ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಕ್ತಿಯಿಂದ ಸಮಾಜ ಸುಧಾರಣೆ’

ದೆಹಲಿ ವಿಶ್ವವಿದ್ಯಾಲಯದ ಪ್ರೊ.ಟಿ.ಎಸ್‌.ಸತ್ಯನಾಥ್‌ ಅಭಿಮತ
Last Updated 3 ಆಗಸ್ಟ್ 2021, 4:35 IST
ಅಕ್ಷರ ಗಾತ್ರ

ಮೈಸೂರು: ‘ಭಕ್ತಿ ಎಂಬುದು ಬಹು ಮಾಧ್ಯಮದ ಅಭಿವ್ಯಕ್ತಿ. ಭಾಷೆ, ಕಲೆ, ರಾಗ–ಸಂಗೀತದ ಬೆಳವಣಿಗೆಯ ಜೊತೆಗೆ ಸಮಾಜ ಸುಧಾರಣೆಗೂ ಕೊಡುಗೆ ನೀಡಿದೆ’ ಎಂದು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಟಿ.ಎಸ್‌.ಸತ್ಯನಾಥ್‌ ಹೇಳಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಸೋಮವಾರ ಆರಂಭಿಸಿರುವ ಸರಣಿ ವೆಬಿನಾರ್‌ನಲ್ಲಿ ‘ಭಕ್ತಿ: ಒಂದು ದೂರದ ಓದು’ ಕುರಿತು ಅವರು ಮಾತನಾಡಿದರು.

‘ದಕ್ಷಿಣ ಭಾರತದ ಭಕ್ತಿ ಪರಂಪರೆಯು ಸಾಹಿತ್ಯ ಹಾಗೂ ಸಂಗೀತಕ್ಕೆ ಚಲನಶೀಲತೆ ತಂದುಕೊಟ್ಟು ದೇಶದಾದ್ಯಂತ ವಿಸ್ತರಿಸಿಕೊಂಡಿತು. ಭಕ್ತಿ ಸಾಹಿತ್ಯವನ್ನು ಭೌಗೋಳಿಕ ಹಿನ್ನೆಲೆ, ಕಾಯಕ, ಸಮಾಜದ ಸ್ಥರಗಳು ಪ್ರಭಾವಿಸಿವೆ. ತಮಿಳುನಾಡಿನ ಆಳ್ವಾರರು– ನಾಯನಾರರು ಕೃಷಿಕರು. ಕನ್ನಡದ ವಚನಕಾರರು, ದಾಸರು ಕುಶಲಕರ್ಮಿಗಳಾಗಿದ್ದರಿಂದ ಸಾಹಿತ್ಯ ದೇಹಕೇಂದ್ರಿತವಾಗಿದ್ದರಿಂದ ಜಂಗಮ ತತ್ವಕ್ಕೆ ಮಹತ್ವ ದೊರಕಿತ್ತು’ ಎಂದು ಮಾಹಿತಿ ನೀಡಿದರು.

ಶಾಸ್ತ್ರೀಯ ಅಧ್ಯಯನ ಕೇಂದ್ರದ ಶಾಸ್ತ್ರೀಯ ಭಾಷೆಗಳ ಮುಖ್ಯಸ್ಥ ಪ್ರೊ.ಪಿ.ಆರ್‌.ಧರ್ಮೇಶ್‌ ಫರ್ನಾಂಡಿಸ್‌ ಮಾತನಾಡಿ, ‘ಭಕ್ತ ಪಂಥಗಳು ಸಾಮಾಜಿಕ ಕ್ರಾಂತಿಗೆ ದಾರಿ ತೋರಿದ್ದಲ್ಲದೆ, ಜನಭಾಷೆಗಳಿಗೆ ಜೀವ ತುಂಬಿದವು. ಸಾಮಾನ್ಯರ ಕಷ್ಟಗಳಿಗೆ ದನಿಯಾದವು. ಆಸ್ಥಾನ ಭಾಷೆಗಳನ್ನು ತ್ಯಜಿಸಿ ಆಡು ಭಾಷೆಗಳಲ್ಲಿ ಸಾಹಿತ್ಯ ಹೊಮ್ಮಿಸಿದವು’ ಎಂದರು.

‘ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಮೀರುವ ಹಾಗೂ ದೇವರನ್ನು ಕಾಯಕ ಭಕ್ತಿಯಿಂದಲೇ ತಲುಪುವ ಸ್ವಾತಂತ್ರ್ಯವನ್ನು ಭಕ್ತಿ ಚಳವಳಿಗಳು ಕಟ್ಟಿಕೊಟ್ಟವು’ ಎಂದು ಅವರು ಬಣ್ಣಿಸಿದರು.

ಉಪನ್ಯಾಸ ಸರಣಿಗೆ ಸಿಐಐಎಲ್‌ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್‌ ಚಾಲನೆ ನೀಡಿದರು. ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ, ಹಿರಿಯ ಫೆಲೋ ಡಾ.ಆರ್‌.ಚಲಪತಿ ಇದ್ದರು.

‘ಸಂಗೀತ– ಕಲೆಯಿಂದ ಸಾಹಿತ್ಯದ ಉಳಿವು’: ‘19ನೇ ಶತಮಾನದ ನಂತರವೇ ಹಾಡು ಹಾಗೂ ಜಾನಪದ ನಾಟಕಗಳಲ್ಲಿ ಇದ್ದ ಭಕ್ತಿ ರಚನೆಗಳು ಲಿಖಿತ ರೂಪಕ್ಕೆ ಬಂದವು. ಹೀಗಾಗಿ ಸಂಗೀತ– ನಾಟಕಗಳು ಭಕ್ತಿ ಸಾಹಿತ್ಯದ ಉಳಿವಿಗೆ ಕಾರಣ. ಅಲ್ಲದೆ, ಹಾಡು– ಸಂಗೀತವನ್ನು ಉಳಿಸಿದ್ದು ಕೆಳ ವರ್ಗದ ಜಾತಿಗಳು ಹಾಗೂ ಸ್ತ್ರೀಯರು’ ಎಂದು ಪ್ರೊ.ಟಿ.ಎಸ್‌.ಸತ್ಯನಾಥ್‌ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT