ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಅಭಿವೃದ್ಧಿ ಕುರಿತು ಚರ್ಚೆ; ಸಂಸದ ಪ್ರತಾಪ ಸಿಂಹಗೆ ಲಕ್ಷ್ಮಣ ಪಂಥಾಹ್ವಾನ

29ರಂದು ಕಚೇರಿ ಬಳಿಗೆ ಹೋಗುವೆ ಎಂದ ಕೆಪಿಸಿಸಿ ವಕ್ತಾರ
Last Updated 25 ಜೂನ್ 2022, 13:17 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿಗೆ ನೀಡಿದ ಕೊಡುಗೆಗಳು ಮತ್ತು ಬಿಜೆಪಿ ಸಂಸದ ಪ್ರತಾಪ ಸಿಂಹ 8 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಗಳೇನು ಎಂಬುದನ್ನು ಬಹಿರಂಗವಾಗಿ ಚರ್ಚಿಸಲು ಜೂನ್‌ 29ರಂದು ಸಂಸದರ ಸರ್ಕಾರಿ ಕಚೇರಿ ಬಳಿಗೆ ದಾಖಲೆ ಸಮೇತ ಹಾಜರಾಗುತ್ತೇನೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ದಿನಾಂಕ ನಿಗದಿಪಡಿಸುವಂತೆ ಸಂಸದರಿಗೆ ವಾರ ಗಡುವು ನೀಡಿದ್ದೆ. ಅವರು ದಿನಾಂಕ–ಸ್ಥಳ ತಿಳಿಸದಿದ್ದರಿಂದ ನಾನೇ ಹೋಗುತ್ತಿದ್ದೇನೆ. ಅಂದು ಬೆಳಿಗ್ಗೆ ಟೆಂಪೊದಲ್ಲಿ ಟೇಬಲ್ ಮತ್ತು 2 ಕುರ್ಚಿಗಳನ್ನು ಒಯ್ಯುತ್ತೇನೆ. ಏಕಾಂಗಿಯಾಗಿ ಚರ್ಚೆಗೆ ಸಿದ್ಧವಿದ್ದೇನೆ. ಸಂಸದರು ದಂಡಿನೊಂದಿಗೆ ಬರಲಿ’ ಎಂದು ಪಂಥಾಹ್ವಾನ ನೀಡಿದರು.

‘ಸುಳ್ಳೇ ಅವರ ಮನೆ ದೇವರಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಮಂಜೂರಾದ ಯೋಜನೆಗಳನ್ನು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಡಬಲ್‌ ಎಂಜಿನ್ ಸರ್ಕಾರ ಮಾಡಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮೈಸೂರು ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸಂಸದರ ಹೆಸರನ್ನೇ ಪ್ರಸ್ತಾಪಿಸಲಿಲ್ಲ. ಸಂಸದರ ವಿರೋಧಿ, ಶಾಸಕ ಎಸ್‌.ಎ.ರಾಮದಾಸ್‌ ಅವರಿಗೆ ಪ್ರೀತಿಯಿಂದ ಗುದ್ದು ಕೊಟ್ಟು ಸಲುಗೆ ತೋರಿದರು. ಇದು ನೀಡಿದ ಸಂದೇಶವೇನು?’ ಎಂದು ಕೇಳಿದರು.

‘ವಿಧಾನಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಪ್ರಧಾನಿ ಮೋದಿ ಅವರಿಗೆ ಉಡುಗೊರೆ ಕೊಡಬೇಕು ಎಂದಿದ್ದಿರಿ. ಅದು ಸಾಧ್ಯವಾಯಿತೇ? ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸರ್ಕಾರ ಬರುತ್ತದೆ. ಜಿಲ್ಲೆಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಎಸ್.ಟಿ. ಸೋಮಶೇಖರ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿದರೆ 11 ಸ್ಥಾನಗಳಲ್ಲೂ ಗೆಲ್ಲುತ್ತೇವೆ’ ಎಂದರು.

‘ಮೋದಿ ಭೇಟಿ ಹಿನ್ನೆಲೆಯಲ್ಲಿ ಸುಣ್ಣ–ಬಣ್ಣ ಮಾಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಸಂಸದ ಪ್ರತಾಪ–ಶಾಸಕ ರಾಮದಾಸ್ ನಡುವೆ ಕ್ರೆಡಿಟ್‌ ವಾರ್‌ಗೂ ಸಾಕ್ಷಿಯಾಯಿತಷ್ಟೆ’ ಎಂದು ಟೀಕಿಸಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಮೂರ್ತಿ, ಮುಖಂಡ ಬಿ.ಎಂ. ರಾಮು, ಕಾರ್ಯದರ್ಶಿ ಶಿವಣ್ಣ, ವಕ್ತಾರ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT