ಭಾನುವಾರ, ಏಪ್ರಿಲ್ 5, 2020
19 °C
ಬಾಡಿಗೆ ವಿವಾದ; ₹ 1 ಲಕ್ಷ ಮೌಲ್ಯದ ಟ್ರಾನ್ಸ್‌ಫಾರ್ಮರ್‌ಗೆ ಹಾನಿ

ಬೈಕ್‌ ಡಿಕ್ಕಿ: ಸೈಕಲ್ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವರುಣಾ: ಇಲ್ಲಿಗೆ ಸಮೀಪದ ಹುನಗನಹಳ್ಳಿ ಗೇಟ್‌ ಬಳಿ ಬೈಕ್ ಸವಾರ, ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ (45) ಎಂಬಾತ, ಶುಕ್ರವಾರ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೃಷ್ಣ ತಿ.ನರಸೀಪುರ ತಾಲ್ಲೂಕಿನ ಶಿವಪುರದವರು ಎನ್ನಲಾಗಿದೆ.

ಗುರುವಾರ ರಾತ್ರಿ ಕೃಷ್ಣ ತನ್ನ ಸೈಕಲ್‌ನಲ್ಲಿ ಚಲಿಸುತ್ತಿದ್ದಾಗ, ಹಿಂಬಂದಿಯಿಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಕೆಳಗೆ ಬಿದ್ದ ಸೈಕಲ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಷಯ ತಿಳಿದೊಡನೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಸ್ಪಂದಿಸದೆ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಬೈಕ್ ಸವಾರ ಯಾರು ಎಂಬುದು ತಿಳಿದು ಬಂದಿಲ್ಲ ಎಂದು ವರುಣಾ ಪೊಲೀಸರು ತಿಳಿಸಿದ್ದಾರೆ.

ಗೋಮಾಂಸ ಮಾರಾಟ: ಐವರ ಬಂಧನ

ಪಿರಿಯಾಪಟ್ಟಣ: ತಾಲ್ಲೂಕಿನ ಹಲಗನಹಳ್ಳಿ ಗ್ರಾಮದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಐವರನ್ನು ಬೆಟ್ಟದಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಹಲಗನಹಳ್ಳಿ ಗ್ರಾಮದ ಆಸೀಫ್ ಷರೀಫ್, ಭಾಷಾ, ಸಾದಿಕ್ ಪಾಷಾ, ರಫೀಕ್ ಅಹಮದ್ ಮತ್ತು ಅತ್ತರ್ ಪಾಷಾ ಬಂಧಿತರು.

ಇವರು ಹಲವು ವರ್ಷಗಳಿಂದ ಗ್ರಾಮದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ, ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮರಳು ಕಳ್ಳತನ: ಟ್ರಾಕ್ಟರ್ ವಶ

ಬೆಟ್ಟದಪುರ: ಇಲ್ಲಿಗೆ ಸಮೀಪದ ಸೂಳೆಕೋಟೆ ಗ್ರಾಮದ ಬಳಿಯ ಕಾವೇರಿ ನದಿಯಿಂದ ಮರಳನ್ನು ಕಳ್ಳತನದಿಂದ ತೆಗೆದು ಟ್ರಾಕ್ಟರ್‌ಗೆ ತುಂಬುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ಟ್ರಾಕ್ಟರ್ ವಶಪಡಿಸಿಕೊಂಡಿದ್ದು, ಆರೋಪಿ ಧರ್ಮ ಎಂಬಾತನನ್ನು ಬಂಧಿಸಿದ್ದಾರೆ.

ಮತ್ತೊಬ್ಬ ಆರೋಪಿ ಕುಮಾರ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಸ್ಕ್ ಆಸ್ತಿ ನಾಶ: ಆರೋಪಿ ನಾಪತ್ತೆ

ಹುಣಸೂರು: ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ತನಗೆ ಮೈಕ್‌ಸೆಟ್ ಬಾಡಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ತಂತಿ ಕತ್ತರಿಸಲಾಗಿದೆ.

ಗುರುವಾರ ರಾತ್ರಿ ಗ್ರಾಮದಲ್ಲಿ ಹರಿಕಥೆ ಹಮ್ಮಿಕೊಳ್ಳಲಾಗಿತ್ತು. ಈ ಗ್ರಾಮದಲ್ಲಿ ಇಬ್ಬರು ಮೈಕ್‌ಸೆಟ್ ವ್ಯವಹಾರ ನಡೆಸುತ್ತಿದ್ದು, ಒಬ್ಬನಿಗೆ ಬಾಡಿಗೆ ನೀಡಲಾಗಿತ್ತು. ಇದು ಮನಸ್ತಾಪಕ್ಕೆ ಕಾರಣವೂ ಆಗಿತ್ತು. ನಡು ರಾತ್ರಿ ಸೆಸ್ಕ್ ಇಲಾಖೆಗೆ ಸೇರಿದ ವಿದ್ಯುತ್ ತಂತಿಗೆ ಕಲ್ಲು ಕಟ್ಟಿ ಕತ್ತರಿಸಲಾಗಿದೆ. ಈ ಅವಘಡದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಇಲಾಖೆಗೆ ಸೇರಿದ ₹ 1 ಲಕ್ಷ ಬೆಲೆಯ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿದೆ ಎಂದು ಬನ್ನಿಕುಪ್ಪೆ ಸೆಸ್ಕ್ ವಿತರಣಾ ಕೇಂದ್ರದ ಎಂಜಿನಿಯರ್ ಚೆನ್ನಕೇಶವ ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆರೋಪಿ ಗ್ರಾಮದಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಕ್ರಷರ್ ಮೇಲೆ ದಾಳಿ

ಬೆಟ್ಟದಪುರ: ಗ್ರಾಮದ ಆಸುಪಾಸು ಪರವಾನಗಿ ಪಡೆಯದೆ, ನಡೆಸುತ್ತಿದ್ದ ಎರಡು ಕ್ರಷರ್ ಮೇಲೆ ದಾಳಿ ನಡೆಸಿರುವ ಜಿಲ್ಲಾ ಅಪರಾಧ ದಳದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‌ಎರಡೂ ಕ್ರಷರ್‌ನಲ್ಲಿ ದಾಖಲೆಗಳಿರಲಿಲ್ಲ. ಅಕ್ರಮ ನಡೆದಿತ್ತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಟ್ಟದಪುರ ಪೊಲೀಸರು ತಿಳಿಸಿದ್ದಾರೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಕ್ರಷರ್ ಮಾಲೀಕ ಮಂಜುನಾಥ್, ಹಸುವಿನ ಕಾವಲು ಸರ್ವೇ ನಂಬರ್ 439ರಲ್ಲಿ ಶ್ರೀ ಮಂಜುನಾಥ ಸ್ಟೋನ್ ಕ್ರಷರ್ ಹೊಂದಿರುವ ರಾಹುಲ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)