ಶನಿವಾರ, ಜುಲೈ 31, 2021
26 °C

ಸಾವಿನ ಮನೆಯಲ್ಲೂ ಭ್ರಷ್ಟಾಚಾರ: ಧ್ರುವನಾರಾಯಣ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೊರೊನಾ ಸಂಕಷ್ಟದ ಸಮಯದಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಾವಿನ ಮನೆಯಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ಇಲ್ಲಿರುವುದು ಭಂಡ ಸರ್ಕಾರ’ ಎಂದು ಕಾಂಗ್ರೆಸ್‌ ಮುಖಂಡ ಆರ್‌.ಧ್ರುವನಾರಾಯಣ ಟೀಕಿಸಿದರು.

ಕೊರೊನಾ ಸಂಕಷ್ಟದ ಸಮಯವನ್ನೇ ಲಾಭವಾಗಿ ಬಳಸಿಕೊಂಡು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಈಗ ಯಾರೂ ಬೀದಿಗಿಳಿದು ಪ್ರತಿಭಟನೆ ನಡೆಸುವಂತಿಲ್ಲ. ಉದ್ದೇಶಪೂರ್ವಕವಾಗಿ ಕೊರೊನಾ ಅವಧಿಯನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಹರಿಹಾಯ್ದರು.

ಕಾಯ್ದೆ ತಿದ್ದುಪಡಿ ವಿರುದ್ಧ ಕಾಂಗ್ರೆಸ್‌ ಪಕ್ಷ ಮೊದಲ ದಿನದಿಂದಲೂ ಪ್ರತಿಭಟನೆ ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕ್ರಾಂತಿಕಾರಕ ಕಾಯ್ದೆಯ ತಿದ್ದುಪಡಿಗೆ ಮುನ್ನ ಸಾಕಷ್ಟು ಚರ್ಚೆ ಆಗಬೇಕಿತ್ತು. ರೈತ ಸಂಘಟನೆಗಳ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು. ಆದರೆ, ಈಗಿನ ಸರ್ಕಾರ ಯಾವುದೇ ಅಭಿಪ್ರಾಯಗಳಿಗೆ ಅವಕಾಶ ನೀಡುತ್ತಿಲ್ಲ. ವಿರೋಧ ಪಕ್ಷಗಳನ್ನು ಕಡೆಗಣಿಸುತ್ತಿದೆ ಎಂದು ದೂರಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭೂ ಮಾಫಿಯಾದವರ ಒತ್ತಡಕ್ಕೆ ಮಣಿದಿದ್ದಾರೆ. ಕೃಷಿಗೆ ಒತ್ತು ನೀಡಬೇಕಿದ್ದ ಸಮಯದಲ್ಲೇ ಈ ಕಾಯ್ದೆ ಜಾರಿಗೆ ತಂದಿರುವುದು ದುರದೃಷ್ಟಕರ ಎಂದರು.

‘ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಬೇಕು. ಆದರೆ ಮನುಷ್ಯತ್ವವೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದು ದುರದೃಷ್ಟಕರ. ಕೋವಿಡ್‌ನಿಂದ ಸಾಕಷ್ಟು ತೊಂದರೆ ಉಂಟಾಗಿದ್ದು, ಎಲ್ಲರೂ ಸರ್ಕಾರದ ಪರ ನಿಲ್ಲಬೇಕು ಎನ್ನುತ್ತಾರೆ. ಇವರು ನಡೆಸುತ್ತಿರುವ ಭ್ರಷ್ಟಾಚಾರವನ್ನು ನೋಡಿ ಸುಮ್ಮನಿರಬೇಕೇ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್, ಕಾಂಗ್ರೆಸ್‌ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಶಿವಣ್ಣ, ಮಂಜುನಾಥ್‌, ಗೋಪಿನಾಥ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.