ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ಹಾಲು, ಉತ್ಪನ್ನಗಳಿಗೆ ಭಾರಿ ಬೇಡಿಕೆ

₹ 25 ಕೋಟಿ ವೆಚ್ಚದ 5000 ಲೀಟರ್ ಸಾಮರ್ಥ್ಯದ ಐಸ್‌ ಕ್ರೀಂ ಘಟಕ ಸ್ಥಾಪನೆ
Last Updated 16 ಮಾರ್ಚ್ 2020, 9:24 IST
ಅಕ್ಷರ ಗಾತ್ರ

ಮೈಸೂರು: ‘ನಂದಿನಿ ಹಾಲು ಹಾಗೂ ಉತ್ಪನ್ನಗಳಿಗೆ ಹೊರ ರಾಜ್ಯಗಳಿಂದಲೂ ಭಾರಿ ಬೇಡಿಕೆಯಿದೆ. ಇದನ್ನು ಪೂರೈಸಲಿಕ್ಕಾಗಿಯೇ ಯೋಜನೆ ರೂಪಿಸಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್‌)ದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ತಿಳಿಸಿದರು.

ಹೈನುಗಾರರು, ರೈತರು, ನಂದಿನಿ ಗ್ರಾಹಕರಿಗಾಗಿ ‘ಪ್ರಜಾವಾಣಿ–ಡೆಕ್ಕನ್‌ಹೆರಾಲ್ಡ್‌’ ಸೋಮವಾರ ಆಯೋಜಿಸಿದ್ದ ಫೋನ್‌ ಇನ್‌ನಲ್ಲಿ ಭಾಗಿಯಾದ ಅಶೋಕ್‌, ಜನರ ಸಮಸ್ಯೆಗಳನ್ನು ಆಲಿಸಿದರು. ರೈತರು, ಹೈನುಗಾರರಿಗೆ ಬೇಸಿಗೆಯಲ್ಲಿ ಹಸುಗಳ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಗ್ರಾಹಕರು ಹಾಗೂ ಹಾಲು ಉತ್ಪಾದಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಹಲವರಿಗೆ ತಮ್ಮ ಮೊಬೈಲ್ ನಂಬರ್ ನೀಡಿ, ನೇರವಾಗಿ ಭೇಟಿಯಾಗಲು ತಿಳಿಸಿದರು. ಫೋನ್‌ಇನ್‌ಗೆ ಕರೆಗಳ ಮಹಾಪೂರವೇ ಬಂದಿತು. ಎಲ್ಲ ಕರೆ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು, ಏಜೆನ್ಸಿ, ಪಾರ್ಲರ್‌ ಆರಂಭಿಸುವ ಕುರಿತಂತೆ ಕೇಳಿದ ಪ್ರಶ್ನೆಗಳಿಗೂ ಸವಿವರವಾದ ಉತ್ತರ ಹೇಳಿದರು.

ಸರ್ಕಾರ ಒಂದು ಲೀಟರ್ ಹಾಲಿಗೆ ನೀಡುವ ₹ 5 ಪ್ರೋತ್ಸಾಹ ಧನದ ಸಮಸ್ಯೆ ಸೇರಿದಂತೆ, ಹಾಲು ಉತ್ಪಾದಕರ ಸಂಘದೊಳಗಿನ ಸಮಸ್ಯೆಯನ್ನು ಆಲಿಸಿದರು. ಬಣ, ಗುಂಪುಗಾರಿಕೆ ಬಿಟ್ಟು ನಿಮ್ಮೂರಿನ ಎಲ್ಲರೂ ಒಟ್ಟಾಗಿ ಬಂದರೇ ಹೊಸ ಸಂಘ ಸ್ಥಾಪಿಸುವ ಜತೆ, ಹಲವು ಸೌಲಭ್ಯ ನೀಡುವುದಾಗಿಯೂ ಘೋಷಿಸಿದರು. ಇದೇ ಸಂದರ್ಭ ಒಕ್ಕೂಟದಿಂದ ನೀಡುವ ಸೌಲಭ್ಯಗಳನ್ನು ಕೇಳಿದವರಿಗೆ ವಿವರಿಸಿದರು.

ಐಸ್‌ಕ್ರೀಂಗೆ ಭಾರಿ ಬೇಡಿಕೆ: ‘ಮೈಸೂರಿನಲ್ಲಿ ನಿತ್ಯ 2000 ಲೀಟರ್ ಐಸ್‌ಕ್ರೀಂ ಖರ್ಚಾಗುತ್ತಿದೆ. ಗ್ರಾಹಕರ ಬೇಡಿಕೆಯಷ್ಟು ಪೂರೈಸಲಾಗುತ್ತಿಲ್ಲ. ಇದೀಗ ಹಾಸನ ಹಾಗೂ ಮದರ್ ಡೇರಿಯಿಂದ ಖರೀದಿಸಲಾಗುತ್ತಿದೆ. ನಮ್ಮ ಒಕ್ಕೂಟದಿಂದಲೇ ನಿತ್ಯವೂ 5000 ಲೀಟರ್ ಐಸ್‌ಕ್ರೀಂ ತಯಾರಿಕೆಯ ಸಾಮರ್ಥ್ಯದ ಘಟಕದ ನಿರ್ಮಾಣಕ್ಕೆ ₹ 25 ಕೋಟಿ ವೆಚ್ಚದ ಯೋಜನೆಯೊಂದನ್ನು ರೂಪಿಸಲಾಗಿದೆ’ ಎಂದು ಅಶೋಕ್ ಪ್ರಕಟಿಸಿದರು.

‘2020–21ನೇ ಸಾಲಿನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. 40ಕ್ಕೂ ಹೆಚ್ಚು ತರಹೇವಾರಿ ಐಸ್‌ಕ್ರೀಂ ಉತ್ಪಾದಿಸಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಆಲೋಚನೆ ನಮ್ಮ ಒಕ್ಕೂಟದ್ದಾಗಿದೆ’ ಎಂದು ಹೇಳಿದರು.

ಸಿಹಿ ತಿನಿಸು ತಯಾರಿಕೆ: ಮೈಮುಲ್‌ ಈಗಾಗಲೇ ಮೈಸೂರ್‌ ಪಾಕ್‌, ಪೇಡಾ, ಚಿಕ್ಕಿ ಲಾಡು, ಕೇಸರ್ ಬರ್ಫಿಯನ್ನು ತನ್ನ ಘಟಕದಲ್ಲೇ ತಯಾರಿಸುತ್ತಿದೆ. ನಂದಿನಿಯ ವಿವಿಧ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ, ಸಿಹಿ ತಿನಿಸು ತಯಾರಿಕಾ ಘಟಕ ನಿರ್ಮಾಣಕ್ಕೂ ಮುಂದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒಕ್ಕೂಟದ ಹಳೆ ಕಚೇರಿ ಕಟ್ಟಡವನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುವುದು. ₹ 5 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದು, ಆರಂಭದ ದಿನಗಳಲ್ಲಿ 10ಕ್ಕೂ ಹೆಚ್ಚು ಸಿಹಿ ತಿನಿಸು ತಯಾರಿಸುತ್ತೇವೆ. ಮಾರುಕಟ್ಟೆ ವಿಸ್ತರಣೆಯಾದಂತೆ, ಬೇಡಿಕೆ ಬಂದಂತೆ ಮತ್ತಷ್ಟು ತಿನಿಸು ತಯಾರಿಸುವ ನೀಲನಕ್ಷೆ ಮಾಡಿಕೊಳ್ಳುತ್ತೇವೆ. ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಮಾರ್ಚ್‌ 18ರ ಬುಧವಾರ ಬೆಂಗಳೂರಿನಲ್ಲಿ ಸಭೆ ಆಯೋಜಿಸಿದ್ದು, ಈ ಸಭೆಯಲ್ಲಿ ಪ್ರಸ್ತಾವ ಮಂಡಿಸಿ, ಅನುಮತಿ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.

ಸಿಹಿ ತಿನಿಸು 21 ದಿನ ತನ್ನ ಗುಣಮಟ್ಟದ ಜತೆ ಸ್ವಾದಿಷ್ಟತೆಯನ್ನು ಕಾಪಾಡಿಕೊಳ್ಳುವ ಅತ್ಯಾಧುನಿಕ ಮ್ಯಾಪ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಮೊದಲು ಮೈಸೂರು ಪಾಕ್ ತಯಾರಿಕೆಯಲ್ಲಿ ಈ ತಂತ್ರಜ್ಞಾನ ಬಳಸಿಕೊಳ್ಳುತ್ತೇವೆ ಎಂದು ಅಶೋಕ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚೆನ್ನೈಗೆ ನಿತ್ಯವೂ 35 ಸಾವಿರ ಲೀಟರ್ ಹಾಲು

ತಮಿಳುನಾಡಿನ ಚೆನ್ನೈನಿಂದ ನಿತ್ಯ 60 ಸಾವಿರ ಲೀಟರ್ ಹಾಲಿಗೆ ಬೇಡಿಕೆಯಿದೆ. ಮಾರ್ಚ್‌ 1ರಿಂದ 35 ಸಾವಿರ ಲೀಟರ್ ಹಾಲನ್ನು ಪೂರೈಸಲಾಗುತ್ತಿದೆ. ನಂದಿನಿ ಬ್ರಾಂಡ್ ಹಾಲಿಗೆ ಅಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. 2021ರ ಮಾರ್ಚ್‌ ಅಂತ್ಯಕ್ಕೆ 1 ಲಕ್ಷ ಲೀಟರ್ ಹಾಲು ಪೂರೈಸುವ ಗುರಿ ಹೊಂದಲಾಗಿದೆ ಎಂದು ಅಶೋಕ್‌ ತಿಳಿಸಿದರು.

ಕೇರಳದ ವಿವಿಧ ಭಾಗದಿಂದ ನಿತ್ಯವೂ 50ಸಾವಿರ ಲೀಟರ್ ಬಲ್ಕ್‌ ಹಾಲಿಗೆ ಬೇಡಿಕೆಯಿದೆ. ಪ್ರಸ್ತುತ ನಮ್ಮ ಒಕ್ಕೂಟದಿಂದ 20 ಸಾವಿರ ಲೀಟರ್ ಹಾಲನ್ನು ಮಾತ್ರ ಕಳಿಸಿಕೊಡಲಾಗುತ್ತಿದೆ. ಎರಡೂ ರಾಜ್ಯಗಳಿಂದ ಸಾಕಷ್ಟು ಬೇಡಿಕೆಯಿದೆ. ಈ ಬೇಡಿಕೆ ಪೂರೈಕೆಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಕಲಬೆರಕೆ ತಡೆಗಟ್ಟಲು ಕ್ರಮ

ಹಾಲಿಗೂ ಕಲಬೆರಕೆ ನಡೆಯಲಿದೆ. ಇದನ್ನು ತಡೆಗಟ್ಟಲು ಒಕ್ಕೂಟ ಕಠಿಣ ಕ್ರಮ ತೆಗೆದುಕೊಂಡಿದೆ. ಮೈಸೂರು ಜಿಲ್ಲೆಯಾದ್ಯಂತ 135 ಬಲ್ಕ್‌ ಮಿಲ್ಕ್‌ ಕೂಲರ್ ಆರಂಭಿಸಿದೆ. ಇದರಿಂದಾಗಿ ಕ್ಯಾನ್‌ಗಳಲ್ಲಿ ಒಕ್ಕೂಟಕ್ಕೆ ಹಾಲು ಬರುವುದು ನಿಂತಿದೆ.

ಹೈನುಗಾರ ಸೊಸೈಟಿಗೆ ನೀಡುವ ಹಾಲು ಸಮೀಪದ ಬಲ್ಕ್‌ ಮಿಲ್ಕ್‌ ಕೂಲರ್‌ (ಬಿಎಂಸಿ)ನಲ್ಲೇ ಸಂಗ್ರಹಗೊಂಡು 3 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಿಲ್ಡ್‌ ಆಗಲಿದೆ. ಈ ಹಾಲನ್ನು ಟ್ಯಾಂಕರ್ ಮೂಲಕ ಒಕ್ಕೂಟಕ್ಕೆ ತರಲಾಗುವುದು. ಗುಣಮಟ್ಟ ಹಾಳಾಗದಂತೆ ಕಾಪಾಡಿಕೊಳ್ಳಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಮೈಮುಲ್‌ನ ನೂತನ ಯೋಜನೆಗಳು

* ಮೈಸೂರು ಅರಮನೆ ಮುಂಭಾಗ ₹ 20 ಲಕ್ಷ ವೆಚ್ಚದಲ್ಲಿ ಪಾರ್ಲರ್‌ ನಿರ್ಮಾಣ

* ಚಾಮುಂಡಿ ಬೆಟ್ಟದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಮಿಲ್ಕ್‌ ಗೆಲಾಕ್ಸಿ ನಿರ್ಮಾಣ

* ಬೋಗಾದಿ, ಹಿನಕಲ್‌ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಮಿಲ್ಕ್‌ ಗ್ಯಾಲಕ್ಸಿ ಸ್ಥಾಪನೆ

* ಹೊಸ ಬಡಾವಣೆ, ಪ್ರದೇಶಗಳಲ್ಲಿ ನಂದಿನಿ ಮಿಲ್ಕ್‌ ಪಾರ್ಲರ್ ಆರಂಭ

* ಹಾಲು ಉತ್ಪಾದಕರ ಹೊಸ ಸಂಘಗಳ ಸ್ಥಾಪನೆ

* ಮುಂದಿನ ಐದು ವರ್ಷಗಳಲ್ಲಿ ಪಾರ್ಲರ್‌ಗಳಿಗೆ ಹೊಸ ಸ್ವರೂಪ

ಒಕ್ಕೂಟದ ಹಾಲಿನ ವಹಿವಾಟು

1090 ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾಚರಣೆ

2.16 ಲಕ್ಷ ಸದಸ್ಯರು ಒಕ್ಕೂಟದಲ್ಲಿ

90 ಸಾವಿರಕ್ಕೂ ಹೆಚ್ಚು ಸದಸ್ಯರಿಂದ ನಿತ್ಯ ಹಾಲು ಪೂರೈಸುವಿಕೆ

4.80 ಲಕ್ಷ ಲೀಟರ್ ಹಾಲು ಸಂಗ್ರಹ ಪ್ರಸ್ತುತ ನಿತ್ಯವೂ

2.40 ಲಕ್ಷ ಲೀಟರ್ ಹಾಲು ಮಾರಾಟ

50 ಸಾವಿರ ಲೀಟರ್ ಮೊಸರು ಮಾರಾಟ

60 ಸಾವಿರ ಲೀಟರ್ ಹಾಲು ಹಾಲಿನ ಪುಡಿ ತಯಾರಿಕೆಗೆ

1 ಲಕ್ಷ ಲೀಟರ್ ಹಾಲು ಮದರ್ ಡೇರಿಗೆ ಮಾರಾಟ

250 ಟನ್ ತುಪ್ಪ ತಯಾರಿಕೆ ತಿಂಗಳಿಗೆ

300 ಕೆ.ಜಿ. ಮೈಸೂರ್ ಪಾಕ್ ತಯಾರಿಕೆ ನಿತ್ಯವೂ

ಆಧಾರ: ಮೈಮುಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT