ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿ ದರ್ಶನ: ಸಚಿವ–ಸಂಸದರಿಗಷ್ಟೇ ಸೀಮಿತ

ಪಾಲನೆಯಾಗದ ಕೋವಿಡ್–19 ಆದೇಶ: ಚುನಾಯಿತ ಜನಪ್ರತಿನಿಧಿಗಳಿಂದಲೇ ಉಲ್ಲಂಘನೆ ?
Last Updated 17 ಜುಲೈ 2020, 16:48 IST
ಅಕ್ಷರ ಗಾತ್ರ

ಮೈಸೂರು: ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಭಾಗ್ಯ, ಕೊರೊನಾ ವೈರಸ್ ಹರಡುವಿಕೆಯ ಆತಂಕದಿಂದ ಈ ಬಾರಿ ಅಸಂಖ್ಯಾತ ಭಕ್ತ ಗಣಕ್ಕೆ ಲಭಿಸಲಿಲ್ಲ.

ವೈರಸ್‌ನ ಸೋಂಕು ಹರಡುವಿಕೆ ತಡೆಗಟ್ಟಲಿಕ್ಕಾಗಿ ಮೈಸೂರು ಜಿಲ್ಲಾಡಳಿತ ಆಷಾಢ ಮಾಸದ ಮಂಗಳವಾರ, ಶುಕ್ರವಾರ, ಶನಿವಾರ, ಭಾನುವಾರ ಹಾಗೂ ಚಾಮುಂಡೇಶ್ವರಿಯ ವರ್ಧಂತಿಯಂದು ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿತ್ತು. ಇದನ್ನು ದೇವಿ ಭಕ್ತ ಸಮೂಹ ಚಾಚೂ ತಪ್ಪದೇ ಪಾಲಿಸಿತು.

ಆದರೆ ಸಚಿವ, ಸಂಸದರು, ಶಾಸಕರು ಮಾತ್ರ ಆಷಾಢ ಶುಕ್ರವಾರದಂದು ಜಿಲ್ಲಾಡಳಿತದ ನಿಷೇಧವನ್ನು ಲೆಕ್ಕಿಸದೆ ಬೆಟ್ಟಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಆಷಾಢ ಮಾಸದ ಮೂರನೇ ಶುಕ್ರವಾರ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪಸಿಂಹ, ನಟ ದರ್ಶನ್‌ ಭೇಟಿ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು.

ಇದರ ಬೆನ್ನಿಗೆ ಕೊನೆ ಶುಕ್ರವಾರದಂದು ಸಂಸದೆ ಶೋಭಾ ಕರಂದ್ಲಾಜೆ ಬೆಟ್ಟದ ಮೆಟ್ಟಿಲು ಹತ್ತಿ ದೇವಿ ದರ್ಶನ ಪಡೆದರು. 20 ನಿಮಿಷವಿದ್ದರು. ಶಾಸಕ ಎಲ್.ನಾಗೇಂದ್ರ ಸಹ ದರ್ಶನಕ್ಕೆ ಬಂದಿದ್ದರು ಎಂದು ದೇಗುಲದ ಅರ್ಚಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾತಿನ ಚಕಮಕಿ: ಬೆಟ್ಟಕ್ಕೆ ತೆರಳುತ್ತಿದ್ದ ಸ್ಥಳೀಯರನ್ನು ಪೊಲೀಸರು ತಡೆದರು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು.

‘ನಾವು ನಿಮ್ಮ ಬಾಯಿಗೆ ಹೆದರಲ್ಲ. ನಮ್ಮ ಜೊತೆ ಬನ್ನಿ. ಬೆಟ್ಟದಲ್ಲಿನ ಮನೆಗೆ ಕರೆದೊಯ್ಯುತ್ತೇವೆ. ಗುರುತಿನ ಕಾರ್ಡ್‌ ಇದ್ದರೂ ಏಕೆ ಬಿಡುತ್ತಿಲ್ಲ. ನಾವ್ ವೋಟ್ ಹಾಕಿರೋದಕ್ಕೆ ಅವ್ರು ಎಂಪಿ, ಎಂಎಲ್‌ಎ ಆಗಿರೋದು. ನಾವಿದ್ದರೇ ಅವ್ನು. ನಮಗೂ ಮರ್ಯಾದೆಯಿದೆ. ಅವರನ್ನಷ್ಟೇ ಏಕೆ ಬಿಡ್ತೀರಿ’ ಎಂದು ಮಹಿಳೆಯೊಬ್ಬರು ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡರು. ಪೊಲೀಸರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

‘ನಾವೂ ಚುನಾಯಿತ ಜನಪ್ರತಿನಿಧಿಯೇ. ರೂಲ್ಸ್‌ ಎಲ್ಲರಿಗೂ ಒಂದೇ ಇರಲಿ. ಎಂಎಲ್‌ಎ, ಎಂಪಿ ಮಾತ್ರ ಚುನಾಯಿತರಾ ?’ ಎಂದು ಪಾಲಿಕೆ ಸದಸ್ಯೆ ಭಾಗ್ಯಮ್ಮ ಮಾದೇಶ್‌ ಪೊಲೀಸರ ವಿರುದ್ಧ ಹರಿಹಾಯ್ದರು.

ಸಿಂಹವಾಹಿನಿ ಅಲಂಕಾರದಲ್ಲಿ ಚಾಮುಂಡಿ

ನಾಡದೇವತೆ ಚಾಮುಂಡೇಶ್ವರಿಗೆ ಆಷಾಢ ಮಾಸದ ಕೊನೆ ಶುಕ್ರವಾರದ ವಿಶೇಷ ಪೂಜೆಯೂ ಸಂಪ್ರದಾಯದಂತೆ ನೆರವೇರಿತು.

ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ನಸುಕಿನ 4.30ರಿಂದಲೇ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಿತು. ಸಿಂಹವಾಹಿನಿ ಅಲಂಕಾರ ಮಾಡಿತು. ನಂತರ ದೇವಸ್ಥಾನದ ಒಳ ಆವರಣದಲ್ಲೇ ಅಮ್ಮನವರ‌ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ಸಂಜೆ 6 ಗಂಟೆಯಿಂದ 7.30ರವರೆಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ನಡೆಯಿತು. 7.45ಕ್ಕೆ ದೇಗುಲದ ಬಾಗಿಲು ಮುಚ್ಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT