸಿದ್ದರು.

ಟಿಪ್ಪುವಿನ ಮರಣದ ಬಳಿಕ ಮತ್ತೆ ರಾಜ್ಯ ಸಿಗುತ್ತಿದ್ದಂತೆ, ದಸರಾವನ್ನು ವೈಭವದಿಂದ ಜನರೊಟ್ಟಿಗೆ ಬೆರೆತು ಆಚರಿಸಿದ್ದರು. ಜನರು ಸಹ ಮಹಾರಾಜರ ಮೇಲಿನ ಪ್ರೀತಿಯಿಂದ ಅಷ್ಟೇ ಉತ್ಸುಕರಾಗಿ ಭಾಗಿಯಾಗಿ, ಉಡುಗೊರೆ–ಕಾಣಿಕೆ ಅರ್ಪಿಸುವುದು ಸಹಜವಾಗಿತ್ತು.

ಮೈಸೂರು ಸಂಸ್ಥಾನದ ಕೊನೇ ಅರಸ ಜಯಚಾಮರಾಜ ಒಡೆಯರ್‌ 1969ರವರೆಗೂ ದಸರಾ ಆಚರಿಸಿದ್ದರು. ಪೂರ್ವಿಕರ ಪರಂಪರೆಯನ್ನು ಚಾಚೂ ತಪ್ಪದೇ ಪಾಲಿಸಿ ದ್ದರು. ಇದೇ ಅರಸರ ಕೊನೇ ದಸರಾ.

ಆಗಿನ ಪ್ರಧಾನಿ ಇಂದಿರಾಗಾಂಧಿ ಬ್ಯಾಂಕ್‌ ರಾಷ್ಟ್ರೀಕರಣ ಗೊಳಿಸಿದ ಜತೆಯಲ್ಲೇ, ಮಾಜಿ ಮಹಾರಾಜರಿಗೆ ನೀಡುತ್ತಿದ್ದ ರಾಜಧನವನ್ನು 1969ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಿದರು. 1970ರ ಆಗಸ್ಟ್‌ನಲ್ಲಿ ಜಯಚಾಮರಾಜ ಒಡೆಯರ್‌, ‘ನಾನೀಗ ಮಾಜಿ ಮಹಾರಾಜ ಅಲ್ಲ. ನಾನೊಬ್ಬ ತೆರಿಗೆದಾರ. ಸಿಂಹಾಸನದ ಮೇಲೆ ಕೂತು ದಸರಾ ನಡೆಸುವುದು ಹಳೆಯ ಸಂಪ್ರದಾಯ. ನಾನು ಇನ್ಮುಂದೆ ಸಿಂಹಾಸನದ ಮೇಲೆ ಕೂತು ದಸರಾ ನಡೆಸುವುದಿಲ್ಲ’ ಎಂದು ಘೋಷಿಸಿದರು.

ಮೈಸೂರು ಅರಮನೆಯಲ್ಲಿದ್ದ ಸಿಂಹಾಸನವನ್ನು ತಾವು ವಾಸವಿದ್ದ ಅಂಬಾವಿಲಾಸ ಅರಮನೆಗೆ ಕೊಂಡೊಯ್ದರು. ಬದುಕಿರುವ ತನಕವೂ ಸಿಂಹಾಸನದ ಮೇಲೆ ಮತ್ತೆ ಎಂದೂ ಕೂರಲಿಲ್ಲ. ತಮ್ಮ ಬದಲು ಪರಂಪರೆ ಮುಂದುವರೆಸುವುದಕ್ಕಾಗಿ ಪಟ್ಟದ ಕತ್ತಿಯನ್ನು ಸಿಂಹಾಸನದಲ್ಲಿ ಪ್ರತಿಷ್ಠಾಪಿಸುತ್ತಿದ್ದರು ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್‌ ದಸರಾ ಪರಂಪರೆ ಬಗ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ನಾಡಹಬ್ಬ: ಸಿಂಹಾಸನದ ಮೇಲೆ ಕೂತು ದಸರಾ ನಡೆಸುವುದಿಲ್ಲ ಎಂಬ ಮಹಾರಾಜರ ಘೋಷಣೆ ಮೈಸೂರಿನ
ಜನರಲ್ಲಿ ತಳಮಳ ಸೃಷ್ಟಿಸಿತ್ತು. ಪರಂಪರೆಯ ಜತೆ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನೆಡೆಗೆ ಆಕರ್ಷಿಸುತ್ತಿದ್ದ ಉತ್ಸವವೊಂದಕ್ಕೆ ಇತಿಶ್ರೀ ಬಿದ್ದಂತಾಗಿತ್ತು. ಇದು ಕನ್ನಡ ಕ್ರಾಂತಿ ದಳದ ನಾ.ನಾಗಲಿಂಗಸ್ವಾಮಿ ಅವರನ್ನು ಚಿಂತಾಕ್ರಾಂತರನ್ನಾಗಿಸಿತ್ತು.

ಮೈಸೂರಿನ ಪ್ರಮುಖ ಆಕರ್ಷಣೆಯಾದ ದಸರಾ ಸ್ಥಗಿತಗೊಂಡರೆ, ಭವಿಷ್ಯ ಇರುವುದಿಲ್ಲ. ಯಾವ ಕಾರಣಕ್ಕೂ ಜಂಬೂಸವಾರಿ ನಿಲ್ಲಬಾರದು ಎಂಬ ತೀರ್ಮಾನಕ್ಕೆ ನಾ.ನಾಗಲಿಂಗಸ್ವಾಮಿ ಬಂದರು. ತಮ್ಮ ಸಂಘದ ಕಾರ್ಯದರ್ಶಿ ನಾಗಭೂಷಣ್ ತಿವಾರಿ, ಶಿವಶಂಕರ್ ಸೇರಿದಂತೆ ಅಗ್ರಹಾರದ ಲಿಂಗಾಯತ ಗುಂಪಿನ ಜತೆ ಸೇರಿಕೊಂಡು ವಿಜಯದಶಮಿ ದಿನ ಜಂಬೂಸವಾರಿ ನಡೆಸಲು ತೀರ್ಮಾನಿಸಿದ್ದರು.

ಅರಣ್ಯ ಇಲಾಖೆಯಿಂದ ಆನೆಯನ್ನು ಬಾಡಿಗೆಗೆ ತಂದರು. ಇರ್ವಿನ್ ರಸ್ತೆಯ ಮೌಲ್ಡ್‌ ರಾಜು ಬಳಿ ದೇವಿಯ ವಿಗ್ರಹ ಮಾಡಿಸಿ ಮರದ ಅಂಬಾರಿಯಲ್ಲಿ ಕೂರಿಸಿ, ಓಲಗ, ತಮಟೆ, ಮಂಗಳವಾದ್ಯದೊಂದಿಗೆ ಈಗಿನ ನೂರೊಂದು ಗಣಪತಿ ದೇಗುಲದಿಂದ, ಸರ್ಕಾರಿ ಆಯುರ್ವೇದ ಕಾಲೇಜಿನ ತನಕ ಮೆರವಣಿಗೆ ನಡೆಸುವ ಮೂಲಕ 1970ರಲ್ಲಿ ಮೊದಲ ಜನರ ನಾಡಹಬ್ಬ ಆಚರಿಸಿದರು.

ಇದು ಮೈಸೂರಿನ ಗಣ್ಯರಿಗೆ ಪ್ರೇರೇಪಣೆ ನೀಡಿತ್ತು. 1971ರಲ್ಲಿ ಆಗಿನ ಶಾಸಕ ಡಿ.ಜಯದೇವರಾಜ ಅರಸ್‌, ಜಾವಾ ಕಂಪನಿ ಅಧ್ಯಕ್ಷ ಎಫ್.ಕೆ.ಇರಾನಿ, ಮುನ್ಸಿಪಲ್ ಅಧ್ಯಕ್ಷ ಬಿ.ಸಿ.ಲಿಂಗಯ್ಯ ನೇತೃತ್ವದ ಸಮಿತಿ ಜಂಬೂಸವಾರಿಗೆ ಮುಂದಾಗಿತ್ತು.

ಹಿಂದಿನ ಬಾರಿಯ ಆನೆ, ಅಂಬಾರಿ ಬಳಸಿಕೊಂಡೇ, ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಕ್ರಾಫರ್ಡ್‌ ಓವಲ್ ಮೈದಾನದಿಂದ ರೇಸ್‌ಕೋರ್ಸ್‌ವರೆಗೆ ಮೆರವಣಿಗೆ ನಡೆಸಿದರು. ಈ ಬಾರಿ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಹುಡುಗರು ಭಾಗಿಯಾಗಿದ್ದರು ಎಂಬುದನ್ನು ಪ್ರೊ.ಪಿ.ವಿ.ನಂಜರಾಜ ಅರಸ್‌ ಅವರು ವಿವರಿಸುತ್ತಾರೆ. ಅಲ್ಲದೆ, ತಾವೂ ಭಾಗಿಯಾಗಿದ್ದನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.

ನಾಡಹಬ್ಬಕ್ಕೆ ಮುನ್ನುಡಿ ಬರೆದ ಅರಸು

ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮೈಸೂರಿನ ಬಹುತೇಕರು ದಸರಾದ ಪರಂಪರೆ ಮುಂದುವರೆಸುವಂತೆ ದುಂಬಾಲು ಬಿದ್ದರು. ಅರಸು ಸಹ ಒಲವು ತೋರಿದರು. ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲು ಮುನ್ನುಡಿ ಬರೆದರು.

ಮಹಾರಾಜರಿಂದ ಚಿನ್ನದ ಅಂಬಾರಿ ಪಡೆದರು. ಗಜಪಡೆ ಭಾಗಿಯಾಗುವಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಂಬಾರಿಯಲ್ಲಿ ಯಾವ ವಿಗ್ರಹ ಪ್ರತಿಷ್ಠಾಪಿಸಬೇಕು ಎಂಬ ಜಿಜ್ಞಾಸೆ ತಲೆದೋರಿದಾಗ, ಅಂತಿಮವಾಗಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯನ್ನೇ ಪ್ರತಿಷ್ಠಾಪಿಸುವ ನಿರ್ಧಾರ ತಳೆದರು.

ಅದರಂತೆಯೇ ಚೋಳ ಶೈಲಿಯಲ್ಲಿ ಚಾಮುಂಡೇಶ್ವರಿಯ ವಿಗ್ರಹ ರೂಪುಗೊಂಡಿತು. ಮೆರವಣಿಗೆಯಲ್ಲಿ ಪೊಲೀಸ್, ವಾದ್ಯವೃಂದ, ಎನ್‌ಸಿಸಿ ಸೇರಿದಂತೆ ಕಲಾ ತಂಡಗಳು ಭಾಗಿ ಯಾಗಿ ಮೆರುಗು ತುಂಬುವ ಯತ್ನ ನಡೆಸಿದವು. ಮತ್ತೆ ಅರಮನೆ ಅಂಗಳದಿಂದ ಬನ್ನಿಮಂಟಪಕ್ಕೆ ಜಂಬೂಸವಾರಿ ಹೊರಟಿತು. ಬನ್ನಿಪೂಜೆಯೂ ನಡೆಯಿತು. ಅರಮನೆಯ ದರ್ಬಾರ್‌ ಸಭಾಂಗಣದಲ್ಲೇ ಸರ್ಕಾರದ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ನಾಡಹಬ್ಬಕ್ಕೆ ದೇವರಾಜ ಅರಸು ಭಾಗಿಯಾಗಿ ನೂತನ ಸಂಪ್ರದಾಯವೊಂದಕ್ಕೆ ನಾಂದಿ ಹಾಕಿದರು.

1990ರ ದಶಕದಲ್ಲಿ ಅಂಬಾರಿಯಲ್ಲಿ ಕಂಗೊಳಿಸುವ ಚಾಮುಂಡೇಶ್ವರಿ ವಿಗ್ರಹವನ್ನು ಬದಲಿಸಲಾಯಿತು. ಚೋಳ ಶೈಲಿಯ ವಿಗ್ರಹ ತೆಗೆದು, ಈ ನೆಲದ ಹೊಯ್ಸಳ ಶೈಲಿಯ ನೂತನ ವಿಗ್ರಹ ರೂಪಿಸಿ, ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ ಎನ್ನುತ್ತಾರೆ ಇತಿಹಾಸ ತಜ್ಞರೂ ಆದ ನಂಜರಾಜ ಅರಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT